ಕೃಷಿ ಅಭಿಯಾನದಲ್ಲಿ ಅಧಿಕಾರಿಗಳಿಗೆ ತರಾಟೆ

28 kollegal-1.A
Published on

ಕೊಳ್ಳೇಗಾಲ: ಪಟ್ಟಣದ ಗುರುಭವನದಲ್ಲಿ ಕೃಷಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನದಲ್ಲಿ ಶಾಸಕ ಎನ್.ಮಹೇಶ್ ಸಮ್ಮುಖದಲ್ಲಿ ರೈತ ಮುಖಂಡರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಮಾತನಾಡಿ, ಸಮಗ್ರ ಕೃಷಿ ಅಭಿಯಾನದಡಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, 3 ದಿನ ತಾಲೂಕಿನ 5 ಹೋಬಳಿಗಳಲ್ಲಿ ನಡೆಯಲಿದೆ. ಮೊದಲೆರಡು ದಿನ ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ರೇಷ್ಮೆ ಹಾಗೂ ಕೃಷಿ ಇಲಾಖೆಗಳ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲಾಗುವುದು. ಕೊನೆಯ ದಿನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ಸಭಿಕರ ಸಾಲಿನಲ್ಲಿದ್ದ ಪಾಳ್ಯ ಗ್ರಾಮದ ರೈತ ಶಿವಮಲ್ಲಪ್ಪ ಇದಕ್ಕೆ ಆಕ್ಷೇಪಿಸಿದರು. ಕೃಷಿ ಇಲಾಖೆ ಅಧಿಕಾರಿಗಳಾದಿಯಾಗಿ ಯಾವೊಬ್ಬ ಅಧಿಕಾರಿಯೂ ರೈತನ ಮನೆ ಬಾಗಿಲಿಗೆ ಬರುತ್ತಿಲ್ಲ. ರೈತರೆ ಅಧಿಕಾರಿಗಳಿರುವ ಸ್ಥಳಕ್ಕೆ ಅಲೆಯಬೇಕಿದೆ. ನಿಜವಾಗಿಯೂ ರೈತರಿಗೆ ಉಪಯೋಗ ಆಗುತ್ತಿದೆಯೇ ಎಂಬುದನ್ನು ನೀವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮನ್ನು ನೀವು ತಿದ್ದಿಕೊಳ್ಳಿ. ಅಲ್ಲದೆ 2016ರಲ್ಲಿ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಪರಿಹಾರ ದೊರೆತಿಲ್ಲ ಎಂದಿ ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಕಲಾ, ಬೆಳೆ ವಿಮೆ ಪರಿಹಾರ ನೀಡಲು ತಾಂತ್ರಿಕ ಸಮಸ್ಯೆ ಇತ್ತು. ಅವುಗಳನ್ನು ಈಗ ಸರಿಪಡಿಸಲಾಗಿದೆ. ಇನ್ನೊಂದು ವಾರದಲ್ಲಿ ವಿಮೆ ರೈತರ ಬ್ಯಾಂಕ್ ಅಕೌಂಟ್‌ಗೆ ಸೇರಲಿದೆ ಎಂದು ಸಮಜಾಯಿಷಿ ನೀಡಿದರು.

