

ಕೊಳ್ಳೇಗಾಲ:ಪಟ್ಟಣದ ಬೆಂಡರಹಳ್ಳಿ ಗ್ರಾಮ, ಪ್ರಾಚೀನ ಕಾಲದ ಮಾನವರ ವಾಸದ ನೆಲೆ ಎಂಬ ಐತಿಹ್ಯ ಹೊಂದಿದೆ. ಈ ಊರಿಗೆ ಹಿಂದೆ ಬೆಂಡರವಾಡಿ ಎಂತಲೂ ಕರೆಯಲಾಗುತ್ತಿತ್ತು. ಕಾಲಕ್ರಮೇಣ ಬೆಂಡರಹಳ್ಳಿಯಾಗಿ ಮಾರ್ಪಟಿದೆ.
ಮುದುಮಲೆ ಗುಡ್ಡದ ತಪ್ಪಲಿನಲ್ಲಿ ಬರುವ ಈ ಗ್ರಾಮ ಪ್ರಾಚೀನ ನೆಲೆಗಟ್ಟನ್ನು ಹೊಂದಿದೆ ಎಂಬುದು ಪುರಾತತ್ವ ಇಲಾಖೆಯ ಆಧಾರಗಳಿಂದ ತಿಳಿದು ಬಂದಿರುತ್ತದೆ. ಶಿಲಾಯುಗ ಮನುಷ್ಯ, ಆನಂತರ ಬೆಳೆದು ಬಂದ ನಾಗರಿಕತೆಯ ಜನರು ನೆಲೆಸಿದ್ದ ಸ್ಥಳಗಳು ಇದಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಹಳೆಯ ನಾಗರಿಕತೆಯಲ್ಲಿ ಜನರು ಬಳಸುತ್ತಿದ್ದ ಮಡಕೆ ಹಾಗೂ ಇಟ್ಟಿಗೆ ಅವಶೇಷಗಳು ದೊರೆತ್ತಿರುವುಂಟು. ಇವೆಲ್ಲವೂ ಈ ಗ್ರಾಮಕ್ಕೆ ಪ್ರಾಚೀನ ಕಾಲದ ನಂಟನ್ನು ಬೆಸೆಯುತ್ತದೆ.
ಅಂದಿನ ಬೂದಿದಿಬ್ಬ, ಇಂದಿನ ಬೂದಿತಿಟ್ಟು:
ಮುದುಮಲೆ ಗುಡ್ಡ ತಪ್ಪಲಿನಲ್ಲಿರುವ ಬೆಂಡರಹಳ್ಳಿ ಗ್ರಾಮದ ಮಗ್ಗಲಿನಲ್ಲೇ ಬೂದಿತಿಟ್ಟು ಎಂಬ ಗ್ರಾಮವಿದೆ. ಇವುಗಳು ಅವಳಿ ಗ್ರಾಮಗಳಿದಂತೆ. ಬೆಂಡರಹಳ್ಳಿ ಪ್ರಾಚೀನ ಕಾಲದ ಜನರ ನೆಲೆಯಾಗಿತ್ತು ಎಂಬುದಕ್ಕೆ ಇದು ಸಾಕ್ಷಿ ಎನ್ನಬಹುದು. ಇವತ್ತಿನ ಬೂದಿತಿಟ್ಟು ಅಂದಿನ ಬೂದಿದಿಬ್ಬ ಆಗಿತ್ತು. ಇದಕ್ಕೆ ಕಾರಣ ಶಿಲಾಯುಗ ಕಾಲದ ಮನುಷ್ಯರ ಬದುಕು, ಬವಣೆಯು ವಿಶೇಷ, ವಿಭಿನ್ನ. ಒಂದಷ್ಟು ವರ್ಷ ಇಲ್ಲಿ ವಾಸವಿದ್ದವರು ತಮ್ಮ ಬದುಕಿನ ನಿರ್ವಹಣೆಗೆ ಕೃಷಿ ಇನ್ನಿತರ ಚಟುವಟಿಕೆ ಮಾಡುತ್ತಿದ್ದರು. ಇವರು ವಲಸಿಗರಾದ್ದರಿಂದ ತಾವಿದ್ದ ಸ್ಥಳ ಬಿಟ್ಟು ಬೇರೆಡೆ ತೆರಳುವ ಮುನ್ನ ಸ್ಥಳವನ್ನು ಶುಚಿಗೊಳಿಸಬೇಕೆಂಬ ಕಾರಣಕ್ಕೆ ಆ ಪ್ರದೇಶಕ್ಕೆ ಬೆಂಕಿ ಹಾಕಿ ಹೋಗುತ್ತಿದ್ದರಂತೆ. ಕಾಲಕ್ರಮೇಣ ಬೂದಿದಿಬ್ಬಗಳಾಗುತ್ತಿದ್ದವು. ಆದ್ದರಿಂದಲೇ ಇಂತಹ ಸ್ಥಳಕ್ಕೆ ಬೂದಿದಿಬ್ಬ ಎಂದು ಕರೆಯಲಾಗುತ್ತದೆ. ಅಂದಿನ ಬೂದಿ ದಿಬ್ಬವೇ ಇಂದಿನ ಬೂದಿತಿಟ್ಟು ಆಗಿದೆ. ಇವೆಲ್ಲದನ್ನು ಅಳೆದೂ ತೂಗಿ ನೋಡಿದರೆ ಬೆಂಡರವಾಡಿ ಗ್ರಾಮದಲ್ಲಿ ಆದಿಕಾಲದ ಜನರು ವಾಸವಿದ್ದರು ಎಂಬುದಕ್ಕೆ ಪುಷ್ಟಿ ನೀಡುತ್ತದೆ.
ಊರಿನ ದೇವತೆ ಬೆಂಡರಹಳ್ಳಿ ಮಾರಮ್ಮ: ಗ್ರಾಮದಲ್ಲಿ ಪರಿಶಿಷ್ಟ ಜನಾಂಗ ಹಾಗೂ ಕಣಿಯನ್ ಸಮುದಾಯ ವಾಸವಿದೆ. 400ಕ್ಕೂ ಹೆಚ್ಚು ಜನರಿದ್ದಾರೆ. ಊರೊಳಗಿರುವ ಮರದ ಕೆಳಗೆ ಬೆಂಡರಹಳ್ಳಿ ಮಾರಮ್ಮ ದೇವತೆಯ ಕಲ್ಲಿದ್ದು ಮಂಗಳವಾರದಂದು ಶ್ರದ್ಧಾಭಕ್ತಿಯಿಂದ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಪಕ್ಕದ ಊರಾದ ಬೂದಿತಿಟ್ಟಿನಿಂದಲೂ ಭಕ್ತರು ಆಗಮಿಸಿ ದೇವಿ ಸೇವೆ ಮಾಡುತ್ತಾರೆ. ಶ್ರೀ ಸಿದ್ದಪ್ಪಾಜಿ ದೇವಾಲಯವಿದ್ದು ಪ್ರತಿ ಸೋಮವಾರ, ಶುಕ್ರವಾರ ಪೂಜಾ ಕೈಂಕರ್ಯ ನಡೆಯುತ್ತದೆ.
ಬೆಂಡರವಾಡಿ ಸಪ್ಪಪುರದ ಸ್ಥಳ:
ಇವತ್ತಿನ ಬೆಂಡರಹಳ್ಳಿ ಗ್ರಾಮದ ಸ್ವಲ್ಪ ದೂರದಲ್ಲಿ ಸಪ್ಪಪುರ ಎಂಬ ಸ್ಥಳವಿತ್ತು. ಸಾಂಕ್ರಾಮಿಕ ರೋಗ ತೊಡಕಿನಿಂದ ಆ ಸ್ಥಳ ಸಂರ್ಪೂಣ ಜನರಿಲ್ಲದ ತಾಣವಾಯಿತು. ಕಾಲಕ್ರಮೇಣ ಸುತ್ತಮುತ್ತಲಿನ ಮುಂಡಿಗುಂಡ, ಮಾಂಬಳ್ಳಿ, ಮೂಗೂರು, ಕಗ್ಗಲಿಪುರ… ಹೀಗೆ ಹಲವು ಊರುಗಳಿಂದ ಇಲ್ಲಿಗೆ ಬಂದು ನೆಲೆಸಿದ್ದಾರೆ. ಇದಕ್ಕೆ ಪೂರಕವಾಗಿ ಇಂದಿಗೂ ಮುಡಿಗುಂಡ ಮುಳ್ಳಾಚಮ್ಮ, ಮಾಂಬಳ್ಳಿ ಹಿಂಡಿಮಾರಮ್ಮ, ಮೂಗೂರು ತಿಬ್ಬಾದೇವಿ, ಪಾರ್ವತಿ, ಮದ್ದೂರು ಮಾರಮ್ಮ ಒಕ್ಕಲಿನ ಜನರು ಇಲ್ಲಿ ವಾಸವಿದ್ದಾರೆ.
