ದುಸ್ಥಿತಿಯಲ್ಲಿ ಹಳೇ ಹಂಪಾಪುರ ಶಾಲೆ

13kglphoto-3..,..
Published on

ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಬಹುತೇಕ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ವ್ಯಾಸಂಗಕ್ಕೆ ಅವಕಾಶವಿದ್ದು, ಕೇವಲ 49 ಮಕ್ಕಳು ಇದ್ದಾರೆ. ಮುಖ್ಯ ಶಿಕ್ಷಕಿ ಮಾಣಿಕ್ಯ, ಸಹ ಶಿಕ್ಷಕ ಶಿವಕುಮಾರ್, ಅತಿಥಿ ಶಿಕ್ಷಕರಾದ ನಾಗರತ್ನ, ಸುಮಾ ಸೇರಿ ಒಟ್ಟು ನಾಲ್ವರು ಶಿಕ್ಷಕರಿದ್ದು, 3 ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮಳೆ ಬಂದಾಗ ಸೋರುತ್ತವೆ.

ಶಾಲೆಯ 2 ಅಡುಗೆ ಮನೆಗಳ ಪೈಕಿ ಒಂದು ಕಟ್ಟಡ ಶಿಥಿಲಗೊಂಡಿದೆ. 6 ಶೌಚಗೃಹಗಳ ಪೈಕಿ 2 ಮಾತ್ರ ಬಳಕೆಯಲ್ಲಿವೆ. ಅವುಗಳಿಗೂ ಸಮರ್ಪಕ ನೀರಿನ ವ್ಯವಸ್ಥೆಯಿಲ್ಲ. ನೀರು ಸಂಗ್ರಹಿಸುವ ತೊಟ್ಟಿ ಇಲ್ಲ. ಪರಿಣಾಮ, ವಿದ್ಯಾರ್ಥಿಗಳು ಬಕೆಟ್‌ನಲ್ಲಿ ನೀರು ಹಿಡಿದು ಶೌಚಗೃಹಕ್ಕೆ ಹೋಗುವಂತಾಗಿದೆ.
ತರಗತಿಗಳು ನಡೆಯುತ್ತಿರುವ ಮೂರು ಹಳೆಯ ಕೊಠಡಿಗಳ ಗೋಡೆಗಳು ಶಿಥಿಲಗೊಂಡಿರುವುದರಿಂದ ಕುಸಿದು ಬೀಳುವ ಸ್ಥಿತಿಯಲ್ಲಿವೆ. ನಿರುಪಯುಕ್ತವಾಗಿರುವ ಹಳೆಯ ಶೌಚಗೃಹಗಳು ಸರಿಸೃಪಗಳ ಆವಾಸ ಸ್ಥಾನವಾಗಿವೆ. ಮಕ್ಕಳು ಪಠ್ಯೇತರ ಚಟುವಟಿಕೆ ವೇಳೆ ಓಡಾಡುವುದರಿಂದ ಯಾವ ಸಂದರ್ಭದಲ್ಲಿ ಹಾವು, ಚೇಳು, ಕ್ರಿಮಿಕೀಟಗಳು ದಾಳಿ ಮಾಡುತ್ತವೋ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.

ಹಸ್ತಾಂತರವಾಗದ ನೂತನ ಕೊಠಡಿ: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ 800 ಶಾಲಾ ಕೊಡಡಿಗಳ ನಿರ್ಮಾಣ ಯೋಜನೆಯಡಿ ಈ ಶಾಲೆಯಲ್ಲೂ ಒಂದು ನೂತನ ಕೊಠಡಿ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಕೊಠಡಿ ಹಸ್ತಾಂತರವಾಗಿಲ್ಲ. ಕಟ್ಟಡ ಕಾಮಗಾರಿ ಕಳಪೆಯಾಗಿದ್ದು, ಸರಿಪಡಿಸಿ ಹಸ್ತಾಂತರಿಸುವಂತೆ ಹಿಂದಿನ ಮುಖ್ಯ ಶಿಕ್ಷಕರು ಲೋಕೋಪಯೋಗಿ ಇಲಾಖೆಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ನೂತನ ಕೊಠಡಿ ಇಂದಿಗೂ ಸೇವೆಗೆ ಲಭ್ಯವಾಗಿಲ್ಲ.

