ಮೂಲ ಸೌಲಭ್ಯ ಒದಗಿಸಲು ಗೊಲ್ಲರ ಆಗ್ರಹ

KLR 4-1
Published on

ಕೊಲ್ಹಾರ: ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ 14ನೇ ವಾರ್ಡಿನಲ್ಲಿ ನಿವಾಸಿಗಳಾದ ಹಂದಿಜೋಗಿ (ಗೊಲ್ಲರ) ಸಮುದಾಯದವರು ಯುವಮುಖಂಡ ಚಂದ್ರಶೇಖರ ಬೆಳ್ಳುಬ್ಬಿ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರ್ ಎಂ.ಎ.ಎಸ್. ಬಾಗವಾನ್ ಅವರಿಗೆ ಮನವಿ ಸಲ್ಲಿಸಿದರು.
ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ಹಂದಿಜೋಗಿ (ಗೊಲ್ಲರ) ಸಮುದಾಯದವರಿಗೆ ಯಾವುದೇ ನಿವೇಶನ, ವಸತಿ ಸೌಕರ್ಯಗಳು ದೊರೆಯುತ್ತಿಲ್ಲ. ಸಮರ್ಪಕ ಶಿಕ್ಷಣ ದೊರಕದೇ ಇವರ ಮಕ್ಕಳನ್ನು ಅನಕ್ಷರತೆಕಾಡುತ್ತಿದ್ದು, ಜಾತಿ ಪ್ರಮಾಣಪತ್ರವೂ ದೊರೆತ್ತಿಲ್ಲ. ಪಕ್ಕದ ಜಿಲ್ಲೆಯಲ್ಲಿ ಗೊಲ್ಲರ ಸಮುದಾಯದವರಿಗೆ ಹಂದಿಜೋಗಿ ಎಂಬ ಜಾತಿ ಪ್ರಮಾಣಪತ್ರ ದೊರಕುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ದೊರಕದೇ ಇರುವುದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ಇವರು ವಂಚಿತವಾಗುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಸರ್ಕಾರದ ಗಮನಸೆಳೆದು ವಿಜಯಪುರ ಜಿಲ್ಲೆಯಲ್ಲಿ ವಾಸಿಸುವ ವಿಶೇಷವಾಗಿ ಕೊಲ್ಹಾರದ ಹನಮಗೊಲ್ಲರ ಸಮುದಾಯದವರಿಗೆ ಹಂದಿಜೋಗಿ ಎಂಬ ಜಾತಿ ಪ್ರಮಾಣಪತ್ರ ದೊರಕಲು ಕ್ರಮ ಕೈಗೊಳ್ಳಬೇಕೆಂದು ಚಂದ್ರಶೇಖರ ಬೆಳ್ಳುಬ್ಬಿ ತಹಸೀಲ್ದಾರ್‌ರಲ್ಲಿ ವಿನಂತಿಸಿದರು.
14ನೇ ವಾರ್ಡಿನಲ್ಲಿ ವಾಸಿಸುತ್ತಿರುವ ಗೊಲ್ಲರ ಸಮುದಾಯದ ಗುಡಿಸಲು ಮತ್ತು ಮನೆಗಳ ಸುತ್ತಮುತ್ತ ಚರಂಡಿ ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಅದಕ್ಕೆ ಪಟ್ಟಣ ಪಂಚಾಯಿತಿ ತಕ್ಷಣವೇ ಪರಿಹಾರ ಕೈಗೊಂಡು, ನಾಗರಿಕರು ವಾಸಿಸಲು ಯೋಗ್ಯ ವಾತಾವರಣ ನಿರ್ಮಿಸಿಕೊಡಬೇಕೆಂದು ಚಂದ್ರಶೇಖರ ಬೆಳ್ಳುಬ್ಬಿ ಆಗ್ರಹಿಸಿದರು.
20 ದಿನಗಳೊಳಗಾಗಿ ಯಾವುದೇ ನೆಪಹೇಳದೇ ನಿರ್ಲಕ್ಷೃ ಮಾಡದೇ ಸೂಕ್ತ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದರು.
ಪಿಕೆಪಿಎಸ್ ಉಪಾಧ್ಯಕ್ಷ ದುಂಡಪ್ಪ ಕೊಠಾರಿ, ಆಶೋಕ ಮುದಕವಿ, ಮಾರುತಿ ಭಜಂತ್ರಿ, ಪರಶುರಾಮ ಹಣುಮಗೊಲ್ಲರ, ಲಕ್ಷ್ಮಣ ಹಣುಮಗೊಲ್ಲರ, ಯಲ್ಲವ್ವ ಹಣುಮಗೊಲ್ಲರ, ಗಂಗವ್ವ ಗೊಲ್ಲರ ಸೇರಿದಂತೆ 40 ಕುಟುಂಬಗಳ ಮಹಿಳಯರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net