ಆರಂಭವಾಗದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ

1-KGL-4,
Published on

ಕೊಳ್ಳೇಗಾಲ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಬವಣೆಪಡುವಂತಾಗಿದೆ.

ಬಸ್ ನಿಲ್ದಾಣ 2023ರ ಮಾ.20ರಂದು ಉದ್ಘಾಟನೆಗೊಂಡಿತು. ನಿಲ್ದಾಣದಲ್ಲಿ ಬಸ್ ಸೇವೆ ಆರಂಭಗೊಂಡು 10 ತಿಂಗಳು ಪೂರ್ಣಗೊಂಡಿದೆ. ಬರೋಬ್ಬರಿ 20 ಕೋಟಿ ರೂ. ವೆಚ್ಚದಲ್ಲಿ 4 ಅಂತಸ್ತುಗಳ ಸುಸಜ್ಜಿತ ಕಟ್ಟಡ ಹೊಂದಿರುವ ಈ ನಿಲ್ದಾಣದ ಕೆಳ ಮಹಡಿಯನ್ನು ಪಾರ್ಕಿಂಗ್‌ಗಾಗಿ ಮೀಸಲಿಡಲಾಗಿದೆ.
ವಿಪರ್ಯಾಸವೆಂದರೆ ಇಷ್ಟು ದಿನವಾದರೂ ಪ್ರಯಾಣಿಕರ ವಾಹನಗಳಿಗೆ ಪಾರ್ಕಿಂಗ್ ಅವಕಾಶ ನೀಡಲು ಸಾರಿಗೆ ನಿಗಮಕ್ಕೆ ಸಾಧ್ಯವಾಗಿಲ್ಲ. ಈಗಾಗಲೇ 3 ಬಾರಿ ಟೆಂಡರ್ ಕರೆದಿದ್ದರೂ ಈ ಪ್ರಕ್ರಿಯೆ ಯಶಸ್ವಿಯಾಗಿರಲಿಲ್ಲ. ಈ ಬಗ್ಗೆ ‘ವಿಜಯವಾಣಿ’ ಪತ್ರಿಕೆ ಹಲವು ಬಾರಿ ಸಾರ್ವಜನಿಕರಿಗೆ ಪಾರ್ಕಿಂಗ್ ಸೌಲಭ್ಯವಿಲ್ಲದೆ ತೊಂದರೆಯಾಗುತ್ತಿರುವ ಬಗ್ಗೆ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ನಂತರ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ಪಾರ್ಕಿಂಗ್ ವ್ಯವಸ್ಥೆಗೆ ಜರೂರಾಗಿ ಕ್ರಮವಹಿಸುವಂತೆ ಸೂಚನೆ ನೀಡಿದ್ದರು. ಆನಂತರ, ಕೆಎಸ್‌ಆರ್‌ಟಿಸಿ ಮರು ಟೆಂಡರ್ ಕರೆದಿದ್ದು, ಖಾಸಗಿ ವ್ಯಕ್ತಿಯೊಬ್ಬರು ಟೆಂಡರ್ ಪಡೆದಿದ್ದಾರೆ.
ಅದರಂತೆ 15 ದಿನಗಳ ಹಿಂದೆ ಬಸ್ ನಿಲ್ದಾಣದ ಕೆಳಮಹಡಿಯಲ್ಲಿ ಫೆ.1 ರಿಂದ ಶುಲ್ಕ ಪಾವತಿ ವಾಹನಗಳ ಪಾರ್ಕಿಂಗ್ ಪ್ರಾರಂಭವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ ಎಂಬ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಇದನ್ನು ನೋಡಿದ ಜನರು, ಕೊನೆಗೂ ಪಾರ್ಕಿಂಗ್ ಸೌಲಭ್ಯ ದೊರೆಯುತ್ತಿದೆ ಎಂದು ನಿಟ್ಟುಸಿರು ಬಿಟ್ಟಿದ್ದರು.

ಆದರೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಂತೆ ಪಾರ್ಕಿಂಗ್ ಸೌಲಭ್ಯ ಗುರುವಾರ ಆರಂಭಗೊಂಡಿಲ್ಲ. ಅದೆಷ್ಟೋ ಪ್ರಯಾಣಿಕರು ತಮ್ಮ ವಾಹನಗಳ ನಿಲುಗಡೆ ಮಾಡಲು ಬಸ್ ನಿಲ್ದಾಣದ ಪಾರ್ಕಿಂಗ್ ಪ್ರವೇಶ ದ್ವಾರಕ್ಕೆ ಬಂದು ವ್ಯವಸ್ಥೆ ಆಗದಿರುವುದನ್ನು ಕಂಡು ನಿರಾಸೆಯಿಂದ ವಾಪಸ್ ತೆರಳಿದ್ದಾರೆ. ನಿಲ್ದಾಣ ಉದ್ಘಾಟನೆಯಾಗಿ ವರ್ಷ ತುಂಬಿದರೂ ಕನಿಷ್ಠ ಸೌಲಭ್ಯವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಟೆಂಡರ್ ಅನ್ನು ಖಾಸಗಿ ವ್ಯಕ್ತಿಯೊಬ್ಬರು ಪಡೆದಿದ್ದಾರೆ. ಪ್ರಯಾಣಿಕರಿಗೆ ಈ ವಾರದೊಳಗೆ ಸೇವೆ ನೀಡಲು ಸೂಚಿಸುತ್ತೇನೆ.
ಅಶೋಕ್‌ಕುಮಾರ್, ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ

1ಕೆಜಿಎಲ್-4
: ಕೆಎಸ್ ಆರ್ ಟಿಸಿ ಹೊರಡಿಸಿದ್ದ ಪ್ರಕಟಣೆಯಂತೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಪ್ರಾರಂಭವಾಗದಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net