

ಕೊಳ್ಳೇಗಾಲ: ಪುರಾಣ ಪ್ರಸಿದ್ಧ ಸೋನೆ ವೀರಭದ್ರಸ್ವಾಮಿ ಈ ಭಾಗದ ಹತ್ತಾರು ಹಳ್ಳಿಯ ಜನರ ಆರಾಧ್ಯ ದೈವ. ಧೈರ್ಯ, ಸಾಹಸಕ್ಕೆ ಪ್ರೇರಣೆ. ಭಕ್ತರ ಸಂಕಷ್ಟ ನಿವಾರಿಸುವ ದೇವರು.
ತಾಲೂಕಿನ ಜಕ್ಕಳಿ ಗ್ರಾಮದ ಮಗ್ಗಲಲ್ಲೇ ಈ ದೇವಾಲಯವಿದೆ. ಬಿಳಿಗಿರಿರಂಗನ ಬೆಟ್ಟ ಅರಣ್ಯ ಪ್ರದೇಶದೊಳಗಿರುವ ಸಾಲು ಬೆಟ್ಟ-ಗುಡ್ಡಗಳ ನಡುವೆ ಸೋನೆ ವೀರಭದ್ರೇಶ್ವರ ನೆಲೆಗೊಂಡಿದ್ದಾನೆ. ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಹೇಗೆ ಎಲ್ಲ ಕಾಲದಲ್ಲೂ ದೇವಾಲಯ ಹಿಮದಿಂದ ಆವರಿಸುತ್ತದೆಯೋ, ಹಾಗೆಯೇ ಈ ದೇವಾಲಯ ಗರ್ಭಗುಡಿ ಎಲ್ಲ ಕಾಲದಲ್ಲೂ ಸೋನೆಯಿಂದಲೇ ಕೂಡಿರುತ್ತದೆ.
ಮೈಸೂರು ಮಹಾರಾಜರು ಅರಣ್ಯದೊಳಗೆ ವನಮೇಟಿಗೆ ಕಡೆಗೆ ಪ್ರಯಾಣ ಬೆಳೆಸುವಾಗ ಸಾಕ್ಷಾತ್ ವೀರಭದ್ರೇಶ್ವರ ದರ್ಶನ ಕೊಟ್ಟಿದ್ದರು ಎಂಬುದು ಪುರಾಣ. ಧೈರ್ಯ, ಸಾಹಸ, ಕುಂದುಕೊರತೆಗೆ ನಾನೀದ್ದೀನಿ ಎಂದು ನೆಲೆಸಿದ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಆಗಿದ್ದಾರೆ. ಮೈಸೂರು ರಾಜರ ಕಾಲದಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಪ್ರತಿ ದೀಪಾವಳಿಯಲ್ಲಿ ಕೃತಿಕಾ ದೀಪೋತ್ಸವ ನೇರವೇರುತ್ತದೆ. ಮಾಘ ಮಾಸದ ಕೊನೆಯಲ್ಲಿ ಪ್ರತಿ ವರ್ಷ ವರ್ಧಂತ್ಯುತ್ಸವ ನಡೆಯುತ್ತದೆ. ಗೌರಿಹಬ್ಬದ ಆಚೆ, ಈಚೆಗೆ ಕುಣಗಳ್ಳಿ ಗ್ರಾಮದ ಉಪ್ಪಾರ ಸಮುದಾಯ ಜನರು ಕೊಂಡೋತ್ಸವ ನಡೆಸುತ್ತಾರೆ. ಕೊಳ್ಳೇಗಾಲದ ದೇವಾಂಗ ಜನಾಂಗದ ಬಹುತೇಕರಿಗೆ ಮನೆ ದೇವರಾಗಿದೆ. ಇವರು ಮನೆಯಲ್ಲಿ ನಾಮಕರಣ, ವಿವಾಹ, ಗೃಹಪ್ರವೇಶ ಇನ್ನಿತರ ಯಾವುದೇ ಶುಭಕಾರ್ಯ ಮಾಡಿದರೂ ಮೊದಲು ಸೋನೆ ವೀರಭದ್ರೇಶ್ವರನ ದರ್ಶನ ಪಡೆದು, ತೀರ್ಥ, ಪ್ರಸಾದ ತಂದ ಬಳಿಕವೇ ಶುರು ಮಾಡುವುದು ಪದ್ಧತಿ. ಇಂದಿಗೂ ಅದು ನಡೆದುಕೊಂಡು ಬಂದಿದೆ.