ಗ್ರಾಮಸ್ಥರ ಆಕ್ರೋಶ:
ಶಾಲೆಯಲ್ಲಿ ನೂತನ ಕೊಠಡಿ ನಿರ್ಮಿಸಿ ಮೂರು-ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಇನ್ನೂ ವಿದ್ಯಾರ್ಥಿಗಳ ಉಪಯೋಗಕ್ಕೆ ಹಸ್ತಾಂತರಿಸಿಲ್ಲ. ಶಾಲೆ ಇಷ್ಟು ದುಸ್ಥಿತಿಗೆ ತಲುಪಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಇತ್ತ ಗಮನಹರಿಸಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಡುಕರ ಅಡ್ಡ:
ಶಿಥಿಲಗೊಂಡಿರುವ ಕೊಠಡಿಗಳು ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿವೆ. ರಾತ್ರಿಯಾದರೆ ಶಾಲೆ ಬಳಿ ಆಗಮಿಸಿರುವ ಕುಡುಕರು ಮದ್ಯ ಸೇವನೆ ಮಾಡಿ ಖಾಲಿ ಪೌಚ್‌ಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಬೆಳಗ್ಗೆ ಶಾಲೆಗೆ ಬರುವ ಶಿಕ್ಷಕರು ಕೆಲವೊಮ್ಮೆ ಮದ್ಯದ ಬಾಟಲಿ, ಪೌಚ್‌ಗಳನ್ನು ಹೊರಗೆ ಎಸೆಯುವಂತಾಗಿದೆ.

300ರಿಂದ 350 ಮಕ್ಕಳು:
ಹತ್ತು ವರ್ಷದ ಹಿಂದೆ ಈ ಶಾಲೆಯಲ್ಲಿ 300 ರಿಂದ 350 ಮಕ್ಕಳಿದ್ದರು. ಅಲ್ಲದೆ 2005-06ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿದ್ದ ಬಾನುಲಿ ಕಾರ್ಯಕ್ರಮಕ್ಕೆ ಈ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ದೇಶದ ಗಮನ ಸೆಳೆದಿದ್ದರು. ಇಂತಹ ಸಾಧನೆಯುಳ್ಳ ಶಾಲೆ ಇದೀಗ ದುಸ್ಥಿತಿಗೆ ತಲುಪಿರುವುದು ಶೋಚನೀಯ.

ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳಿಗೆ ಯಾವಾಗ ಬೇಕಾದರೂ ತೊಂದರೆ ಆಗಬಹುದು. ಶಿಥಿಲಗೊಂಡಿರುವ ಕೊಠಡಿಗಳನ್ನು ಕೆಡವಲು ಶಿಕ್ಷಣ ಇಲಾಖೆಗೆ ಮೂರು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಬದಲಾಗಿ ಹಳೇ ಕಟ್ಟಡದಲ್ಲಿರುವ ಯಾವುದಾದರೂ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಕಟ್ಟಡ ಕೆಡವಿ ಎಂದು ಸಲಹೆ ನೀಡುತ್ತಾರೆ. ಈ ರೀತಿ ಹೇಳಿದರೆ ಸರ್ಕಾರಿ ಶಾಲೆಗಳನ್ನು ಉಳಿಸುವುದಾದರೂ ಹೇಗೆ?-ಶಿವಮಲ್ಲು, ಎಸ್‌ಡಿಎಂಸಿ ಅಧ್ಯಕ್ಷ ಹಳೇ ಕಟ್ಟಡ ತೆರವಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಈ ಕೆಲಸವಾದರೆ ಮಕ್ಕಳಿಗೆ ಸುರಕ್ಷತೆ ಸಿಗುತ್ತದೆ. ಶಾಲೆಯ ಶೌಚಗೃಹದ ನೀರಿನ ಟ್ಯಾಂಕ್ ಒಡೆದು ಹೋಗಿದೆ. ನೀರು ಸಂಗ್ರಹಿಸುವ ತೊಟ್ಟಿಯೂ ಇಲ್ಲ. ಬಕೆಟ್‌ಗಳನ್ನು ಹಿಡಿದು ಮಕ್ಕಳು ಶೌಚಗೃಹಕ್ಕೆ ಹೋಗಬೇಕು.-ಮಾಣಿಕ್ಯ, ಮುಖ್ಯ ಶಿಕ್ಷಕಿ ನೀರು ಸಂಗ್ರಹ ತೊಟ್ಟಿ ಹಾಗೂ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲು ಶಾಲೆಯಿಂದ ಯಾವ ಮನವಿಯೂ ಬಂದಿಲ್ಲ. ಶೌಚಗೃಹಕ್ಕೆ ನೀರಿನ ಸಂಪರ್ಕವನ್ನು ನೇರವಾಗಿ ನೀಡಲಾಗಿದೆ.-ರಾಜಮಣಿ, ಪಿಡಿಒ, ಹರಳೆ ಗ್ರಾಪಂ ಕಚೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net