ಶಿಕ್ಷಕರಿಗೆ ಸಿಗುತ್ತಿಲ್ಲ ಗೌರವ

5kglphoto1
Published on

ಕೊಳ್ಳೇಗಾಲ: ಶಿಕ್ಷಕರು ಸಹನೆಯ ಪ್ರತೀಕ. ಮಕ್ಕಳು ಅವರಿಗೆ ಎಷ್ಟು ನಮಿಸಿದರೂ ಸಾಲದು. ಆದರೆ, ಪ್ರಸ್ತುತ ಶಿಕ್ಷಕರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಹಾಗೂ ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಕುಮಾರಕೃಷ್ಣ ತಿಳಿಸಿದರು.


ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಕಟ್ಟುವ ವಿಚಾರದಲ್ಲಿ ಶಿಕ್ಷಕರು ಬಹುದೊಡ್ಡ ಪಾತ್ರ ವಹಿಸಲಿದ್ದಾರೆ. ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ವ್ಯಾಸಂಗ ಪಡೆಯುವವರೆಗೂ ಶಿಕ್ಷಕರಾದವರು ಅವರ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವ ಕೆಲಸ ಮಾಡಿರುತ್ತಾರೆ. ಶಿಕ್ಷಕರು ಮಕ್ಕಳನ್ನು ಮನುಷ್ಯರನ್ನಾಗಿ ಮಾರ್ಪಾಡು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಶಿಕ್ಷಕರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಇದ್ದರಿಂದ ನಾವು ಶಿಕ್ಷಕರು ಎಂದು ಹೇಳಿಕೊಳ್ಳಲು ಹಿಂಜರಿಯುವ ಪರಿಸ್ಥಿತಿ ಇದೆ ಎಂದರು.


ಇಡೀ ಪ್ರಪಂಚ ಭಾರತವನ್ನು ನೋಡುತ್ತಿದೆ. ಬೇರೆ ರಾಷ್ಟ್ರಗಳು ಭಾರತದ ಸಹಕಾರ ಕೇಳುವ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ. ಈ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಆದರೀಗ ನಾವು ಭಾರತೀಯರು ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು. ಕರ್ನಾಟಕ ಹೆಲ್ತ್ ಫೌಂಡೇಷನ್ ಟ್ರಸ್ಟ್ ರಾಜಶೇಖರ್ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಲು ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬೆಳೆದವರೆ ಸಮಾಜದಲ್ಲಿ ಹೆಚ್ಚು ಅಭಿಮಾನ ಗಳಿಸಿರುವವರು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಶಿಕ್ಷಕರು ಮಕ್ಕಳ ಸಾಧನೆಯ ಮೆಟ್ಟಿಲಾಗಬೇಕು ಎಂದು ತಿಳಿಸಿದರು. ವಾಸವಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ.ಪಿ.ಜಿ. ಶ್ರೀಧರ್, ಜಂಟಿ ಕಾರ್ಯದರ್ಶಿ ನಾಗರಾಜುಬಾಬು, ನಿರ್ದೇಶಕರಾದ ವೆಂಕಟೇಶಬಾಬು, ಸಪ್ನಾ ಶೇಖರ್, ಭಾವನಾ, ಸುಧಾ ಮಂಜುನಾಥ್, ವಾಸವಾಂಬಾ, ಪ್ರಾಂಶುಪಾಲರಾದ ಪುಷ್ಪಿಕಾ, ಅಶ್ವಥ್‌ನಾರಾಯಣ, ಮುಖ್ಯ ಶಿಕ್ಷಕಿ ಗೀತಾ, ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net