ಕುಣಗಳ್ಳಿ, ಸೂರಪುರ, ಬನ್ನಿಸಾರಿಗೆ, ಕೆಂಪನಪಾಳ್ಯ, ರಕ್ಕಸನಪಾಳ್ಯ, ತಿಮ್ಮರಾಜೀಪುರ, ಜಕ್ಕಳಿ, ಅರೇಪಾಳ್ಯ, ಅಗರ-ಮಾಂಬಳ್ಳಿ, ಉತ್ತಂಬಳ್ಳಿ ಇತ್ಯಾದಿ ಗ್ರಾಮಗಳ ಜನರಿಗೆ ಪವಿತ್ರ ಕ್ಷೇತ್ರವಾಗಿದೆ. ದೇವಾಲಯ ಅಭಯಾರಣ್ಯ ಒಳಗಿರುವುದರಿಂದ ಇತ್ತೀಚೆಗೆ, ಅರಣ್ಯ ಇಲಾಖೆಯ ವೈಲ್ಡ್ ಲೈಫ್ ಯೋಜನೆಗಳಿಂದ ಜನರು ವೀರಭದ್ರನ ದರ್ಶನಕ್ಕೆ ಮುಕ್ತವಾಗಿ ತೆರಳಲು ತೊಂದರೆಯಾಗಿದೆ. ಈ ನಡುವೆಯೂ ಭಕ್ತರು ಭೇಟಿ ನೀಡಿ ಹರಕೆ ತೀರಿಸುತ್ತಾರೆ. ಕಾರ್ತಿಕ ಮಾಸದಲ್ಲಿ ರಾತ್ರಿಯಿಡಿ ಭಕ್ತರು ಅಲ್ಲೇ ಉಳಿದು ಶ್ರದ್ಧಾಭಕ್ತಿಯಿಂದ ದೇವರ ಸೇವೆ ಮಾಡುತ್ತಾರೆ.
ಭೂಮಿಯಿಂದ ಒಡೆದು ಮೂಡಿರುವ ಲಿಂಗ
ದೇವಾಲಯಕ್ಕೆ 400 ವರ್ಷಗಳ ಇತಿಹಾಸವಿದೆ. ಭೂಮಿಯೊಳಗಿಂದಲೇ ಲಿಂಗ ಒಡೆದು ಮೂಡಿದೆ ಎಂಬುದು ಇತಿಹಾಸವಿದೆ. ಕಾಡಿಗೆ ಮೇವಿಗೆ ಬಂದ ಸೂರಪೂರ ಗ್ರಾಮದ ಹಸುವೊಂದು ನಿತ್ಯವೂ ಈ ಲಿಂಗಕ್ಕೆ ಹಾಲು ಕರೆಯುತ್ತಿತ್ತಂತೆ, ಮಾಲೀಕರು ಹಸುವಿನ ಬಳಿ ಹಾಲು ಕರೆಯಲು ಹೋದರೆ ರಕ್ತ ಬರುತ್ತಿದ್ದನ್ನು ಕಂಡು ಇದರ ಮಹಿಮೆ ಏನು ಎಂಬುದನ್ನು ತಿಳಿಯಲು ಒಂದು ದಿನ ಹಸುವನ್ನು ಹಿಂಬಾಲಿಸಿದ್ದರು. ಈ ವೇಳೆ ಲಿಂಗ ಉದ್ಭವವಾಗಿರುವುದು ತಿಳಿಯಿತು ಎಂಬುದು ಪುರಾಣ. ನಂತರ, ಮೈಸೂರಿನ ಮಹಾರಾಜರ ಕಾಲದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಸೋನೆ ವೀರಭದ್ರೇಶ್ವರ ಪ್ರತಿಷ್ಠಾಪಿಸಿದ ವಿಗ್ರಹಕ್ಕೆ ನಿತ್ಯಪೂಜೆ ನಡೆಯುತ್ತದೆ. ಸೋಲಿಗರು ಹಾಗೂ ಸುತ್ತಮುತ್ತಲ ಜನರು ವರ್ಷದಲ್ಲಿ ಬೆಳೆದ ಮೊದಲ ಬೆಳೆಯನ್ನು ತಂದು ಅಡುಗೆ ತಯಾರಿಸಿ ದೇವರಿಗೆ ಎಡೆ ಹಾಕುವ ಮೂಲಕ ಸಮರ್ಪಿಸುತ್ತಾರೆ. ಪರಮಾಡುವ ಮೂಲಕ ಅನ್ನಸಂತರ್ಪಣೆ ನೆರವೇರಿಸುತ್ತಾರೆ.
ಒಂದು ದಿನವೂ ತಪ್ಪಲ್ಲ ಪೂಜೆ!
