ಕೊಳವೆಬಾವಿಗಳ ನೋಂದಣಿ ಕಡ್ಡಾಯ, ಜಿಲ್ಲಾ ಅಂತರ್ಜಲ ಸಮಿತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ಸೂಚನೆ

borewel
Published on

ಬೆಂಗಳೂರು: ಗ್ರಾಮಾಂತರ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಉದ್ದೇಶಕ್ಕಾಗಿ ಕೈಗಾರಿಕೆಗಳು ಮತ್ತು ಕೃಷಿಗಾಗಿ ರೈತರು ಕೊರೆದಿರುವ ಕೊಳವೆ ಬಾವಿಗಳ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್ ತಿಳಿಸಿದರು.

ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಅಂತರ್ಜಲ ಸಮಿತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಾದ್ಯಂತ ಸಫಲ ಮತ್ತು ವಿಫಲ ಕೊಳವೆಬಾವಿಗಳ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಹೇಳಿದರು.

ರೈತರು ಕೊರೆದಿರುವ ಕೊಳವೆ ಬಾವಿಗಳ ಪ್ರಸ್ತುತ ಬಳಕೆದಾರರು, ವಾಣಿಜ್ಯ, ಕೈಗಾರಿಕೆ ಮತ್ತು ಮನರಂಜನೆಗಾಗಿ ಅಗತ್ಯ ಹೆಚ್ಚುವರಿ ನೀರಿನ ಬಳಕೆಗಾಗಿ ಕೊಳವೆ ಬಾವಿ ಕೊರೆಯಲು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಅನಧಿಕೃತವಾಗಿ ಕೊರೆದಿರುವ ಕೊಳವೆ ಬಾವಿಗಳ ಬಗ್ಗೆ ಸವಿವರವಾಗಿ ಅರ್ಜಿ ಸಲ್ಲಿಸಿ ಜಿಲ್ಲಾ ಅಂತರ್ಜಲ ಸಮಿತಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಹೇಳಿದರು.

ಜಿಲ್ಲೆಯಲ್ಲಿನ ರೈತರಿಗೆ ಮತ್ತು ಕಾರ್ಖಾನೆಗಳಿಗೆ ಮಳೆನೀರು ಸಂಗ್ರಹಣೆಗೆ ್ಚ ಆದ್ಯತೆ ನೀಡುವ ಮೂಲಕ ಮಳೆನೀರು ಕೊಯ್ಲು ಪದ್ದತಿಯನ್ವಯ ಅಂತರ್ಜಲ ಮಟ್ಟ ಹೆಚ್ಚಿಸಲು ಇಂಗು ಗುಂಡಿಗಳು ಮತ್ತು ಕೃಷಿ ಹೊಂಡಗಳ ನಿರ್ಮಾಣ ಮಾಡಲು ಜಾಗೃತಿ ಮೂಡಿಸಬೇಕು. ಜಿಲ್ಲೆಯ ಬೆಸ್ಕಾಂ ನೇತೃತ್ವದಲ್ಲಿ ಕೊಳವೆ ಬಾವಿಗಳ ಗಣತಿ ಕಾರ್ಯವನ್ನು ನಡೆಸಿ ಅನಧಿಕೃತ ಕೊಳವೆ ಬಾವಿಗಳನ್ನು ಗುರುತಿಸಿ ಎಂದು ಜಿಲ್ಲಾ ಅಂತರ್ಜಲ ಸಮಿತಿಗೆ ಸೂಚಿಸಿದರು.

ಶೀಘ್ರ ಅನುಮತಿ: ನರೇಗಾ ಯೋಜನೆಯ ಅನುದಾನದಡಿ ವಿ.ಆರ್ ತಂತ್ರಜ್ಞಾನ ಬಳಸಿ ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಶೇ.100 ಮಳೆನೀರು ಸಂಗ್ರಹಿಸುವ ಮತ್ತು ಮರುಬಳಕೆ ಮಾಡುವಂತಹ ಕೈಗಾರಿಕೆಗಳಿಗೆ ಅಗತ್ಯ ಕುಡಿಯುವ ನೀರಿನ ಬಳಕೆಗಾಗಿ ಕೊಳವೆ ಬಾವಿ ಕೊರೆಯಲು ಶೀಘ್ರವಾಗಿ ಅನುಮತಿ ನೀಡಲಾಗುವುದು ಎಂದು ಎಡಿಸಿ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ಕೆ.ಕರಿಯಪ್ಪ, ಜಿಲ್ಲಾ ಅಂತರ್ಜಲ ಸಮಿತಿ ಹಿರಿಯ ಭೂ ವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ ಪಲ್ಲವಿ ಸೇರಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net