ಜೂನ್‌ನಲ್ಲಿ ಬೆಳೆ ನಾಟಿ ಮಾಡುವಂತೆ ಕೃಷಿ ಇಲಾಖೆ ಸಲಹೆ ನೀಡುತ್ತದೆ. ಆದರೆ ಸೆಪ್ಟೆಂಬರ್ ತಿಂಗಳೊಳಗೆ ಕಬಿನಿ ನಾಲೆಗೆ ನೀರು ಬಿಡುವುದಿಲ್ಲ. ಜತೆಗೆ ವಿದ್ಯುತ್ ಸಮಸ್ಯೆ ಇದೆ. ಈ ನಡುವೆ ಬೆಳೆಗೆ ವೈಜ್ಞಾನಿಕ ಬೆಳೆ ಸಿಗುವುದಿಲ್ಲ. ಸಬ್ಸಿಡಿ ರೂಪದಲ್ಲಿ ಎತ್ತು, ಗಾಡಿ ಕೊಡುವ ಬದಲು ಟ್ರಿಲ್ಲರ್, ಟ್ರಾೃಕ್ಟರ್ ಕೊಡುತ್ತಾರೆ. ಒಟ್ಟಾರೆ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ರೈತ ಮುಖಂಡ ಅಣಗಳ್ಳಿ ಬಸವರಾಜು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ಕೆಂಪನಪಾಳ್ಯದ ಡಿ.ಶ್ರೀಕಂಠಸ್ವಾಮಿ ಮಾತನಾಡಿ, ಅರಣ್ಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಜಮೀನಿನಲ್ಲಿ ಸಸಿ ಬೆಳೆಯಲು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಮೂಲಕ ಕೂಲಿ ಕೊಡುತ್ತಿದ್ದಾರೆ. ಆದರೆ ಕಬ್ಬು, ಭತ್ತ, ಜೋಳ, ರಾಗಿ ಬೆಳೆಗಳಲ್ಲಿ ಕೃಷಿ ಕಾಯಕ ಮಾಡುವರಿಗೆ ವೇತನ ನೀಡುವುದಿಲ್ಲ. ಎಪಿಎಂಸಿಗಳಲ್ಲಿ ರೈತರು ಮಾರಾಟಕ್ಕಿಡುವ ಹಣ್ಣು, ಸೊಪ್ಪು ಹಾಗೂ ಇತರ ಪದಾರ್ಥಗಳಿಗೆ ಶೇ.10 ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಈ ದಂಧೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಕೃಷಿ ಪಂಡಿತ ಪುರಸ್ಕೃತ ಹೊಸಮಾಲಂಗಿ ಡಾ.ರೇಚಣ್ಣ ಮಾತನಾಡಿ, ವಸ್ತು ಪ್ರದರ್ಶನದಲ್ಲಿ ದೇಸಿ ಜಾನುವಾರು ಮತ್ತು ದೇಸಿ ತಳಿಗಳ ಬೀಜ ಸಂಸ್ಕರಿಸುವ ಕುರಿತ ಮಾಹಿತಿ ನೀಡುವ ಮಳಿಗೆ ತೆರೆದಿಲ್ಲ. ತಾನು 300 ಜಾತಿಯ ಬೀಜಗಳ ಜತೆಗೆ 40 ಜಾತಿ ರಾಗಿಯನ್ನು ಸಂಗ್ರಹಿಸಿದ್ದು, ಕೃಷಿ ಇಲಾಖೆ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂದು ದೂರಿದರು.

ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕ ಎನ್.ಮಹೇಶ್, ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ರೈತರು ಪಾಲಿಸಬೇಕು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಏಪ್ರಿಲ್‌ನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು. ಸರ್ಕಾರದ ಹಂತದಲ್ಲಿ ಆಗಬೇಕಾದದ್ದನ್ನು ಪಟ್ಟಿ ಮಾಡಿ ಅನುಷ್ಠಾನಗೊಳಿಸಲು ಹೋರಾಟ ಮಾಡಲಾಗುವುದು ಎಂದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜೇಂದ್ರ, ಉಪಾಧ್ಯಕ್ಷ ಲತಾರಾಜಣ್ಣ, ಸದಸ್ಯರಾದ ಮರಿಸ್ವಾಮಿ, ಕೃಷ್ಣಪ್ಪ, ಗ್ರಾ.ಪಂ.ಅಧ್ಯಕ್ಷೆ ಶಶಿಕುಮಾರಿ, ಪ್ರಬಾರ ಸಹಾಯಕ ಕೃಷಿ ನಿರ್ದೇಶಕಿ ಪುಷ್ಪಲತಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net