

ಕೊಳ್ಳೇಗಾಲ: ಪಟ್ಟಣದ ಮುಡಿಗುಂಡದ ಸಮೀಪವಿರುವ ಸುವರ್ಣಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊನ್ನಹೊಳೆ ಸೇತುವೆಯನ್ನು ಮಂಗಳವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ವೀಕ್ಷಣೆ ಮಾಡಿದರು.
ಈ ಬಾರಿ ಅಧಿಕ ಮಳೆಯಾಗುವ ಸಂಭವವಿರುವುದರಿಂದ ಸೇತುವೆಯ ಸ್ಥಿತಿ ಹೇಗಿದೆ. ಅದರ ಸಾಮರ್ಥ್ಯ, ಅಗಲ, ಉದ್ದ ಮತ್ತು ಎತ್ತರವನ್ನು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು. ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ 3 ದಿನದಲ್ಲಿ ಸೇತುವೆ ಸಾಮರ್ಥ್ಯ, ಗುಣಮಟ್ಟವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ದಿನವಿಡೀ ವಾಹನಗಳು ಸಂಚರಿಸುವುದರಿಂದ ಸೇತುವೆ ಅಪಾಯದ ಸ್ಥಿತಿಯಲ್ಲಿದ್ದರೆ ಹಾಗೂ ಅದರ ಸಾಮರ್ಥ್ಯ ಕುಂದಿದ್ದರೆ, ದುರಸ್ತಿ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ನೂತನ ಸೇತುವೆಗೆ ಒತ್ತಾಯ:
ಕೊಳ್ಳೇಗಾಲ ಹಿಂದೆ ಕೊಯಮತ್ತೂರು ಜಿಲ್ಲೆಗೆ ಸೇರಿದ್ದ ಸಂದರ್ಭ ಅಂದರೆ 1934ರಲ್ಲಿ ಮುಡಿಗುಂಡ ಸೇತುವೆ ನಿರ್ಮಾಣವಾಗಿದೆ. ಇದೀಗ ಸೇತುವೆ ಸುಮಾರು 90 ವರ್ಷಗಳನ್ನು ಪೂರೈಸಿದೆ. ಬೆಂಗಳೂರು-ತಮಿಳುನಾಡಿನ ದಿಂಡಿಗಲ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ(209) ಆಗಿದ್ದು, ದಿನವಿಡೀ ಭಾರಿ ಗಾತ್ರದ ವಾಹನದ ಪ್ರಯಾಣವೇ ಹೆಚ್ಚಾಗಿದೆ. ಕಿರಿದಾದ ಸೇತುವೆ ಆದ ಕಾರಣ ಒಂದು ವಾಹನ ಸೇತುವೆಯಲ್ಲಿ ಸಂಚರಿಸಿದ ನಂತರವೇ ಮತ್ತೊಂದು ವಾಹನಕ್ಕೆ ಅವಕಾಶವಿರುತ್ತದೆ. ಅಲ್ಲದೆ ಆಗಾಗ್ಗೆ ಸೇತುವೆ ಮೇಲೆ ವಾಹನಗಳು ಸಿಲುಕಿಕೊಂಡು ಗಂಟೆಗಟ್ಟಲೆ ವಾಹನದಟ್ಟಣೆ ಆಗಿರುವ ಉದಾಹರಣೆ ಸಹ ಸಾಕಷ್ಟಿದೆ. ಇವೆಲ್ಲದರ ಕಾರಣ ಏಕಕಾಲದಲ್ಲಿ ಎರಡ್ಮೂರು ವಾಹನಗಳು ಸಂಚರಿಸಬಹುದಾದ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ತಹಸೀಲ್ದಾರ್ ಮಂಜುಳಾ, ಆರ್.ಐ ನಿರಂಜನ್, ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್ ಡೈರೆಕ್ಟರ್ ರಾಹುಲ್ ಕುಮಾರ್ ಗುಪ್ತ ಇದ್ದರು.
ಮಳೆಗಾಲ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮುಡಿಗುಂಡ ಸೇತುವೆ ವೀಕ್ಷಣೆ ಮಾಡಿದ್ದೇನೆ. ಅದರ ಗುಣಮಟ್ಟ ಹಾಗೂ ಸಾಮರ್ಥ್ಯ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸದ್ಯ ಸೇತುವೆ ಅಪಾಯದ ಸ್ಥಿತಿಯಲ್ಲಿದ್ದರೆ ದುರಸ್ತಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸುವ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲು ಕ್ರಮವಹಿಸಲಾಗುವುದು.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