782 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

15 kollegal-2
Published on

ಕೊಳ್ಳೇಗಾಲ: ಕೊಳ್ಳೇಗಾಲ ಶೈಕ್ಷಣಿಕ ವಲಯ ವ್ಯಾಪ್ತಿಯ ವಿವಿಧ ಶಾಲೆಗಳ 5ನೇ ತರಗತಿಯ 782 ವಿದ್ಯಾರ್ಥಿಗಳು ಭಾನುವಾರ ಪಟ್ಟಣದ ಮೂರು ಪರೀಕ್ಷಾ ಕೇಂದ್ರದಲ್ಲಿ ಆದರ್ಶ ವಿದ್ಯಾಲಯದ 6ನೇ ತರಗತಿಗೆ ದಾಖಲಾಗಲು ಪ್ರವೇಶ ಪರೀಕ್ಷೆ ಬರೆದರು.

ಪಟ್ಟಣದ ಮುಡಿಗುಂಡದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ 2020-21ನೇ ಸಾಲಿಗೆ 80 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶವಿದ್ದು, ಪರೀಕ್ಷೆಗೆ ಒಟ್ಟು 845 ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈ ಪೈಕಿ 782 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರೆ, 63 ವಿದ್ಯಾರ್ಥಿಗಳು ಗೈರಾಗಿದ್ದರು.

ಪಟ್ಟಣದ ಎಂಜಿಎಸ್‌ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 13 ಕೊಠಡಿಗಳಲ್ಲಿ 300ಕ್ಕೆ 286 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಶ್ರೀ ವಾಸವಿ ವಿದ್ಯಾಕೇಂದ್ರ ಶಾಲೆಯ 13 ಕೊಠಡಿಗಳಲ್ಲಿ 300 ವಿದ್ಯಾರ್ಥಿಗಳ ಪೈಕಿ 282, ಎಸ್‌ವಿಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ 11 ಕೊಠಡಿಗಳಲ್ಲಿ 245 ವಿದ್ಯಾರ್ಥಿಗಳ ಪೈಕಿ 214 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಬೆಳಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಿಗದಿಯಾಗಿತ್ತು. 100 ಅಂಕಗಳಿಗೆ 100 ಪ್ರಶ್ನೆಗಳಿಗೆ ಉತ್ತರ ಗುರುತು ಹಾಕುವ ಪರೀಕ್ಷೆ ಇದಾಗಿತ್ತು. ಆಯಾ ಶಾಲೆಗಳ ಮುಖ್ಯ ಶಿಕ್ಷಕರು, ಪರೀಕ್ಷಾ ಕೇಂದ್ರದ ಅಧೀಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನಕಲು ತಡೆಯುವ ಹಿನ್ನೆಲೆ ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net