ಕೊಲ್ಹಾರ ಪಪಂಗೆ ಅವಿರೋಧ ಆಯ್ಕೆ

KL 9-1
Published on

ಕೊಲ್ಹಾರ: ನಿರೀಕ್ಷೆಯಂತೆಯೇ ಕೊಲ್ಹಾರ ಪಟ್ಟಣ ಪಂಚಾಯತಿಯ 2ನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮೇಲುಗೈ ಸಾಧಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಿ ನಾಗಪ್ಪ ಕೋಲಕಾರ, ಉಪಾಧ್ಯಕ್ಷ ಸ್ಥಾನಕ್ಕೆ ಗೈಬುಸಾಬ ಕಂಕರಪೀರ್ ಇಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು.

ಪಟ್ಟಣ ಪಂಚಾಯಿತಿಯ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಚುನಾವಣೆ ಅಧಿಕಾರಿಗಳಾಗಿ ಕೊಲ್ಹಾರ ತಹಸೀಲ್ದಾರ್ ಎಂ.ಎ.ಎಸ್. ಭಾಗವಾನ ಭಾಗವಹಿಸಿದ್ದರು. ಅತ್ಯಂತ ತುರುಸಿನಿಂದ ಕೂಡಿದ್ದ 2ನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯು ಸಂಸದ ರಮೇಶ ಚಿಗಜಿಣಗಿ ಮತ್ತು ಕಾಂಗ್ರೆಸ್ ಪಕ್ಷದಿಂದ ಆರಿಸಿಬಂದ ಗೈಬುಸಾಬ ಕಂಕರಪೀರ, ಬುಡ್ಡೇಸಾಬ ನದಾಫ್ ಇಬ್ಬರು ಸದಸ್ಯರು ಹಾಗೂ ಪಕ್ಷೇತರ ಸದಸ್ಯ ಸಿದ್ದು ಗುಣಕಿಯವರ ಬೆಂಬಲ ಪಡೆದು ಸರಳ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಮೂವರ ಸದಸ್ಯರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿಯಿಂದ ಚುನಾಯಿತರಾಗಿದ್ದ ಬನಪ್ಪ ಬಾಲಗೊಂಡ, ಪಕ್ಷೇತರ ಸದಸ್ಯರಾದ ಈರಣ್ಣ ಗು. ಗಡ್ಡಿಪೂಜಾರಿ, ಅಲ್ಲಾಭಿ ನೂರಲಿಸಾಬ್ ವಾಲಿಕಾರ, ಚುನಾವಣಾ ಪ್ರಕ್ರಿಯೆಯಿಂದ ಗೈರು ಉಳಿದರು. ಒಟ್ಟು 17 ಸದಸ್ಯರ ಪಟ್ಟಣ ಪಂಚಾಯಿತಿಯಲ್ಲಿ ಒಬ್ಬ ಸದಸ್ಯರು ಮೃತಪಟ್ಟಿದ್ದು, ಬಿಜೆಪಿಯ 7 ಜನ, ಸಂಸದರು ಸೇರಿ 8 ಜನ ಬಿಜೆಪಿ ಪಕ್ಷದವರಾದರೆ, ಒಬ್ಬ ಪಕ್ಷೇತರ ಸದಸ್ಯ ಹಾಗೂ ಕಾಂಗ್ರೆಸ್‌ನ ಇಬ್ಬರು ಸದಸ್ಯರು ಸೇರಿ ಒಟ್ಟು 11 ಜನ ಚುನಾವಣೆಯಲ್ಲಿ ಭಾಗವಹಿಸಿದ್ದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೊಲ್ಹಾರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಶ್ರಮಿಸುವ ಜತೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಚಾಚೂ ತಪ್ಪದೆ ಕೆಲಸವನ್ನು ಮಾಡಿಕೊಡಬೇಕು. ಈ ದಿಸೆಯಲ್ಲಿ ನನ್ನಿಂದ ಏನಾದರೂ ಸಹಾಯಬೇಕಾದರೆ ನಿಯಮಗಳಿಗೆ ಸೇವೆ ಒದಗಿಸಲು ನಾನು ಸದಾವಕಾಲ ಶ್ರಮಿಸುತ್ತೇನೆ. ಯುವಕರಾದ ಅಧ್ಯಕ್ಷ ಉಪಾಧ್ಯಕ್ಷರು ಭವಿಷ್ಯದ ದೃಷ್ಟಿಯಿಂದ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಲು ಆಶೀರ್ವಾದ ಮೂಲಕ ಸಲಹೆ ಕೊಟ್ಟರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪಕ್ಷದ ಮುಖಂಡರಾದ ಹಮಜಾಹುಶೇನಿ ಕಂಕರಪೀರ್, ಬಾಬು ಭಜಂತ್ರಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಸುಭಾಸ ಭಜಂತ್ರಿ, ಜಾವೇದ್ ಗಿರಗಾಂವಿ, ರಸೂಲಸಾಬ ಗಿರಗಾಂವಿ, ಮಂಜುನಾಥ ತುಂಬರಮಟ್ಟಿ, ರಾಜು ವಡ್ಡರ, ಹಲವಾರು ಪ್ರಮುಖರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net