

ಕಿರುವಾರ ಎಸ್.ಸುದರ್ಶನ್ ಕೋಲಾರ
ಬೇಸಿಗೆಕಾಲ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಬೇಸಿಗೆಕಾಲ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನೇದಿನೆ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಾಧ್ಯತೆಯಿದ್ದು, ಈಗಾಗಲೇ ಜಿಲ್ಲೆಯಲ್ಲಿ 333 ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪೈಕಿ ಬಂಗಾರಪೇಟೆ 88, ಕೆಜಿಎಫ್ ತಾಲೂಕಿನಲ್ಲಿ 66ಕ್ಕೂ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ಅಭಾವದಿಂದ ಬಳಲುತ್ತಿವೆ. ಮುಂದಿನ ದಿನಗಳಲ್ಲಿ ಸಮಸ್ಯೆಯು ತೀವ್ರಗೊಳ್ಳುವ ಮೊದಲೇ ಎನೆಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಜಿಪಂ ಸಿಇಒ ಪ್ರವಿಣ್ ಪಿ.ಬಾಗೇವಾಡಿ ಅವರು ಅಧಿಕಾರಿಗಳ ಸಭೆ ನಡೆಸಿ, ಪರಿಹಾರ ಕ್ರಮಗಳ ಬಗ್ಗೆ ಸೂಚಿಸಿದ್ದಾರೆ.
ಕೊಳವೆಬಾವಿಗಳಲ್ಲಿ ಈಗ ನೀರಿನ ಲಭ್ಯತೆ ಎಷ್ಟಿದೆ...?, ಮುಂದಿನ ದಿನಗಳಲ್ಲಿ ಲಭ್ಯತೆ ಪ್ರಮಾಣ ಕಡಿಮೆಯಾಗಬಹುದಾ..?, ಸದ್ಯದ ಪರಿಸ್ಥಿತಿ ಏನು?, ಕಳೆದ ಸಾಲಿನಲ್ಲಿ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು? ಎಂಬುದರ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಆಧಿಕಾರಿಗಳು, ಗ್ರಾಮೀಣ ಕುಡಿಯು ನೀರು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ.
ಬತ್ತುತ್ತಿರುವ ಜಲಮೂಲ: ಮಾರ್ಚ್ ಆರಂಭದಲ್ಲಿಯೇ ಜಿಲ್ಲೆಯಲ್ಲಿ ಸರಾಸರಿ 28.-30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದ್ದು, ಜನರಿಗೆ ಬೇಸಿಗೆಯ ಅನುಭವವಾಗುತ್ತಿದೆ. ಜಿಲ್ಲೆಯಲ್ಲಿನ ಸುಮಾರು ಕೆರೆ, ಕಲ್ಯಾಣಿ, ಕುಂಟೆಗಳಲ್ಲಿನ ನೀರು ಬತ್ತಿ ಹೋಗಿದ್ದು, ಜಾನುವಾರುಗಳಿಗೆ ನೀರಿನ ಕೊರತೆ ಎದುರಾಗುತ್ತಿದೆ. ಇದರೊಂದಿಗೆ ಗ್ರಾಮೀಣ ಭಾಗಗಳಲ್ಲಿ ಜನರಿಗೆ ನೀರೊದಗಿಸಲು ಸರ್ಕಾರದಿಂದ ಕೊರೆದಿರುವ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಬತ್ತಿ ಹೋಗುವ ಮುನ್ಸೂಚನೆ ದೊರೆತಿರುವುದರಿಂದ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
9.45 ಕೋಟಿ ರೂ. ಕ್ರೀಯಾ ಯೋಜನೆ: ಕಳೆದ ವರ್ಷ ಕೆರೆಗಳಲ್ಲಿ ನೀರು ಶೇಖರಣೆಯಾಗಿದ್ದರಿಂದ ಕೆಲವೇಕೆಲವು ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಎದುರಾಗಿತ್ತು. ಈಗಾಗಲೇ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದಾಗಿ 333 ಗ್ರಾಮಗಳನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಯು ತೀವ್ರಗೊಂಡರೆ ಅದನ್ನು ನಿಭಾಯಿಸಲು 9.45 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ. ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ಟ್ಯಾಂಕರ್ಗಳ ಮೂಲಕ ಹಾಗೂ ಖಾಸಗಿಯವರ ಕೊಳವೆ ಬಾವಿಗಳ ಮೂಲಕ ನೀರು ಒದಗಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇಸಿಗೆ ಆರಂಭವಾದ ನಂತರದಲ್ಲಿ ಜಿಲ್ಲೆಯಾದ್ಯಂತ ಕುಡಿವ ನೀರಿನ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಸದ್ಯ ಕಡಿಮೆ ನೀರು ಬರುತ್ತಿರುವ ಕೊಳವೆಬಾವಿಗಳು ಬತ್ತಿಹೋಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜನರಿಗೆ ತೊಂದರೆಯಾಗದಂತೆ ಕುಡಿವ ನೀರು ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಮಾರ್ಚ್ನಿಂದ ಮೇ ತಿಂಗಳವರೆ ಕುಡಿಯುವ ನೀರಿನ ಪರಿಸ್ಥಿತಿಯನ್ನು ನಿಭಾಯಿಸುವುದು ಅತ್ಯಂತ ಪ್ರಮುಖ ಕೆಲಸ. ನೀರಿನ ಸಮಸ್ಯೆ ಕಂಡು ಬರಬಹುದಾದ ಗ್ರಾಮಗಳನ್ನು ಈಗಿನಿಂದಲೇ ಗುರುತಿಸಿದ್ದು, ಸಮಸ್ಯೆ ಎದುರಾದ ತಕ್ಷಣ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸದಾ ಸಿದ್ಧವಿರಲು ಜಿಲ್ಲಾಡಳಿತ ನಿರ್ದೇಶನ ನೀಡುತ್ತಿದೆ.
ಅಂತರ್ಜಲ ವೃದ್ಧಿ: ಕೆಸಿ ವ್ಯಾಲಿ ಯೋಜನೆಯ ಮೂಲಕ ಕೆರೆಗಳಿಗೆ ನೀರು ತುಂಬಿಸುವುದು ಪ್ರಗತಿಯಲ್ಲಿದ್ದು, ಈಗಾಗಲೇ ಕೆರೆಗಳಲ್ಲಿ ನೀರು ಇರುವ ಸಮೀಪದ ಗ್ರಾಮಗಳ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳ ಅಂತರ್ಜಲಮಟ್ಟ ವೃದ್ಧಿಯಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ಇಲ್ಲ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ನೀರು ಒದಗಿಸಲು, ತೊಟ್ಟಿಗಳಿಗೆ ನೀರು ತುಂಬಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾಗಿದ್ದಾರೆ.
ಪಂಪ್ ಹೌಸ್ಗೆ ಹೆಚ್ಚುವರಿ ಸಿಬ್ಬಂದಿ ನೇಮಕ: ಯರಗೋಳ್, ಮಾರ್ಕಂಡಯ್ಯ, ಬೇತಮಂಗಲ ಜಲಾಶಯಗಳಲ್ಲಿ ನೀರು ಶೇಖರಣೆಯಾಗಿದ್ದು, ಇದರಿಂದಾಗಿ ಬಂಗಾರಪೇಟೆ, ಕೆಜಿಎಫ್, ಕೋಲಾರ, ಮಾಲೂರು ತಾಲೂಕುಗಳಿಗೆ ನೀರು ಹರಿಸಲಾಗುತ್ತಿದೆ. ಜಿಲ್ಲೆಯ ರಾಮಸಾಗರ, ಮುದುವಾಡಿ, ಅಮ್ಮೇರಹಳ್ಳಿ, ನರಸಾಪುರ ಕೆರೆಗಳಲ್ಲಿ ನೀರು ಸಮೃದ್ಧವಾಗಿದ್ದು, ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಕಡಿಮೆ ಇದೆ. ನೀರಿನ ಅಕ್ರಮ ಸರಬರಾಜು ತಡೆಯಲು ಯರಗೋಳ್ ಡ್ಯಾಂ ಪಂಪ್ಹೌಸ್ನಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆಯಿದ್ದು, ಇದನ್ನು ಗಮನಿಸಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದು, ಪಾಳೆಯಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ.
ನೀರಿನ ಸಮಸ್ಯೆ ಕುರಿತು ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ತೀವ್ರಗೊಳ್ಳದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. - ಪ್ರವಿಣ್ ಪಿ.ಬಾಗೇವಾಡಿ ಜಿಪಂ ಸಿಇಒ ಕೋಲಾರ