

ಕೋಲಾರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಜಯದಶಮಿ ಹಾಗೂ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರದ ಹೊರವಲಯದ ಕೊಂಡರಾಜನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ವಿಜಯದಶಮಿಯ ಹಬ್ಬದ ದಿನ ಸಂಜೆ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ರಾಜೇಂದ್ರ ಅವರು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಕತ್ತಿಯಿಂದ ಬನ್ನಿಮರದ ತುಣುಕು ಕತ್ತರಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ಬಹುತೇಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳನ್ನು ಈ ದೇವಾಲಯದಕ್ಕೆ ತಂದು ಪಲ್ಲಕ್ಕಿ ಉತ್ಸವ ನಡೆಸಲಾಯಿತು. ಬನ್ನಿಮರ ಕಡಿಯಲು ಬಂದ ರಾಜೇಂದ್ರ ಅವರನ್ನು ಪೂರ್ಣಕುಂಭ ಮೇಳದೊಂದಿಗೆ ಸ್ವಾಗತಿಸಿ ಮೈಸೂರು ಪೇಟಾ ತೊಡಿಸಿ ಬನ್ನಿಮರ ನೆಟ್ಟ ಸ್ಥಳಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಆನಂತರ ತಹಸೀಲ್ದಾರ್, ಬಾಳೆ ಮತ್ತು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ನಂತರ ಕೈಯಲ್ಲಿ ಕತ್ತಿ ಹಿಡಿದು ಬಾಳೆ ಗಿಡವನ್ನು ಕತ್ತರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಬನ್ನಿಮರವನ್ನು ಕತ್ತರಿಸುವುದನ್ನೇ ಕಾಯುವ ಭಕ್ತರು ಮುಗಿಬಿದ್ದು, ಬನ್ನಿ ಎಲೆಗಳನ್ನು, ಬಾಳೆಗೊನೆಯ ಕಾಯಿಗಳನ್ನು ಕಿತ್ತುಕೊಳ್ಳಲು ಸಾರ್ವಜನಿಕರು ಮುಗಿಬಿದ್ದರು.
ಇಲ್ಲಿ ಪೂಜಿಸಲ್ಪಟ್ಟ ಎಲೆಗಳು ಮತ್ತು ಬಾಳೆಕಾಯಿಗಳನ್ನು ಮನೆಯಲ್ಲಿಟ್ಟು ಪೂಜಿಸಿದರೆ ಇಡೀ ವರ್ಷವೂ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಬನ್ನಿಮರ ಕಡಿಯುವ ಕಾರ್ಯ ಮುಗಿಯುತ್ತಿದ್ದಂತೆ 20ಕ್ಕೂ ಹೆಚ್ಚು ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿ ಪಾನಕ ಹೆಸರುಬಾಳೆ ಹಂಚಲಾಯಿತು. ತಮಟೆ, ಡೊಲು, ಡೊಳ್ಳು ಕುಣಿತ ಮೆರವಣಿಗೆಗೆ ಮೆರಗು ನೀಡಿತು. ಈ ಗ್ರಾಮೀಣ ದಸರಾ ಪ್ರತಿವರ್ಷದಂತೆ ಈ ವರ್ಷವೂ ನಡೆಯುವ ಮೂಲಕ ವಿಶೇಷ ಆಕರ್ಷಣೆಯಾಗಿತ್ತು. ಯಾವುದೇ ಅಹಿತಕರ ಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವಾಡಲಾಗಿತ್ತು. ವೇಮಗಲ್ ಆರ್‌ಐ ರಾಜೇಂದ್ರ, ಇನ್‌ಸ್ಪೆಕ್ಟರ್ ಹರೀಶ್, ಬಜರಂಗದಳ ಮುಖಂಡ ಬಾಲಾಜಿ, ಅಪ್ಪಿ, ಬಾಬು, ಡಾ.ಶಿವಣ್ಣ, ಮುಖಂಡರಾದ ಶ್ರೀನಿವಾಸ ಯಾದವ್, ಅಮ್ಮೇರಹಳ್ಳಿ ಮಂಜುನಾಥ್, ಕಿಲಾರಿಪೇಟೆ ಮುನಿವೆಂಕಟಯಾದವ್, ಪ್ರಶಾಂತ್ ಇತರರಿದ್ದರು.
ದೇಗುಲಗಳಲ್ಲಿ ವಿಶೇಷ ಅಲಂಕಾರ: ವಿಜಯದಶಮಿಯಂದು ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ವಾಡಲಾಗಿತ್ತು. ಜತೆಗೆ ನಗರದ ವಿವಿಧ ಶಿಕ್ಷಣ ಸಂಸ್ಥೆಗಳು, ಕಚೇರಿಗಳು, ಮನೆಗಳಲ್ಲಿ ಆಯುಧ ಪೂಜೆ ಸಂಭ್ರಮ ಮನೆ ವಾಡಿತ್ತು. ನಗರದ ಕೆಇಬಿ ಗಣಪತಿ, ಸೋಮೇಶ್ವರ, ನಗರದೇವತೆ ಕೋಲಾರಮ್ಮ, ಕಿಲಾರಿಪೇಟೆಯ ಸತ್ಯಮ್ಮ, ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ, ವಾರೆಮ್ಮ, ವೇಣುಗೋಪಾಲಸ್ವಾಮಿ, ಕಾಳಮ್ಮ ಗುಡಿ, ಜಯನಗರದ ಸಫಲಮ್ಮ ಸೇರಿ ವಿವಿಧ ದೇವಾಲಯಗಳಲ್ಲೂ ಆಯುಧಪೂಜೆ ಹಾಗೂ ನವರಾತ್ರಿ ಕೊನೇ ದಿನ ವಿಶೇಷ ಅಲಂಕಾರ ವಾಡಲಾಗಿತ್ತು. ನೂರಾರು ಮಂದಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಎಲ್ಲರಿಗೂ ಸಿಹಿ ಪೊಂಗಲ್, ಟಮ್ಯಾಟೊಬಾತ್ ಪ್ರಸಾದ ವಿನಿಯೋಗ ನಡೆಯಿತು.