

ವಿಜಯಪುರ: ಕೊಲ್ಹಾರ ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಬುಧವಾರ ಭೇಟಿ ನೀಡಿ ಸರ್ಕಾರದ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ ಟಿ.ಭೂಬಾಲನ್, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ್ ಒನ್ ಕೇಂದ್ರ, ತಹಸೀಲ್ದಾರ್ ಕಚೇರಿ, ರೈತ ಸಂಪರ್ಕ ಕೇಂದ್ರ, ಪಟ್ಟಣ ಪಂಚಾಯತ್ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ತೆಲಗಿಯ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿ, ಮನೆ ಒಡತಿಗೆ 2 ಸಾವಿರ ರೂ. ಹಣ ನೀಡುವ ಯೋಜನೆಯಡಿ ನೋಂದಣಿಗೆ ಬಾಕಿ ಇರುವ ಅರ್ಜಿಗಳನ್ನು ತ್ವರಿತ ವಿಲೇ ಮಾಡುವಂತೆ ಸೂಚಿಸಿದರಲ್ಲದೇ ನಿರ್ಲಕ್ಷೃ ವಹಿಸಿದ್ದಲ್ಲಿ ಸಂಬಂಧಿಸಿದವರನ್ನು ಹೊಣೆಗಾರನ್ನಾಗಿಸಲಾಗುವುದು ಎಂದರು.
ಕೊಲ್ಹಾರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಅವರು, ಭೂಮಿ ಮತ್ತು ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಕಾಲ ಯೋಜನೆಯಡಿ ನೋಂದಣಿಯಾದ ಅರ್ಜಿಗಳ ಮಾಹಿತಿ ಪಡೆದುಕೊಂಡು, ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಲು ಕ್ರಮ ವಹಿಸಿ, ಪ್ರಮಾಣ ಪತ್ರಗಳನ್ನು ವಿತರಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.
ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಬಿತ್ತನೆ ಬೀಜದ ಕುರಿತು ಮಾಹಿತಿ ಪಡೆದುಕೊಂಡ ಅವರು, ಸ್ಥಳದಲ್ಲಿದ್ದ ರೈತರೊಂದಿಗೆ ಬೆಳೆಗಳ ಕುರಿತು ಚರ್ಚಿಸಿದರು. ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿಟ್ಟುಕೊಳ್ಳಬೇಕು. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣ ಪಂಚಾಯತ್‌ಗೆ ಭೇಟಿ ನೀಡಿ, ಆಸ್ತಿ ನೋಂದಣಿ ಕುರಿತು ಮಾಹಿತಿ ಪಡೆದುಕೊಂಡರು. ಕೊಲ್ಹಾರದಲ್ಲಿ ಉದ್ದೇಶಿತ ಮಿನಿ ವಿಧಾನಸೌಧ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗೆ ಪರಿಶೀಲಿಸಿದ ಅವರು, ಸಾರ್ವಜನಿಕರಿಗೆ ಅನುಕೂಲವಾಗುವ ಸೂಕ್ತ ಸ್ಥಳವನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಕೊಲ್ಹಾರ್ ತಹಸೀಲ್ದಾರ್ ಎಸ್.ಎಸ್. ನಾಯ್ಕಲ್‌ಮಠ, ಪಪಂ ಮುಖ್ಯಾಧಿಕಾರಿ ವಿರೇಶ ಹತ್ತಿ ಮತ್ತಿತರರಿದ್ದರು.