

ಕೊಳ್ಳೇಗಾಲ: ಪಟ್ಟಣದ ಬಿಜೆಪಿ ನಗರಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಗುರುವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.
ನಾಯಕರ ದೊಡ್ಡ ಬೀದಿಯ ನಿವಾಸಿ ಶ್ರೀನಿವಾಸ್ ಎಂಬುವರ ಪುತ್ರ ಪ್ರವೀಣ್ ಕುಮಾರ್(26) ಪ್ರತಿದೂರು ದಾಖಲಿಸಿದ್ದಾರೆ. ಪ್ರತಿದೂರಿನಲ್ಲಿ ಏನಿದೆ?: ಮಂಗಳವಾರ ರಾತ್ರಿ 12.30ರಲ್ಲಿ ನನ್ನ ಸ್ನೇಹಿತ ದೇವಾಂಗ ಪೇಟೆ ನಿವಾಸಿ ವಾಸು ಎಂಬಾತನನ್ನು ಮನೆಗೆ ಬಿಡಲು ಹೋಗುವಾಗ ಪಂಚರಂಗಿ ವೃತ್ತದಲ್ಲಿರುವ ಚಿಲ್ಲರೆ ಅಂಗಡಿಯಲ್ಲಿ ಬಾಳೆಹಣ್ಣು ತೆಗೆದುಕೊಳ್ಳಲು ಹೋದ. ಈ ವೇಳೆ ಅಂಗಡಿ ಪಕ್ಕದಲ್ಲಿದ್ದ ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕಿರಣ್, ತೆಲುಗು ಭಾಷೆಯಲ್ಲಿ ಯಾರನ್ನೋ ಬಯ್ಯುತ್ತಿದ್ದಾಗ ಯಾರನ್ನು ಬಯ್ಯುತ್ತಿದ್ದೀಯಾ ಎಂದು ಪ್ರಶ್ನಿಸಿದೆ. ಇದಕ್ಕೆ ಕಿರಣ್, ‘ನಿನ್ನನ್ನೇ ಬಯ್ಯುತ್ತಿರುವುದು’ ಎಂದು ಜಾತಿ ನಿಂದನೆ ಮಾಡಿದರಲ್ಲದೆ, ಚಿನ್ನು, ವಾಟರ್ ಶಿವು, ಬಟ್ರ ವಿಜಿ, ಅರ್ಜುನ್ ಜತೆ ಸೇರಿಕೊಂಡು ರಿಪೀಸ್ ಪಟ್ಟಿಯಿಂದ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಗಲಾಟೆ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.