

ಪಂಕ್ತಿಸೇವೆ ಪೂರ್ವ ಸಿದ್ಧತೆ ಚರ್ಚಾ ಸಭೆ
ಕೊಳ್ಳೇಗಾಲ : ಬಲಿ ಪೀಠವಿಲ್ಲದ ಜಾಗದಲ್ಲಿ ಪ್ರಾಣಿ ಬಲಿ ನಿಷೇಧ ಎಂಬ ನೆಪದಲ್ಲಿ ಲಕ್ಷಾಂತರ ಭಕ್ತರ ನಂಬಿಕೆ ಮತ್ತು ಪರಂಪರೆಗೆ ಕಳಂಕ ತರುವ ಕೆಲಸವಾಗುತ್ತಿದೆ ಎಂದು ಕೊಳ್ಳೇಗಾಲ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಉಗ್ರ ನರಸಿಂಹೇಗೌಡ ತಿಳಿಸಿದರು.
ತಾಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಂಕ್ತಿಸೇವೆ (ಸಹಪಂಕ್ತಿ ಭೋಜನ) ಕುರಿತು ಸೋಮವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತೆ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.
ಕಪ್ಪಡಿ, ಚಿಕ್ಕಲೂರು ಜಾತ್ರೆಯ ಪಂಕ್ತಿಸೇವೆ ಸಂಬಂಧ ಹೈಕೋರ್ಟ್ ನೀಡಿರುವ 2017ರ ಮಧ್ಯಂತರ ಆದೇಶದಲ್ಲಿ ಪರಂಪರೆಯನ್ನೇ ಎತ್ತಿ ಹಿಡಿಯಲಾಗಿದೆ. ಪ್ರಾಣಿಬಲಿ ನಿಲ್ಲಿಸಿ, ಪಂಕ್ತಿಸೇವೆ, ಆಹಾರ ಹಕ್ಕು, ಜನರ ಭಾವನೆಗೆ ಅಡ್ಡಿ ಬೇಡ ಎಂಬ ಸ್ಪಷ್ಟನೆ ನೀಡಿದೆ. ಹೀಗಿದ್ದರೂ ಜಿಲ್ಲಾಡಳಿತ ಅಜ್ಞಾನದಿಂದ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ಹೀಗಾಗಿ ಕುಯ್ಯುವುದು ಮತ್ತು ಬಲಿಕೊಡುವುದು- ಎರಡರ ವ್ಯತ್ಯಾಸಗಳನ್ನು ಜಿಲ್ಲಾಡಳಿತ ಅರಿಯಬೇಕಾಗಿದೆ. ಪರಂಪರೆ ವಿರೋಧಿ ನಡೆಗೆ ಈ ಬಾರಿ ನಾಂದಿ ಹಾಡಲಿದ್ದೇವೆ ಎಂದರು.
ಮಂಟೇಸ್ವಾಮಿ ಪರಂಪರೆ ಕರ್ನಾಟಕದಲ್ಲಿದೆ. ಈ ಕುರಿತ ಸಂಶೋಧನೆಯಿಂದ 13 ಕೃತಿ ಬಂದಿದೆ. ಇಲ್ಲಿ ಬಲಿ ಕೊಡುವ ಪದ್ಧತಿ ಇಲ್ಲ, ಒಕ್ಕಲುತನ ಲಕ್ಷಾಂತರ ಜನರ ಸುಗ್ಗಿಯ ಸಂತೃಪ್ತಿ , ಕೃತಜ್ಞತೆ ಸೇವೆಯ ವಿಶಿಷ್ಟ ಆಚರಣೆ ಇಲ್ಲಿದೆ. ಇದನ್ನು ಅಡ್ಡಿಪಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಚೆಕ್ ಪೋಸ್ಟ್ ಗಳಲ್ಲಿ ಪ್ಲೆಕ್ಸ್ ಅಳವಡಿಸಿ, ಕುರಿ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಹಿಡಿಯಲು ಮುಂದಾಗುವುದು ಸರಿಯಲ್ಲ. ಈ ಬಾರಿಯೂ ಅದೇ ಚಾಳಿ ಮತ್ತು ಘರ್ಷಣೆ ಆಗದಂತೆ ಸುತತ್ರವಾಗಿ ಜಾತ್ರೆ, ಪಂಕ್ತಿಸೇವೆ ನಡೆಸಲು ಅನುವು ಮಾಡಬೇಕು ಎಂದು ಒತ್ತಾಯಿಸಿದರು.
