

ಕೊಳ್ಳೇಗಾಲ: ನಾನು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಈಗಾಗಲೇ ಕಾಂಗ್ರೆಸ್ ಕೆಲವು ಕ್ಷೇತ್ರಗಳ ಟಿಕೆಟ್ ಘೋಷಣೆ ಮಾಡಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದ ಒಳಗೊಂಡಿರುವುದ್ದರಿಂದ ಈ ಟಿಕೆಟ್ ಹಂಚಿಕೆ ವಿಚಾರ ರಾಷ್ಟ್ರ ನಾಯಕರು ಹಾಗೂ ರಾಜ್ಯದ ನಾಯಕರು ಸಭೆಯಲ್ಲಿ ಅಂತಿಮಗೊಳಲಿದೆ. ನಾನಂತೂ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ನಿಧನಗೊಂಡು ಮಾ.11ಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಮಾ.12ರಂದು ಬೆಳಗ್ಗೆ ನಂಜನಗೂಡಿನ ಹೆಗ್ಗವಾಡಿ ಗ್ರಾಮದಲ್ಲಿ ಆರ್.ಧ್ರುವನಾರಾಯಣ ಅವರ ಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಅಲ್ಲಿಗೆ ಸಿಎಂ, ಡಿಸಿಎಂ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಲಿದೆ ಎಂದರು.
ಸಮಾವೇಶಕ್ಕೆ ಮಹಿಳಾ ಫಲಾನುಭವಿಗಳು ಬರಲು ಪ್ರತಿ ಪಂಚಾಯಿತಿಗೆ 2 ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಫಲಾನುಭವಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಯಳಂದೂರಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ನಗರಸಭಾ ಸದಸ್ಯ ಮಂಜುನಾಥ್, ಪ್ರಶಾಂತ್, ಶಾಂತರಾಜು ಬಸ್ತೀಪುರ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೈರಾಜ್, ಮುಖಂಡ ಅನ್ಸರ್, ಸ್ವಾಮಿ ನಂಜಪ್ಪ ಮತ್ತಿತರಿದ್ದರು.