ಕೋಳಿ ತ್ಯಾಜ್ಯ ದುರ್ವಾಸನೆಗೆ ಹೈರಾಣ, ಕೆರೆಗೆ ವಿಷಪೂರಿತ ನೀರು ಹರಿಸುವ ಆರೋಪ, ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯರ ಪಟ್ಟು

26 dpt2 pemmanahalli bali koli tyajya prishilisuttva pd
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಸೋಂಪುರ ಹೋಬಳಿ ಪೆಮ್ಮನಹಳ್ಳಿ ಜನತೆಗೆ ಕೋಳಿ ತ್ಯಾಜ್ಯ ಕಂಟಕವಾಗಿ ಪರಿಣಮಿಸಿದೆ.
ಹೌದು. ಗ್ರಾಮದ ಸಮೀಪ ಜೈವಿಕ ಗೊಬ್ಬರ ಕಂಪನಿಯೊಂದು ವಿವಿಧ ನಗರಗಳಿಂದ ಕೋಳಿ ತ್ಯಾಜ್ಯ ತಂದು, ಅದರಿಂದ ಶ್ವಾನ ಹಾಗೂ ಮೀನುಗಳಿಗೆ ಫೀಡ್ಸ್ ತಯಾರಿಸುತ್ತಿದೆ. ಇದರಿಂದ ತ್ಯಾಜ್ಯ ದುರ್ವಾಸನೆ ಘಟಕದ ಅಕ್ಕಪಕ್ಕದ ಗ್ರಾಮಗಳಾದ ಪೆಮ್ಮನಹಳ್ಳಿ, ನಿಡವಂದ ಹಾಗೂ ನಿಡವಂದ ಕಾಲನಿಗೆ ವ್ಯಾಪಿಸಿದ್ದು, ಜನರು ವಾಸಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ವಿಷಪೂರಿತ ನೀರು ಕೆರೆಗೆ: ಕೋಳಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ವಿಷಪೂರಿತ ಹಾಗೂ ದುರ್ನಾತದ ನೀರನ್ನು ನಿಡವಂದ ಕೆರೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್.ಕೆ.ರಾಜು ಸೋಂಪುರ ಗ್ರಾಪಂಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಪಂನಿಂದ ಕಂಪನಿಗೆ ನೋಟಿಸ್ ನೀಡಲಾಗಿದೆ.
ಪಂಚಾಯಿತಿಯಿಂದ ಅನುಮತಿಯಾಗಲಿ ಅಥವಾ ನಿರಾಕ್ಷೇಪಣಾ ಪತ್ರವನ್ನಾಗಲಿ ಪಡೆಯದೆ ಖಾಸಗಿ ಜಮೀನಿನಲ್ಲಿ ಕಂಪನಿ ತೆರೆಯಲಾಗಿದೆ ಎನ್ನಲಾಗಿದೆ.

ಕಠಿಣ ಕ್ರಮವಿಲ್ಲ: ಕಂಪನಿಯಿಂದ ಹಬ್ಬುತ್ತಿರುವ ದುರ್ವಾಸನೆ ಮೂರ‌್ನಾಲ್ಕು ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರು ಹಾಗೂ ಸುತ್ತಮುತ್ತಲ ಕೈಗಾರಿಕೆಗಳಿಗೂ ಹರಡಿದೆ. ಕಾರ್ಮಿಕರು ದುರ್ವಾಸನೆಯುಕ್ತ ಗಾಳಿಯನ್ನೇ ಸೇವಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಆಡಳಿತ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸಾರ್ವಜನಿಕ ವಲಯದಿಂದ ದೂರು ಬಂದ ಹಿನ್ನೆಲೆಯಲ್ಲಿ ಕಂಪನಿಗೆ ನೋಟಿಸ್ ನೀಡಿದ್ದು, ಅವರ ಉತ್ತರವನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಕಂಪನಿ ನಡೆಸದಂತೆ ತಿಳಿಸಲಾಗಿದೆ.
ರವಿಶಂಕರ್, ಪಿಡಿಒ ಸೋಂಪುರ ಗ್ರಾಪಂ

ಪ್ರತಿದಿನ ರಾತ್ರಿ 10 ಗಂಟೆ ಬಳಿಕ ಕಂಪನಿಯಿಂದ ಕೋಳಿ ತ್ಯಾಜ್ಯವನ್ನು ಕ್ಯಾಂಟರ್‌ಗಳಲ್ಲಿ ತಂದು ಸಂಗ್ರಹಿಸುತ್ತಿದ್ದು, ರಾತ್ರಿ ಪಾಳಿಯಲ್ಲಿ ಮಾತ್ರ ಕೆಲಸ ನಿರ್ವಹಿಸಲಾಗುತ್ತಿದೆ. ಹಗಲಿನ ವೇಳೆ ಕಂಪನಿ ಬಳಿ ತೆರಳಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ಧ್ವನಿ ಎತ್ತಿದರೆ ಅಲ್ಲಿ ಯಾರೋಬ್ಬರೂ ಇರುವುದಿಲ್ಲ, ಊಟ ಮಾಡಲೂ ಸಾಧ್ಯವಾಗದಂತಾಗಿದೆ. ರಾತ್ರಿ ವೇಳೆ ಕಂಪನಿ ಬಳಿ ತೆರಳಿದರೆ ಪೊಲೀಸರನ್ನು ಕರೆಸಿ ಸಾರ್ವಜನಿಕರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
ತಿಮ್ಮಪ್ಪಯ್ಯ, ಪೆಮ್ಮನಹಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net