ಇಲ್ಲಿ ಎಲ್ಲರು ಸರಿಸಮಾನರು. ಮಾಂಸಾಹಾರ, ಸಸ್ಯಾಹಾರದವರು ಪ್ರತ್ಯೇಕವಾಗಿ ಸಹಪಂಕ್ತಿ ಭೋಜನ ಸವಿಯಲಿದ್ದಾರೆ. ಜಾತ್ರೆಯಲ್ಲಿ ಪರಂಪರೆ ಪರವಾಗಿರುವ ಕೋರ್ಟ್ ನೀಡಿದ ಆದೇಶವನ್ನು ಕನ್ನಡದಲ್ಲಿ ನಮೂದಿಸಿ ಫ್ಲೆಕ್ಸ್ ಅಳವಡಿಸಲಾಗುವುದು ಎಂದರು.
ಮಂಟೇಸ್ವಾಮಿ ಪರಂಪರೆ ಮತ್ತು ಸಂಸ್ಕೃತಿ ಸಂಶೋಧಕ ಮಹಾದೇವ ಶಂಕರಪುರ ಮಾತನಾಡಿ, ಕುಲೇಳು, ಒಕ್ಕಲುತನದ ಎಲ್ಲ ಸಮುದಾಯದವರು ಮಂಟೇಸ್ವಾಮಿ ಪರಂಪರೆಯಲ್ಲಿದ್ದಾರೆ. ಶತಮಾನಗಳಿಂದಲೂ ಚಿಕ್ಕಲೂರು ಜಾತ್ರೆ ನಡೆಯುತ್ತಿದೆ. ಸಂಪ್ರದಾಯ ಮತ್ತು ಪದ್ಧತಿಗಳನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಚರ್ಚೆ : ಹೋರಾಟ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಪಂಕ್ತಿ ಸೇವೆ ಕುರಿತು ಚರ್ಚೆ ನಡೆಸಿದರು. ಕುರಿ, ಕೋಳಿ, ಬಲಿ ನಿಷೇಧ ಎನ್ನುವ ಫ್ಲಕ್ಸ್ ಅಳವಡಿಸಿರುವ ಜಾಗದಲ್ಲೇ ಕೋರ್ಟ್ ಆದೇಶವನ್ನೂ ಕನ್ನಡದಲ್ಲಿ ನಮೂದಿಸಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹಾಕಲಾಗುವುದು. ಅಡ್ಡಿ ಮಾಡಿದರೆ ಸಂದೇಶ ನೀಡಲು ದೂರವಾಣಿ ಸಂಖ್ಯೆ ಹಾಕಬೇಕು ಎಂದು ತೀರ್ಮಾನ ಕೈಗೊಂಡರು. ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಪರಂಪರೆ ರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಶಂಭುಲಿಂಗ ಸ್ವಾಮಿ, ಡಾ.ಲಿಂಗರಾಜು ಬೈರನತ್ತ, ಇಕ್ಕಡಳ್ಳಿ ಪ್ರವೀಣ್, ಮತ್ತಿಪುರ ವಿನಯ್, ಕೊತ್ತನೂರು ಪುಟ್ಟಸ್ವಾಮಿ, ರಾಚಶೆಟ್ಟಿದೊಡ್ಡಿ ಸಿದ್ದಶೆಟ್ಟಿ, ಇಕ್ಕಡಳ್ಳಿ ಶಿವರಾಮಶೆಟ್ಟಿ ಮತ್ತಿತರರು ಇದ್ದರು.