

ಹಿರಿಯೂರು: ಕೊಲ್ಕತ್ತಾದಲ್ಲಿ ಯುವ ವೈದ್ಯೆ ಮೇಲಿನ ಅತ್ಯಾಚಾರ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೇತೃತ್ವದಲ್ಲಿ ವೈದ್ಯರು ಪ್ರತಿಭಟಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ನಗರದ ಮುಖ್ಯ ರಸ್ತೆ, ಗಾಂಧಿ ವೃತ್ತ, ತಾಲೂಕು ಕಚೇರಿ ಬಳಿ ಪ್ರತಿಭಟಿಸಿದ ನೂರಾರು ವೈದ್ಯರು-ವೈದ್ಯಕೀಯ ಸಿಬ್ಬಂದಿ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜನರ ಸುರಕ್ಷತೆಗೆ ಹಗಲಿರುಳು ಜೀವ ಪಣಕ್ಕಿಟ್ಟು ಶ್ರಮಿಸುವ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ದೇಶದ ವಿವಿಧೆಡೆಯಿಂದ ವೈದ್ಯ ವೃತ್ತಿ ಕನಸು ಹೊತ್ತು, ದೂರದ ನಗರಗಳಿಗೆ ಹೋಗಿ ಕಷ್ಟಪಟ್ಟು ಓದಿ ವೈದ್ಯರಾಗಿ ನಿಸ್ವಾರ್ಥ ಸೇವೆ ಸಲ್ಲಿಸುವವರ ಮೇಲೆ ಹಲ್ಲೆ, ದೌರ್ಜನ್ಯ ಖಂಡನೀಯ, ಅಮಾನುಷ ಕೃತ್ಯ ಎಸಗಿದ ದುಷ್ಟರಿಗೆ ಕಠಿಣ ಶಿಕ್ಷೆ ಆಗಬೇಕು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಟಿಎಚ್‌ಒ ಡಾ.ವೆಂಕಟೇಶ್, ವೈದ್ಯರಾದ ಡಾ.ಶಿವಣ್ಣ ರೆಡ್ಡಿ, ಡಾ.ರವಿನಾಯ್ಕ, ಡಾ.ಮೂರ್ತಿ, ಡಾ.ಗೋಪಾಲ್ ನಾಯ್ಕ, ಡಾ.ಹರ್ಷ. ಡಾ.ರೋಹಿತ್, ಡಾ.ಕಮಲಾನಾಯ್ಕ, ಡಾ.ಮಲ್ಲಿಕಾರ್ಜುನಪ್ಪ, ಡಾ.ಕುಮಾರ್ ನಾಯ್ಕ, ಡಾ.ಜಗನ್ನಾಥ್, ಡಾ.ಮಹಾಲಿಂಗಪ್ಪ, ಡಾ.ರಾಮಚಂದ್ರಪ್ಪ, ಡಾ.ಬಸವರಾಜ್, ವಿ.ತಿಪ್ಪೇಸ್ವಾಮಿ, ಪ್ರಸನ್ನ, ಅಕ್ಷಯ್, ಮುದ್ದವೀರಪ್ಪ, ಗೋಪಾಲ್ ಇತರರಿದ್ದರು.
ತಾಲೂಕಿನ ಸರ್ಕಾರಿ, ಖಾಸಗಿ ವೈದ್ಯರು, ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಯಾವುದೇ ಕ್ಷೇತ್ರದ ಮಹಿಳೆಯರಿಗೆ ಭಯ, ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಸತತ 48 ಗಂಟೆ ಸೇವೆ ಮಾಡಿ, ಬಳಲಿದ್ದ ಯುವ ಮಹಿಳಾ ವೈದ್ಯೆ ಮೇಲೆ ಅಮಾನುಷ್ಯ ಕೃತ್ಯ ಎಸಗಿದ ರಾಕ್ಷಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು.ಡಾ.ಲತಾ ರಾಮಚಂದ್ರಪ್ಪ, ಸಂಜೀವಿನಿ ಆಸ್ಪತ್ರೆ ಹಿರಿಯೂರು.