

ಹುಬ್ಬಳ್ಳಿ: ತಾಲೂಕಿನ ಕೋಳಿವಾಡದಲ್ಲಿ ಶುಕ್ರವಾರ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಮನೆಯ ಛಾವಣಿ ಹಾರಿಹೋಗಿದ್ದು, ಅಪಾರ ಹಾನಿ ಸಂಭವಿಸಿದೆ. ಮನೆಯ ಸೀಟ್ ಗಳು ಗಾಳಿಯ ಹೊಡೆತಕ್ಕೆ ಹಾರಿ ಹೋಗಿವೆ.
ಈಶ್ವರಪ್ಪ, ರುದ್ರಪ್ಪ ಹಾಗೂ ಶೇಖರಪ್ಪ ಕರಲಿಂಗನವರ ಎಂಬುವವರಿಗೆ ಸೇರಿದ ಮನೆಯೇ ಬಿರುಗಾಳಿಗೆ ಸಿಲುಕಿ ನಲುಗಿದೆ.
ಮದುವೆ ನಿಶ್ಚಯವಾಗಿದ್ದರಿಂದ ಬಂಧು ಬಾಂಧವರು ಸೇರಿ 30ಕ್ಕೂ ಹೆಚ್ಚು ಜನರು ಮನೆಯಲ್ಲಿ ಇದ್ದರು. ಇದೇ ಸಂದರ್ಭದಲ್ಲಿ ಬರಸಿಡಿಲಿನಂತೆ ಬಂದ ಬಿರುಗಾಳಿ ತಲ್ಲಣ ಸೃಷ್ಟಿಸಿದೆ. ಘಟನೆಯಲ್ಲಿ ಮಕ್ಕಳು ಸೇರಿ ನಾಲ್ಕೆದು ಜನರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಏ. 21ರಂದು ಮನೆಯ ಮುಂದೆ ಮದುವೆ ಮಾಡಲು ನಿಶ್ಚಯ ಮಾಡಲಾಗಿತ್ತು. ಇದಕ್ಕಾಗಿ ಮನೆ ತುಂಬ ಮದುವೆಗೆ ಬೇಕಾದ ಸಾಮಗ್ರಿ, ದಿನಸಿ, ಬಟ್ಟೆ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಛಾವಣಿ ಹಾರಿಹೋಗಿ ಮಳೆ ಸುರಿದಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮ ಲೆಕ್ಕಧಿಕಾರಿ ಭೇಟಿ ನೀಡಿ ಪ್ರಾಥಮಿಕ ವರದಿ ನೀಡಿದ್ದಾರೆ. ಗ್ರಾಮೀಣ ತಹಸೀಲ್ದಾರ್ ಜೆ.ಬಿ. ಮಜ್ಜಗಿ ಹಾಗೂ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದುವೆಗೆಂದು ತಂದಿದ್ದ ದಿನಸಿ ಪದಾರ್ಥ, ಬಟ್ಟೆ ಮುಂತಾದ ವಸ್ತುಗಳು ಹಾಳಾಗಿವೆ. ಎರಡೇ ದಿನದಲ್ಲಿ ಮದುವೆ ಇರುವುದರಿಂದ ದಿಕ್ಕು ತೋಚದಂತಾಗಿದೆ ಎಂದು ಕುಟುಂಬದವರು ಅಳಲು ತೋಡಿಕೊಂಡರು.
ಪ್ರಕೃತಿ ವಿಕೋಪ ನಿಧಿ ಅಡಿ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನ ಮಾಡುವುದಾಗಿ ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದರು.
ಪಿಡಿಒ ಎಪ್.ಡಿ. ತೋಟದ, ಗ್ರಾಮದ ಡಿ.ಬಿ. ಜಂತ್ಲಿ, ಶಿವಣ್ಣ ಹುಬ್ಬಳ್ಳಿ, ಮಲ್ಲಪ್ಪ ಕಾಳಿ, ಅಶೋಕ ದೇಸಾಯಿ, ಹನಮಂತಪ್ಪ ಬೂದಿಹಾಳ ಇತರರು ಇದ್ದರು.