ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮ

kolat
Published on

ಮಡಿಕೇರಿ:

ಕೊಡಗಿನ ಆದಿ ಮೂಲ ನಿವಾಸಿ ಜನಾಂಗವಾಗಿರುವ ಕೊಡವರು ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿ ನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಹೇಳಿದರು. ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ಶನಿವಾರ ನಡೆದ ಉಮ್ಮೇಟಿ ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ತಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್ ಕೊಡವರ ಜವಾಬ್ದಾರಿ ಅಧಿಕವಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗದಲ್ಲಿರುವ ನಾಲ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ. ಏಳ್‌ನಾಡ್ ಎಂದರೆ ಕೊಡವಾಮೆಯ ಗೂಡು ಎನ್ನುವ ನಂಬಿಕೆ ಇದೆ. ಆದರೆ ಅದು ಇಂದಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಆ ಗೂಡನ್ನ ನಾವು ಉಳಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.

ಕೊಡಗಿನ ಮೂರು ಪ್ರಮುಖ ಭಾಗಗಳಾದ ಕ್‌ಗ್ಗಟ್ಟ್, ಮೇಂದಲೆ ಹಾಗೂ ಏಳ್‌ನಾಡ್ ಭಾಗಗಳನ್ನು ತುಲನೆ ಮಾಡಿದರೆ, ಪದ್ಧತಿ ಪರಂಪರೆ, ಆಟ್ ಪಾಟ್‌ಗಳಲ್ಲಿ ಏಳ್‌ನಾಡ್ ಮುಂಚೂಣಿಯಲ್ಲಿ ಇದೆ. ಆದರೆ ಕೊಡವಾಮೆಗೆ ಸಂಬAಧಿಸಿ ಹೋರಾಟದ ವಿಚಾರಕ್ಕೆ ಬಂದಾಗ ನಾವು ಸಾಕಷ್ಟು ಹಿಂದೆ ಇದ್ದೇವೆ. ಮೇಂದಲೆ ಮತ್ತು ಕ್‌ಗ್ಗಟ್ಟ್ ನಾಡಿನೊಂದಿಗೆ ನಾವೂ ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಕೊಡವಾಮೆಯ ಬೆಳವಣಿಗೆಗೆ ಮತ್ತಷ್ಟು ಪ್ರಖರತೆ ದೊರೆಯಲಿದೆ. ಆಟ್ ಪಾಟ್, ಪದ್ಧ್ದತಿ ವಿಚಾರದಲ್ಲೂ ಏಳ್‌ನಾಡ್ ತನ್ನ ಗತ ವೈಭವವನ್ನು ಕಳೆದುಕೊಳ್ಳುತ್ತಿದ್ದು, ಕಲೆ ಸಂಸ್ಕೃತಿಯ ಜೊತೆಗೆ ಕೊಡವಾಮೆಯ ಉಳಿವಿಗೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಏಳ್‌ನಾಡ್ ಭಾಗದ ಪ್ರಮುಖ ಸಮಾಜಗಳಾದ ಮಡಿಕೇರಿ, ಮಕ್ಕಂದೂರು, ಮಾದಾಪುರ, ಗರ್ವಾಲೆ ಕೊಡವ ಸಮಾಜಗಳು ಒಮ್ಮತದ ಯೋಜನೆಯನ್ನು ತಯಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಕ್‌ಗ್ಗಟ್ಟ್ ಮತ್ತು ಮೇಂದಲೆ ನಾಡ್‌ಗಳೊಂದಿಗೆ ಕೈ ಜೋಡಿಸಿದರೆ, ಕೊಡವರ ಒಗ್ಗಟ್ಟಿಗೆ ಮತ್ತಷ್ಟು ಬಲ ಬರಲಿದೆ ಈ ನಿಟ್ಟಿನಲ್ಲಿ ಚಿಂತಿಸುವAತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಜನಾಂಗದ ಏಳಿಗೆಗೆ ಮಕ್ಕಂದೂರು ಕೊಡವ ಸಮಾಜ ಎಂದಿಗೂ ಮುಂದೆ ನಿಂತಿದ್ದು, ಮುಂದೆಯೂ ಯಾವುದೇ ಸಂದರ್ಭದಲ್ಲಿಯೂ ನಾವು ಜನಾಂಗದ ಜೊತೆ ನಿಲ್ಲಲಿದ್ದೇವೆ. ಮುಂದಿನ ದಿನಗಳಲ್ಲಿ ಯುವಕರನ್ನು ಕೊಡವಾಮೆಯತ್ತ ಸೆಳೆಯಲು ಹಲವು ಯೋಜನೆಗಳನ್ನು ಸಿದ್ಧ್ದಪಡಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿ ಕೊಡವ ಸಮಾಜದ ಮಹಿಳಾ ಘಟಕ ಮತ್ತು ಯುವ ಘಟಕ ಶ್ರಮಿಸುತ್ತಿದೆ. ಸರ್ವರೂ ಸಹಕರಿಸಿದರೆ ಕೆಲವೇ ವರ್ಷಗಳಲ್ಲಿ ಪ್ರಬುದ್ಧ ಕೊಡವಾಭಿಮಾನದ ಸಮಾಜವಾಗಿ ರೂಪಿಸಲು ಪಣತೊಡುವುದಾಗಿ ಹೇಳಿದರು.

ಮಕ್ನಾಡ್ ತಕ್ಕ ಸಬ್ಬುಡ ದಿನೇಶ್, ಪಾಲೇರಿ ನಾಡ್ ತಕ್ಕ ಐಮುಡಿಯಂಡ ದೇವಯ್ಯ, ಬದಿಗೇರಿ ನಾಡ್‌ತಕ್ಕ ಶಾಂತೆಯAಡ ರಾಜೇಶ್ ಕಾವೇರಪ್ಪ, ಕಾರ್ಯದರ್ಶಿ ಮುಲುವೆರ ಬಿದ್ದಪ್ಪ, ಮಕ್ಕಂದೂರು ಕೊಡವ ಸಮಾಜ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಮಹಿಳಾ ಘಟಕ, ಯುವ ಘಟಕದ ಪಧಾದಿಕಾರಿಗಳು, ಸದಸ್ಯರು, ಸಮಾಜ ವ್ಯಾಪ್ತಿಯ ಕೊಡವಾಭಿಮಾನಿಗಳು ಹಾಜರಿದ್ದರು.

ಕಾರ್ಯಕ್ರಮದ ಮೊದಲಿಗೆ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಉಮ್ಮೇಟಿ ಮಂದ್‌ನಲ್ಲಿ ಕೋಲಾಟ ಆಡುವ ಮೂಲಕ ಸಂಭ್ರಮಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net