ಕೋಳಿ ತ್ಯಾಜ್ಯ ಸುರಿಯುವವರಿಗೆ ದಂಡ, ತಿಪ್ಪೂರು ಪಂಚಾಯಿತಿ ನಿರ್ಧಾರ, ಪುನರಾವರ್ತನೆಯಾಗದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ

tippuru
Published on

ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪೂರು ಕೆರೆ ಏರಿ ಹಾಗೂ ರಸ್ತೆಗಳ ಬದಿ ಕೋಳಿ ತ್ಯಾಜ್ಯ ಸುರಿದಿದ್ದ ಅಂಗಡಿ ಮಾಲೀಕರಿಗೆ ತಿಪ್ಪೂರು ಪಂಚಾಯಿತಿ ವತಿಯಿಂದ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ಸ್ವಚ್ಛ ಪಂಚಾಯಿತಿ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಪಂಚಾಯಿತಿಗೆ ಕೋಳಿ ತ್ಯಾಜ್ಯ ಅವಾಂತರ ಸೃಷ್ಟಿಸುತ್ತಿದೆ. ರಾತ್ರಿ ವೇಳೆ ಅಂಗಡಿ ಮಾಲೀಕರು ತ್ಯಾಜ್ಯ ಸುರಿಯುವ ಚಾಳಿ ಬೆಳೆಸಿಕೊಂಡಿದ್ದಾರೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆ ಪಂಚಾಯಿತಿ ದಂಡಪ್ರಯೋಗ ನಡೆಸಿದೆ.

ಕಳೆದೆರಡು ದಿನದ ಹಿಂದೆ ಚೀಲಗಟ್ಟಲೆ ತ್ಯಾಜ್ಯ ತಂದು ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು. ಬೀದಿನಾಯಿ ಹಂದಿಗಳು ಮುಗಿಬಿದ್ದು ಚೀಲದಲ್ಲಿದ್ದ ಕೋಳಿ ತ್ಯಾಜ್ಯ ರಸ್ತೆ ತುಂಬೆಲ್ಲ ಹರಡಿ ಅವಾಂತರ ಸೃಷ್ಟಿಯಾಗಿತ್ತು. ತ್ಯಾಜ್ಯ ಭಕ್ಷಣೆಗೆ ಮುಗಿಬೀಳುವ ನಾಯಿಗಳ ಹಿಂಡು ಸಾರ್ವಜನಿಕರ ಮೇಲೂ ಎರಗುತ್ತಿದ್ದವು. ಇದರಿಂದ ಸಾರ್ವಜನಿಕರು ಭಯದಿಂದಲೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆರೆ ದಡದಲ್ಲಿ ಕೋಳಿ ತ್ಯಾಜ್ಯ ಸುರಿಯುವುದರಿಂದ ತ್ಯಾಜ್ಯ ಕೆರೆ ಒಡಲು ಸೇರುವ ಆತಂಕವಿದೆ.

ಸಾಂಕ್ರಾಮಿಕ ರೋಗ ಭೀತಿ: ತಿಪ್ಪೂರು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಗ್ರಾಮಗಳಿಂದ ಒಣ ಸಂಗ್ರಹಣೆ ಕಾರ್ಯ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹಸಿ ಹಾಗೂ ಒಣ ಕಸ ಸಂಗ್ರಹಣೆಯೂ ಆರಂಭವಾಗಲಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಆರ್.ತಿರುಪತಿ ತಿಳಿಸಿದ್ದಾರೆ.

ಕೋಳಿ ಅಂಗಡಿಗಳ ಮೇಲೆ ಗ್ರಾಪಂ ನಿಯಂತ್ರಣವಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕೋಳಿ ತ್ಯಾಜ್ಯ ಸುರಿಯವ ಚಾಳಿ ಹಿಂದಿನಿಂದಲೂ ಇದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಸೊಳ್ಳೆ ನೊಣದ ಕಾಟಕ್ಕೆ ದಾರಿಮಾಡಿಕೊಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆರೆ ಏರಿ ಮೇಲೆ ಸುರಿದಿದ್ದ ಕೋಳಿ ತ್ಯಾಜ್ಯ ತೆರವುಗೊಳಿಸಲಾಗಿದೆ. ಕೋಳಿ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಿ ನೋಟಿಸ್ ಸಹ ನೀಡಲಾಗಿದೆ. ಮತ್ತೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಎಂ.ಆರ್. ತಿರುಪತಿ, ಪಿಡಿಒ ತಿಪ್ಪೂರು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net