ವೃದ್ಧೆ ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಎಗರಿಸಿದ ಮಹಿಳೆ

Crime Logo
Published on

ಕೊಳ್ಳೇಗಾಲ: ಮಲೆ ಮಾದಪ್ಪನ ಭಕ್ತೆಯನ್ನು ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಹಾಗೂ ಪರ್ಸ್ ಎಗರಿಸಿ ಮಹಿಳೆ ಪರಾರಿಯಾಗಿದ್ದಾಳೆ.

ಯಳಂದೂರು ತಾಲೂಕಿನ ವಡಗೆರೆ ಗ್ರಾಮದ ವೃದ್ಧೆ ಬಸಮ್ಮ(65) ಸರ ಕಳೆದುಕೊಂಡವರು. ಬೆಂಗಳೂರಿನ ರಾಜಮ್ಮ ಎಂಬಾಕೆ ವಂಚಿಸಿದ ಆರೋಪಿ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಸಮ್ಮ ಮಂಗಳವಾರ ಬೆಳಗ್ಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜಾ ಕೈಂಕರ್ಯ ಮುಗಿಸಿ ದೇವಸ್ಥಾನದ ಬಳಿ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅಪರಿಚಿತ ಹೆಂಗಸು ಪರಿಚಯ ಮಾಡಿಕೊಂಡಿದ್ದಾಳೆ. ನನ್ನ ಮಗಳು ನರ್ಸ್ ಆಗಿದ್ದಾಳೆ ಎಂದು ಸಲುಗೆಯಿಂದ ಮಾತನಾಡಿದ್ದಾಳೆ. ಈ ವೇಳೆ ಬಸಮ್ಮನ ಮುಖ ಊದಿಕೊಂಡಿರುವುದನ್ನು ಗಮನಿಸಿ ನನ್ನ ಮಗಳು ನರ್ಸ್ ಆಗಿದ್ದು ನಿನಗೆ ಔಷಧ ಕೊಡಿಸುತ್ತೇನೆ ಎಂದು ಪುಸಲಾಯಿಸಿದ್ದಲ್ಲದೇ, ಅಂಗಡಿಯಲ್ಲಿ ನಿಂಬೆ ಹಣ್ಣನ್ನು ತೆಗೆದುಕೊಂಡು ಮುಖಕ್ಕೆ ಉಜ್ಜಿ ಆರೈಕೆ ಮಾಡಿದ್ದಾಳೆ.

ರಾತ್ರಿಯಿಡಿ ದೇವಾಲಯದ ಅಂಗಳದಲ್ಲಿ ಮಲಗಿದ್ದು, ಬುಧವಾರ ಬೆಳಗ್ಗೆ ಊರಿಗೆ ಹೊರಡುವಾಗ ರಾಜಮ್ಮ ತನ್ನ ಬಳಿ ಇದ್ದ ಕರಿಮಣಿ ಸರವನ್ನು ನನ್ನ ಪರಿಚಯದ ನೆನಪಿಗಾಗಿ ಇಟ್ಟುಕೊಳ್ಳುವಂತೆ ಮಾದಮ್ಮನಿಗೆ ಗಿಫ್ಟ್ ನೀಡಿದ್ದಾಳೆ. ಅಂತೆಯೇ, ಮುಖದ ಊತ ನಿವಾರಣೆ ಆಗುವುದಾಗಿ ನೀರಿನಲ್ಲಿ ಮಿಶ್ರಣ ಮಾಡಿ ಔಷಧ ಎಂದು ನಂಬಿಸಿ ಕುಡಿಸಿದ್ದಾಳೆ. ನಂತರ 6.30ರಲ್ಲಿ ಇವರಿಬ್ಬರು ಕೊಳ್ಳೇಗಾಲಕ್ಕೆ ಬಸ್ ಹತ್ತಿದ್ದು, ಸ್ವಲ್ಪ ಸಮಯದಲ್ಲೇ ಬಸಮ್ಮ ಪ್ರಜ್ಞೆ ಕಳೆದುಕೊಂಡಿದ್ದಾರೆ. ನಂತರ ಬಸ್ ಕೊಳ್ಳೇಗಾಲಕ್ಕೆ ಬಂದಾಗ ಪ್ರಜ್ಞೆ ಬಂದಿದೆ. ಪಕ್ಕದಲ್ಲಿ ನೋಡಿದಾಗ ರಾಜಮ್ಮ ನಾಪತ್ತೆಯಾಗಿದ್ದಳು. ತನ್ನ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಪರ್ಸ್ ಸಹ ನಾಪತ್ತೆಯಾಗಿತ್ತು. ಬಸಮ್ಮ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net