ಬೂದು ಮಣ್ಣಿನ ವಿಶೇಷ: ಬೆಂಡರಹಳ್ಳಿ ಸಮೀಪದ ಬೂದಿತಿಟ್ಟು ಗ್ರಾಮದ ಸುತ್ತಲ ಪ್ರದೇಶದ ಮಣ್ಣು ವಿಶೇಷ. ಇಲ್ಲಿನ ಕೃಷಿಯಲ್ಲಿ ಇಳುವರಿ ಹೆಚ್ಚಾಗಿ ಸಿಗುವುದನ್ನು ಕಾಣಬಹುದು. ಹಿಂದೆ ಆದಿಮಾನವರು ಇಲ್ಲಿ ವಾಸವಿದ್ದು, ನಂತರ ವಲಸೆ ಹೋಗಬೇಕಾದರೆ ಅವರಿದ್ದ ಪ್ರದೇಶವನ್ನು ಸುಟ್ಟು ಹೋಗುತ್ತಿದ್ದರು. ಆದ್ದರಿಂದ ಈ ಭಾಗದ ಮಣ್ಣು ಬಣ್ಣ ಕೆಂಪೂ ಅಲ್ಲ, ಕಪ್ಪೂ ಅಲ್ಲ. ಇವರೆಡರ ಮಿಶ್ರಿತ ಬೂದು ಮಣ್ಣಾಗಿದ್ದು ಈ ಭಾಗದಲ್ಲಿ ಕೃಷಿ ಗುಣಮಟ್ಟಕ್ಕೆ ತಕ್ಕಂತೆ ಕೂಡಿದೆ ಎಂಬ ಮಾತಿದೆ.
ಬೆಂಡರಹಳ್ಳಿ ಗ್ರಾಮ ಪ್ರಾಚೀನ ಶಿಲಾಯುಗದ ಮಾನವರು ವಾಸವಿದ್ದ ಸ್ಥಳ. ಈ ಬಗ್ಗೆ ಪುರಾತತ್ವ ಇಲಾಖೆ ಸಂಶೋಧನೆಯಿಂದ ತಿಳಿದಿರುತ್ತದೆ. ಆದಿಮಾನವರು ಬಳಸಿದ್ದ ಇಟ್ಟಿಗೆ ಹಾಗೂ ಮಡಕೆಗಳು ಅವಶೇಷಗಳು ದೊರತಿರುವುದು ಶೀಲಾಯುಗದ ಮಾನವರು ಇಲ್ಲಿ ನೆಲೆಸಿದ್ದರು ಎಂಬುದುಕ್ಕೆ ಕುರುಹು
ಮಹದೇವ ಶಂಕನಪುರ, ಸಾಹಿತಿ
ಬೆಂಡರಹಳ್ಳಿ ಆರೇಳು ಒಕ್ಕಲು ಜನರು ವಾಸಿಸುವ ಪುಟ್ಟ ಗ್ರಾಮ. ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮ ಎಂಬುದಕ್ಕೆ ಸಾಕಷ್ಟು ಉದಾಹರಣೆ ಇಲ್ಲಿ ನೋಡಬಹುದು.
ಲಿಂಗರಾಜು, ಗ್ರಾಮಸ್ಥ, ಬೆಂಡರವಾಡಿ
ಬೂದಿತಿಟ್ಟು ಗ್ರಾಮದ ಮಣ್ಣೇ ವಿಶೇಷ. ಬೂದು ಬಣ್ಣದ ಮಣ್ಣಿನ್ನು ಇಲ್ಲಿ ಕಾಣಬಹುದು. ಈ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆದರೂ ಇಳುವರಿ ಹೆಚ್ಚು.
ಕುಮಾರ್, ಬೂದಿತಿಟ್ಟು