

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಭರಚುಕ್ಕಿ ಜಲಪಾತದಲ್ಲಿ ಪ್ರವಾಸಿಗರ ಪುಂಡಾಟ ಜಾಸ್ತಿಯಾಗಿದೆ. ಜಲಪಾತದ ತುತ್ತ ತುದಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ದುಸ್ಸಾಹಸಕ್ಕಿಳಿಯುತ್ತಿದ್ದಾರೆ.
ವೆಸ್ಲಿ ಸೇತುವೆ ಬಳಿ ಕಾವೇರಿ ನದಿ ಕವಲೊಡೆದು ಭರಚುಕ್ಕಿ ಜಲಪಾತವಾಗಿ ದುಮ್ಮಿಕುತ್ತದೆ. ಇದನ್ನು ನೋಡಲು ಅರಣ್ಯ ಇಲಾಖೆಯು ಜಲಪಾತದ ಮುಂಭಾಗ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲವು ಯುವಕರು-ಯುವತಿಯರು ಅಕ್ರಮವಾಗಿ ಬೂದಗಟ್ಟೆ ದೊಡ್ಡಿ ಮಾರ್ಗವಾಗಿ ಭರಚುಕ್ಕಿ ಫಾಲ್ಸ್ನ ಹಿನ್ನೀರಿಗೆ ತೆರಳಿ ತುದಿಯಲ್ಲಿ ನಿಂತು ಹುಚ್ಚು ಪ್ರದರ್ಶನ ಮಾಡುತ್ತಿದ್ದಾರೆ. ಜಲಪಾತದ ತುತ್ತ ತುದಿ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ನಿಷೇಧಿತ ಪ್ರದೇಶಕ್ಕೆ ಪ್ರವಾಸಿಗರೂ ತೆರಳುತ್ತಿದ್ದರೂ ಅರಣ್ಯ ಇಲಾಖೆಯಾಗಲಿ ಅಥವಾ ಪೊಲೀಸ್ ಇಲಾಖೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಪಾಯ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಪಾಯಕಾರಿ ಸ್ಥಳಕ್ಕೆ ತೆರಳದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
ಕಾವೇರಿ ನದಿಯಲ್ಲಿ ನೀರು ಹೆಚ್ಚಾದ ವೇಳೆ ಹಾಗೂ ವಿಶೇಷ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಬಹುದು. ಆದರೆ ಎಲ್ಲ ಸಮಯದಲ್ಲೂ ಆಗುವುದಿಲ್ಲ. ನಿರ್ಬಂಧಿತ ಸ್ಥಳಕ್ಕೆ ಸಾರ್ವಜನಿಕರು ಹೋಗುವುದು ತಪ್ಪು. ಇದರಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ.-ಗಣೇಶ್, ಪಿಎಸ್‌ಐ, ಗ್ರಾಮಾಂತರ ಪೊಲೀಸ್ ಠಾಣೆ. ಕೊಳ್ಳೇಗಾಲ