

ಮಡಿಕೇರಿ:
ಇಲ್ಲಿನ ಐತಿಹಾಸಿಕ ಕೋಟೆ ಆವರಣದಲ್ಲಿ ಭಾನುವಾರ ಮಧ್ಯಾಹ್ನ ನಂತರ ಓಂಕಾರೇಶ್ವರ ದೇಗುಲ, ಪಾಂಡೀರ ಕುಟುಂಬ ಹೆಬ್ಬೆಟ್ಟಗೇರಿ ಹಾಗೂ ಕೊಡವ ಸಮಾಜದ ವತಿಯಿಂದ ‘ಪುತ್ತರಿ ಕೋಲಾಟ’ ನಡೆಯಿತು.
ಮೊದಲಿಗೆ ಪಾಂಡೀರ ಕುಟುಂಬಸ್ಥರು ಕೋಟೆ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ದೇವರನ್ನು ಪ್ರಾರ್ಥಿಸಿದರು. ನಂತರ ಕೋಟೆ ಆವರಣ ತಲುಪಿದರು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಭಾಗಿಯಾಗಿ ಕೊಡಗಿನ ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕು ಎಂದು ಶುಭ ಹಾರೈಸಿದರು.
ಪಾಂಡೀರ ಕುಟುಂಬದ ಸದಸ್ಯರು ಮೊದಲಿಗೆ ಕೋಲಾಟ ಪ್ರದರ್ಶಿಸಿದರು. ಬಳಿಕ ಪಾಂಡೀರ ಕುಟುಂಬದ ಮಹಿಳೆಯರು ಉಮ್ಮತಾಟ್ ಪ್ರದರ್ಶಿಸಿದರು. ನಂತರ, ಕೊಡವ ಸಮಾಜದ ಸದಸ್ಯರು ಕೋಲಾಟ ಮತ್ತು ಮಹಿಳೆಯರು ಉಮ್ಮತಾಟ್ ಪ್ರದರ್ಶಿಸಿದರು. ನಂತರ, ಪಾಂಡೀರ ಕುಟುಂಬದ ಸದಸ್ಯರು ಹಾಗೂ ಕೊಡವ ಸಮಾಜದ ಸದಸ್ಯರು ಬೊಳಕಾಟ್ ಪ್ರದರ್ಶನ ನೀಡಿದರು. ಕೊನೆಯಲ್ಲಿ ಕೊಡವ ಸಮಾಜದ ಸದಸ್ಯರು ಹಾಗೂ ಪಾಂಡೀರ ಕುಟುಂಬದ ಸದಸ್ಯರು ಪರೆಯಕಳಿಯನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ನಂತರ ನಡೆದ ವಾಲಗ ನೃತ್ಯದಲ್ಲಿ ಸೇರಿದ್ದ ಜನರೆಲ್ಲರೂ ಭಾಗಿಯಾಗುವ ಮೂಲಕ ಗಮನ ಸೆಳೆದರು. ಪ್ರವಾಸಿಗರೂ ಸೇರಿದಂತೆ ಕೊಡವ ಸಮಾಜ ಹಾಗೂ ಪಾಂಡೀರ ಕುಟುಂಬದ ಸದಸ್ಯರು ಮೊಬೈಲ್‌ಗಳಲ್ಲಿ ಈ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಕಂಡುಬAತು.
ಹುತ್ತರಿ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲೂ ಸಾಂಪ್ರದಾಯಿಕ ಹುತ್ತರಿ ಕೋಲಾಟ ನಡೆಯಿತು. ಭಾಗಮಂಡಲ ವ್ಯಾಪ್ತಿಯ ಚೇರಂಗಾಲ, ಕೋರಂಗಾಲ, ತಾವೂರು ಹಾಗೂ ತಣ್ಣಿಮಾನಿ ಗ್ರಾಮಸ್ಥರು ಭಾಗಮಂಡಲದ ಕೋಲಾಟ ಬಾಣೆಯಲ್ಲಿ ಕೋಲಾಟ ಪ್ರದರ್ಶನ ನೀಡಿದರು.