

ವಿರಾಜಪೇಟೆ: ಆರಾಯಿರ ನಾಡ್‌ರ ವಾರ್ಷಿಕ ಪುತ್ತರಿ ಕೋಲಾಟ್ ವಿವಿಧ ಜಾನಪದ ಪ್ರಕಾರಗಳ ಪ್ರದರ್ಶನದ ಮೂಲಕ ಸಂಪನ್ನಗೊಂಡಿತು.
ವಿರಾಜಪೇಟೆಯ ಆರಾಯಿರ ನಾಡ್ ಬೈರನಾಡ್, ಎಡೆನಾಡ್, ಬೇಟೋಳಿನಾಡ್, ಮತ್ತು ಪೆರುವನಾಡ್ ಎಂಬ ನಾಲ್ಕು ನಾಡುಗಳಾಗಿ ವಿಂಗಡಣೆಗೊಂಡ 17 ಗ್ರಾಮಗಳ ಗ್ರಾಮಸ್ಥರ ಪುತ್ತರಿ ಕೋಲಾಟ ವಿರಾಜಪೇಟೆ ಕೊಡವ ಸಮಾಜದ ಬಳಿಯ ಪೂಮಾಲೆ ಮಂದ್‌ನಲ್ಲಿ ಪ್ರದರ್ಶನಗೊಂಡಿತು.
ಕೊಡಗಿನ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕೈಯಲ್ಲಿ ಕೂಲು ಹಿಡಿದ ಗ್ರಾಮಸ್ಥರಿಗೆ ಕೊಡಗಿನ ಸಾಂಪ್ರದಾಯದ ವಾಲಗ ಸ್ವಾಗತ ಕೋರಿತು. ಮಂದ್‌ನ ಹೃದಯ ಭಾಗದಲ್ಲಿರುವ ಆಲದ ಮರಕ್ಕೆ ಹಿರಿಯರಿಂದ ಪ್ರಥಮ ಪೂಜೆ ಸಲ್ಲಿಕೆಯಾಯಿತು. ನಾಲ್ಕು ಭಾಗದ ಗ್ರಾಮಸ್ಥರು ವಾರ್ಷಿಕ ಕೋಲಾಟಕ್ಕೆ ಚಾಲನೆ ನೀಡಿದರು. ಪೂಮಾಲೆ ಮಂದ್‌ನಲ್ಲಿ ಮೂರು ಸುತ್ತಿನ ಕೋಲಾಟ, ಏಳು ಜೋಡಿಯ ಪರಿಯಕಳಿ, ವಾಲಗತ್ತಾಟ್ ನಡೆಯಿತು. ಕೋಲಾಟದ ಪ್ರಕಾರಗಳನ್ನು ಪ್ರದರ್ಶನ ಮಾಡುವವರು ವಾಲಗ ನುಡಿಸುವವರ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ಪ್ರಥಮ ಬಾರಿಗೆ ಉತ್ತಮ ಕೊಲಾಟ್ ಪ್ರದರ್ಶನ ನೀಡಿದ ಪಟುವಿಗೆ ಕಬ್ಬಚ್ಚೀರ ಕಾರ್ಯಪ್ಪ ಅವರ ಜ್ಞಾಪಕಾರ್ಥ ಮಕ್ಕಳಾದ ಬೋಪಣ್ಣ ಮತ್ತು ನಂಜಪ್ಪ ನೀಡಿರುವ ರೋಲಿಂಗ್ ಟ್ರೋಫಿಯನ್ನು ಮಗ್ಗುಲ ಗ್ರಾಮದ ಚೋವಂಡ ನಿಖಿಲ್ ಪಡೆದುಕೊಂಡರು. ಪರಿಯ ಕಳಿ ಸ್ಪರ್ಧೆಯಲ್ಲಿ ಬೇಟೋಳಿ ಗ್ರಾಮದ ಬೊಪ್ಪಚಂಡ ಮಾಚಯ್ಯ ಮತ್ತು ಕಬ್ಬಚ್ಚೀರ ಮಾಚಯ್ಯ ಪ್ರಥಮ ಸ್ಥಾನ ಪಡೆದುಕೊಂಡರು. ತ್ರಿವೇಣಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಚೌರಿ ಆಟ್ ಮತ್ತು ಬಾಲಕಿಯರಿಂದ ಉಮ್ಮತಾಟ್ ಪ್ರದರ್ಶನ ನಡೆಯಿತು. ವಿವಿಧ ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆರಾಯಿರ ನಾಡ್ ಕೋಲ್ ಮಂದ್ ಆಯೋಜಕರ ಸಮಿತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪೂಮಾಲೆ ಮಂದ್ ಸಮಿತಿ ಅಧ್ಯಕ್ಷ ಅಜ್ಜಿನಿಕಂಡ ಸುಧೀರ್ ಉಪಾಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ, ಮರಣ ಫಂಡ್ ಅಧ್ಯಕ್ಷರಾದ ಚೇಂದಂಡ ಪೊನ್ನಪ್ಪ, ಕ್ರೀಡಾ ಸಮಿತಿ ಅಧ್ಯಕ್ಷರಾದ ಪುಗ್ಗೇರ ನಂದಾ ಮತ್ತು ಸಮಿತಿಯ ಸದಸ್ಯರು ಸೇರಿದಂತೆ ಬೈರನಾಡ್ ಭಾಗದ ಹಾಲುಗುಂದ, ಒಂಟಿಅಂಗಡಿ, ದೇವಣಗೇರಿ, ತಲಗಟ್ಟಕೇರಿ, ಮತ್ತು ಹಚ್ಚಿನಾಡು ಗ್ರಾಮಗಳು, ಎಡೆನಾಡು ಭಾಗದ ಕುಕ್ಲೂರು, ಚೆಂಬೆಬೆಳ್ಳೂರು, ಐಮಂಗಲ, ಮಗ್ಗುಲ, ವೈಪಡ ಗ್ರಾಮಗಳು ಬೇಟೊಳಿನಾಡ್ ಭಾಗದ ಆರ್ಜಿ, ಬೇಟೋಳಿ ಗ್ರಾಮಗಳು ಪೆರುವನಾಡ್ ಭಾಗದ ಬಿಟ್ಟಂಗಾಲ ನಾಂಗಾಲ ಮತ್ತು ಬಾಳುಗೋಡು ಗ್ರಾಮಗಳ ಗ್ರಾಮಸ್ಥರು ಅಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕೋಲಾಟ ಪ್ರದರ್ಶನ ಕಣುಂಬಿಕೊಂಡರು.