

ಕೊಳ್ಳೇಗಾಲ: ದಲಿತರ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ಎನ್.ಮಹೇಶ್ ಆಗ್ರಹಿಸಿದ್ದಾರೆ.
ನಟ ಉಪೇಂದ್ರ ಕೂಡ ಮಾತಿನ ಭರದಲ್ಲಿ ದಲಿತ ಸಮಾಜದ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಅಸ್ಪೃಶ್ಯ ಸಮಾಜ ಎಂದಿಗೂ ಮತ್ತು ಯಾರ ಮೇಲೂ ದಬ್ಬಾಳಿಕೆ ಮಾಡಿಲ್ಲ ಎಂದು ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋದಲ್ಲಿ ಕಿಡಿಕಾರಿದ್ದಾರೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೇಲೆ ಪ್ರಕರಣ ದಾಖಲಿಸಬೇಕು. ತಪ್ಪಿನ ಅರಿವಾಗಿದ್ದರೆ ಸಚಿವ ಸ್ಥಾನಕ್ಕೂ ಸ್ವತಃ ರಾಜೀನಾಮೆ ನೀಡಲಿ. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಸಚಿವರ ರಾಜೀನಾಮೆ ಪಡೆಯಬೇಕು. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ಮಲ್ಲಿಕಾರ್ಜುನ್ ಅವರ ವಿರುದ್ಧ ಪ್ರಕರಣ ದಾಖಲಿಸಲಿ ಎಂದಿದ್ದಾರೆ.