ಪಾರ್ಕ್​ಗಳ ಸ್ವಚ್ಛತೆಗೆ ಕೋಲಾರಮ್ಮ ಕಾರ್ಯಪಡೆ

dc
Published on

ಕೋಲಾರ: ಜಿಲ್ಲೆಯಲ್ಲಿ ಉದ್ಯಾನವನಗಳ ಸ್ವಚ್ಛತೆ ಮಾಡುವ ನಿಟ್ಟಿನಲ್ಲಿ ವಿಶೇಷವಾಗಿ ಜಿಲ್ಲೆಯ ತಂಡವೊಂದನ್ನು ರಚನೆ ಮಾಡಿ ಜಿಲ್ಲೆಯ ಎಲ್ಲ ಉದ್ಯಾನವನಗಳ ಸ್ವಚ್ಛತೆ ಕಾಪಾಡುವುದು ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲು ಕೋಲಾರಮ್ಮ ಸ್ವಚ್ಛತಾ ಕಾರ್ಯ ಪಡೆ ಸಿದ್ಧವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಯ ನಗರಗಳಲ್ಲಿನ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್​ ಪೋರ್ಸ್​ ರಚಿಸುವ ಬಗ್ಗೆ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಕೋಲಾರ ನಗರಸಭೆಯ ಸರ್ವಜ್ಞ ಉದ್ಯಾನವನದಲ್ಲಿ ಬ್ಯಾಂಡ್​ ಸ್ಟೇಜ್​ ಮತ್ತು ಟಿ.ವಿ ವೀಕ್ಷಣೆ ಕಟ್ಟಡ ದುರಸ್ತಿಪಡಿಸಲು ಸೂಚಿಸಿ, ಸಾಕಷ್ಟು ಬೆಳಕು ಇರುವಂತೆ ಬೀದಿದೀಪ ಅಳವಡಿಸಬೇಕು. ಉದ್ಯಾನವನಗಳ ಅಭಿವೃದ್ಧಿಗಾಗಿ ಡಿಪಿಆರ್​ ಅಂದಾಜು ಪಟ್ಟಿ ತಯಾರಿಸಿ, ಅನುದಾನದ ಲಭ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ಮಕ್ಕಳ ಆಟಿಕೆಗಳನ್ನು ಮತ್ತು ಬಯಲು ವ್ಯಾಯಾಮ ಸಲಕರಣೆಗಳನ್ನು ಕೂಡಲೇ ದುರಸ್ತಿಪಡಿಸಿ ಬಣ್ಣ ಬಳೆಯುವುದು, ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮ ತೆಗೆದುಕೊಳ್ಳುವುದು, ಪಾಥ್​ ವೇ ಪಕ್ಕದಲ್ಲಿನ ಸಣ್ಣ ಗಿಡಗಳನ್ನು ಸುಂದರವಾಗಿ ಕಾಣುವಂತೆ ಟ್ರಿಮ್​ ಮಾಡುವುದು, ನಗರ ಸ್ಥಳಿಯ ಸಂಸ್ಥೆಗಳಲ್ಲಿ ಉತ್ಪಾದನೆ ಮಾಡುತ್ತಿರುವ ಗೊಬ್ಬರವನ್ನು ಪಾರ್ಕ್​ಗಳಲ್ಲಿನ ಗಿಡಗಳಿಗೆ ಬಳಸುವುದು, ಒಣಗಿ ಬೀಳುವ ಎಲೆಗಳನ್ನು ಉದ್ಯಾನವನದ ಮೂಲೆಯಲ್ಲಿ ಪಿಟ್​ ಮಾದರಿ ನಿರ್ಮಿಸಿ ಗೊಬ್ಬರ ತಯಾರಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಅವಶ್ಯ ಸ್ಥಳಗಳಲ್ಲಿ ಶೌಚಗೃಹಗಳನ್ನು ನಿರ್ಮಿಸುವುದು. ಈಗಾಗಲೇ ಲಭ್ಯವಿದ್ದರೆ ಅವುಗಳಿಗೆ ನೀರಿನ ವ್ಯವಸ್ಥೆ ಮತ್ತು ಸುಚಿತ್ವ ಕಾಪಾಡಲು ಕ್ರಮವಹಿಸುವುದು. ನೀರಿನ ಕಾರಂಜಿ ದುರಸ್ತಿಪಡಿಸುವುದು, ವಾಯುವಿಹಾರ, ವ್ಯಾಯಾಮ ಮಾಡುವ ಮತ್ತು ಆಟ ಆಡುವ ಜನರ ಹಾಗೂ ನಗರ ಸ್ಥಳಿಯ ಸಂಸ್ಥೆಯ ಸದಸ್ಯರನ್ನೊಳಗಂಡಂತೆ ಒಂದು ಸಂಘ ರಚಿಸಿ, ಸಂಬಂಧಿಸಿದ ನಿರ್ವಹಣೆ ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿ ಮಾಹೆಯಾನ ಸಭೆ ನಡೆಸಿ ಅದರಂತೆ ನಿಮಾರ್ಣ ಮತ್ತು ನಿರ್ವಹಣೆ ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ನಗರ ಸ್ಥಳಿಯ ಸಂಸ್ಥೆಗಳಿಂದ ದೊಡ್ಡ ಉದ್ಯಾನವನಗಳಿಗೆ ಸಿಬ್ಬಂದಿ ನೇಮಿಸುವುದು, ಉದ್ಯಾನವನ ತೆಗೆಯುವ ಮತ್ತು ಮುಚ್ಚುವ ಸಮಯದ ನಾಮಫಲಕ ಅಳವಡಿಸುವುದು. ಮಹನಿಯರ ಪುತ್ಥಳಿಗಳಿಗೆ ಮೇಲ್ಟಾವಣಿ ಮತ್ತು ಪ್ರತಿಮೆ ಸುತ್ತಲೂ ಫೇವರ್​ ಬ್ಲಾಕ್​, ರೇಲಿಂಗ್ಸ್​ ಮತ್ತು ವಿದ್ಯುತ್​ ದೀಪ ಅಳವಡಿಸುವುದು, ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸುವುದು, ಅಗತ್ಯತೆಗೆ ಅನುಗುಣವಾಗಿ ಕೊಳವೆಬಾವಿ ಅಥವಾ ಸೂಕ್ತ ನೀರಿನ ವ್ಯವಸ್ಥೆ ಮಾಡುವುದು, ಮಳೆನೀರು ಇಂಗು ಗುಂಡಿಗಳನ್ನು ನಿರ್ಮಿಸಲು ಕ್ರಮವಹಿಸಬೇಕು ಎಂದರು. ಕೋಲಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉದ್ಯಾನವನಗಳ ಸ್ವಚ್ಛತೆ ಮತ್ತು ನೈರ್ಮಲ್ಯ ಟಾಸ್ಕ್​ ೋರ್ಸ್​ ರಚಿಸುವ ಹಾಗೂ ಉದ್ಯಾನವನಗಳ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​. ಅಪರ ಜಿಲ್ಲಾಧಿಕಾರಿ ಮಂಗಳಾ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್​ ಇದ್ದರು.

ಕೋಲಾರ ನಗರಸಭೆ: ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಯಶಸ್ವಿಯಾದರೆ ಬೇರೆ ಪುರಸಭೆ ಮತ್ತು ನಗರಸಭೆಗಳಲ್ಲಿ ಇದೇ ತಂಡ ಮುಂದುವರಿಸಲಾಗುವುದು. ಪ್ರಸ್ತುತ ತಂಡದ ಕಾರ್ಯಾಚರಣೆಗೆ ಪ್ರತ್ಯೇಕ ಜೀಪ್​ ಮಾದರಿಯ ವಿಶಿಷ್ಟ ವಾಹನವನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡು, ನಗರಸಭೆ ಮತ್ತು ಪುರಸಭೆ ನಿಧಿ ಹಾಗೂ ಸಾಲಿಡ್​ ವೆಸ್ಟ್​ ಮ್ಯಾನೇಜ್ಮೆಂಟ್​ ಅನುದಾನವನ್ನು ಕ್ರಿಯಾಯೋಜನೆ ಅನುಮೋದನೆ ಪಡೆದು ಕ್ರಮವಹಿಸಲು ಡಿಸಿ ಸೂಚಿಸಿದರು.

ಐವರು ಕಾರ್ಯನಿರ್ವಹಣೆ?: ನಗರಸಭೆ ಅಭಿಯಂತರರು ಮತ್ತು ಆರೋಗ್ಯ ನಿರೀಕ್ಷಕರು ಮುಖ್ಯಸ್ಥರಾಗಿರುತ್ತಾರೆ. ಸಮುದಾಯ ಸಂಘಟನಾಧಿಕಾರಿ ಮತ್ತು ಸಂಘಟಕರು, ಸಮುದಾಯ ಮೊಬೈಲೈಜರ್​, ಗೃಹ ರಕ್ಷಕರು, ಒಬ್ಬರು ಪೊಲೀಸ್​ ಸದಸ್ಯರಾಗಿರುತ್ತಾರೆ. ಒಟ್ಟು 5 ಜನರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಏನೇನು ಮಾಡಲಿದೆ?: ತಂಡವು ಪ್ರತಿದಿನ ಬೆಳಗ್ಗೆ 6 ರಿಂದ 9ರ ವರೆಗೆ ಸಂಜೆ 5 ರಿಂದ 8ರ ವರೆಗೆ ನಗರ ಮತ್ತು ಪಟ್ಟಣಗಳನ್ನು ಪರಿವೀಕ್ಷಣೆ ಮಾಡಿ ಬ್ಲಾಕ್​ ಸ್ಪಾಟ್​ಗಳನ್ನು ಗುರುತಿಸುವುದು ಮತ್ತು ತ್ಯಾಜ್ಯ ಸಂಗ್ರಹವಾಗದಂತೆ ಕ್ರಮವಹಿಸಬೇಕು. ರಸ್ತೆಬದಿ, ಚರಂಡಿ ಹಾಗೂ ಜಲಾಕಾಯಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುವುದು ಹಾಗೂ ಸುಧಾರಣೆಯಾಗದ ಸಂದರ್ಭದಲ್ಲಿ ಅವರ ವಿರುದ್ಧ ಎಫ್​ಐಆರ್​ ದಾಖಲಿಸಬೇಕು ಎಂದರು.

ಪ್ರತಿ ಶನಿವಾರ ಸಾಂಸತಿಕ ಕಾರ್ಯಕ್ರಮ: ಎಲ್ಲ ಉದ್ಯಾನವನಗಳಲ್ಲಿ ಇಲಾಖೆಗಳ ಸಹಕಾರದಿಂದ ಪ್ರತಿ ಶನಿವಾರ ಸಾಂಸತಿಕ ಸಂಜೆ ಅಥವಾ ರಸಸಂಜೆ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಮನರಂಜಿಸುವ ಕೆಲಸ ಮಾಡಬೇಕು.ಜಿಲ್ಲೆಯ ಎಲ್ಲ ಉದ್ಯಾನವನಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತವು ವಿಶೇಷ ಆಸಕ್ತಿವಹಿಸಿದ್ದು, ಸರ್ಕಾರವು ಎಲ್ಲ ನಗರಸಭೆ ಹಾಗೂ ಪುರಸಭೆಗಳು ತಮ್ಮ ವ್ಯಾಪ್ತಿಯಲ್ಲಿನ ಉದ್ಯಾನವನಗಳನ್ನು ಆಕರ್ಷಕಗೊಳಿಸಿ ಮೂಲಸೌಕರ್ಯಗಳೊಂದಿಗೆ ಸಾರ್ವಜನಿಕರಿಗೆ ಅನುವು ಮಾಡಿಕೊಡುವ ಸಲುವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net