ಸ್ವಚ್ಛತಾ ಜಾಗೃತಿಗಾಗಿ ಕೋಲಾರಮ್ಮ ಸಚ್ಛತಾ ಕಾರ್ಯಪಡೆ

FotoJet 3333
Published on

ಕೋಲಾರ:ಕೋಲಾರ ಜಿಲ್ಲೆಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಜಿಲ್ಲಾಡಳಿತವೂ ನಗರಸಭೆಯೊಂದಿಗೆ ಕೋಲಾರಮ್ಮ ಸಚ್ಛತಾ ಕಾರ್ಯಪಡೆ ಎಂಬ ವಿಶೇಷ ತಂಡ ರಚಿಸಲಾಗಿದೆ. ಈ ಕಾರ್ಯಪಡೆಯು ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ ಉದ್ಯಾನವನಗಳು, ರಸ್ತೆಗಳು, ಚರಂಡಿ ಮತ್ತು ಕೆರೆಗಳ ಸ್ವಚ್ಛತೆ ನಿರ್ವಹಿಸುತ್ತದೆ. ಜತೆಗೆ ಸ್ವಚ್ಛತೆ ಜಾಗೃತಿ ಮೂಡಿಸಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್​. ರವಿ ತಿಳಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಟಾಸ್ಕ್​ ಫೋರ್ಸ್​ ವಾಹನಕ್ಕೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸುವುದು, ನಿಷೇಧಿತ ಪ್ಲಾಸ್ಟಿಕ್​ ಬಳಕೆ ತಡೆಯುವುದು ಹಾಗೂ ಕಾನೂನು ಉಲ್ಲಂಸುವವರ ಮೇಲೆ ಕ್ರಮ ಜರುಗಿಸುವುದು ಎಂದರು.

ತ್ಯಾಜ್ಯ ವಿಲೇವಾರಿ ಮತ್ತು ಸ್ವಚ್ಛತೆ ನಿಯಮ ಉಲ್ಲಂಸಿದವರ ಮೇಲೆ ದಂಡ ವಿಧಿಸುವುದು, ಅಗತ್ಯವಿದ್ದರೆ ಪ್ರಕರಣ ದಾಖಲಿಸುವುದು. ನಿಷೇಧಿತ ಪ್ಲಾಸ್ಟಿಕ್​ ಬಳಕೆ ತಡೆಯುವುದು ಮತ್ತು ನಿಯಮ ಉಲ್ಲಂಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸೋರಿಕೆಗಳ ಬಗ್ಗೆ ವರದಿ ನೀಡುವುದು. ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್​ ನಿಷೇಧದ ಬಗ್ಗೆ ಅರಿವು ಮೂಡಿಸುವುದು. ಸಾರ್ವಜನಿಕ ಶೌಚಗೃಹಗಳ ಬಳಕೆ ಮತ್ತು ನೈರ್ಮಲ್ಯ ಕಾಪಾಡಲು ಕ್ರಮ ತೆಗೆದುಕೊಳ್ಳುವುದು ಕಾರ್ಯಪಡೆಯ ಉದ್ದೇಶಗಳಾಗಿವೆ ಎಂದರು.

ನಿತ್ಯ ಬೆಳೆಗ್ಗೆ 6 ರಿಂದ 9.30 ವರೆಗೆ ಮತ್ತು ಸಂಜೆ 5 ರಿಂದ 8 ರವರೆಗೆ ಕಾರ್ಯ ನಿರ್ವಹಿಸಿ ನಗರಗಳನ್ನು ಪರಿವೀಕ್ಷಣೆ ಮಾಡುವುದು, ಅನೈರ್ಮಲ್ಯವಿರುವ ಪ್ರದೇಶಗಳನ್ನು ಗುರುತಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಕಾರ್ಯಪಡೆಯ ಚಟುವಟಿಕೆಯಾಗಿದೆ. ರಾಜ್ಯದಲ್ಲಿಯೇ ಇಂತಹ ಯೋಜನೆ ಮೊದಲ ಬಾರಿಗೆ ಕೋಲಾರದಲ್ಲಿ ಜಾರಿಯಾಗುತ್ತಿದ್ದು, ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net