ವರ್ಷದ 365 ದಿನವೂ ಶ್ರೀ ಸ್ವಾಮಿಗೆ ಪೂಜೆ ನಡೆಯುತ್ತದೆ. ಸ್ವಾಮಿಗೆ ಸಾವು-ನೋವಿನಂತಹ ಸೂತಕಗಳ ತಡೆಯಿಲ್ಲ. ಅರ್ಚಕರು ದೇವಾಲಯ ಪಕ್ಕದಲ್ಲಿರುವ ಕೊಳದಲ್ಲಿ ಸ್ನಾನ, ಮಡಿಮಾಡಿ ಬೆಲ್ಲದ ಅನ್ನ (ತಳಿಗೆ ಪ್ರಸಾದ) ತಯಾರಿಸಿ ಸೋನೆ ವೀರಭದ್ರೇಶ್ವರನಿಗೆ ನೈವೇದ್ಯ ಇಡುತ್ತಾರೆ. ಬೆಳಗ್ಗೆ 9 ಗಂಟೆಗೆ ಪೂಜೆ ನೆರವೇರಲಿದ್ದು, ಸಂಜೆ 5 ಗಂಟೆವರೆಗೂ ದೇವಾಲಯ ತೆರೆದಿರುತ್ತದೆ. ಭಕ್ತರ ಸಂಖ್ಯೆ ವಿರಳವಾಗಿದ್ದರೆ ಮಧ್ಯಾಹ್ನವೇ ಗರ್ಭಗುಡಿ ಮುಚ್ಚಲಾಗುವುದು. ಕಾಡಿನೊಳಗೆ 2 ಕಿಮೀ ಕಲ್ಲಿನ ಮೆಟ್ಟಿಲಿನ್ನು ಹತ್ತಿ ದೇವಾಲಯಕ್ಕೆ ಹೋಗಬೇಕಿದೆ. ದೇವಾಲಯಕ್ಕೆ ಭೇಟಿ ನೀಡುವ ವೇಳೆ ಅರ್ಚಕರಿಗಾಗಲಿ, ಭಕ್ತರಿಗೆ ಆಗಲಿ ಇಲ್ಲಿರುವ ವನ್ಯಮೃಗಗಳಿಂದ ಶತಮಾನಗಳಿಂದಲೂ ಕೇಡಾಗಿಲ್ಲ. ಅದು ವೀರಭದ್ರೇಶ್ವರನ ಸತ್ಯ ಎಂಬುದು ನಂಬಿಕೆ.
ಅರಸು ಕುಟುಂಬದಿಂದಲೇ ಪೂಜಾ ಕೈಂಕರ್ಯ: ಅರಸು ಸಮುದಾಯಕ್ಕೆ ಸೇರಿದ ಕುಟುಂಬ ಐದಾರು ತಲೆಮಾರಿನಿಂದಲೂ ದೇವಾಲಯ ಪೂಜಾ-ಕೈಂಕರ್ಯಗಳನ್ನು ಮಾಡುತ್ತ ಬಂದಿದೆ. ಇದೀಗ ಎರಡು ಕುಟುಂಬ ದೇವಾಲಯದ ಅರ್ಚಕರಾಗಿದ್ದಾರೆ. ಯುಗಾದಿಯಿಂದ ಯುಗಾದಿಗೆ ದೇವಾಲಯ ಪೂಜಾ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ. ರಮೇಶ್ ರಾಜೇ ಅರಸ್, ಇವರ ಪುತ್ರ ಮನು ರಾಜೇ ಅರಸ್ ಹಾಗೂ ಬಸವರಾಜೇ ಅರಸ್ ಇವರ ಪುತ್ರ ಗಿರಿರಾಜೇ ಅರಸ್ ದೇವಾಲಯದ ಅರ್ಚಕರಾಗಿದ್ದಾರೆ.
ಮೈಸೂರು ಮಹಾರಾಜರ ಕಾಲದಲ್ಲಿ ಸೋನೆ ವೀರಭದ್ರಸ್ವಾಮಿ ದೇವಾಲಯ ನಿರ್ಮಾಣವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜೇಂದ್ರ ಒಡೆಯರ್ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಸುತ್ತಲ ಹತ್ತಾರು ಗ್ರಾಮಗಳಿಗೆ ಸೋನೆ ವೀರಭದ್ರೇಶ್ವರನೇ ಕಾವಲು.-ರಮೇಶ್ ಮುರಾರಿ, ಅರ್ಚಕ ಮಕ್ಕಳ ಮಹದೇಶ್ವರ ದೇವಾಲಯ, ಕೊಳ್ಳೇಗಾಲ ವರ್ಷದ 365 ದಿನವೂ ಸ್ವಾಮಿಗೆ ಪೂಜೆ ನಡೆಯುತ್ತದೆ. ಭಕ್ತರು ವರ್ಷ ಪೂರ್ತಿ ಭೇಟಿ ನೀಡಿ ದೇವರ ದರ್ಶನ ಮಾಡುತ್ತಾರೆ. ಹತ್ತಾರು ಹಳ್ಳಿ ಜನರು ತಂಗುವ ಮೂಲಕ ಅನ್ನಸಂತರ್ಪಣೆ ನೆರವೇರಿಸುತ್ತಾರೆ. ನನಗೆ ತಿಳಿದಂತೆ ಮೂರು ತಲೆ ಮಾರಿನಿಂದಲೂ ನಮ್ಮ ಕುಟುಂಬದವರೇ ದೇವಾಲಯದ ಪೂಜೆ ಕೈಂಕರ್ಯ ನೆರವೇರಿಸುತ್ತೇವೆ.-ರಮೇಶ್ ರಾಜೇ ಅರಸ್, ಅರ್ಚಕರು, ಸೋನೆ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ.