ಶಾಲೆಗಳ ದುರಸ್ತಿಗೆ 3 ಕೋಟಿ ರೂಪಾಯಿ: ಶಾಸಕ ಎಚ್​.ನಾಗೇಶ್​ ಹೇಳಿಕೆ

1
Published on

ಮುಳಬಾಗಿಲು: ಲೂಕಿನಲ್ಲಿ 513 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು 168 ಶಾಲೆಗಳು ಶಿಥಿಲಾವಸ್ಥೆ ತಲುಪಿವೆ. ಸರ್ಕಾರದಿಂದ 3 ಕೋಟಿ ರೂಪಾಯಿಯನ್ನು ಶಾಲೆಗಳ ದುರಸ್ತಿಗೆ ಬಿಡುಗಡೆ ಮಾಡಿದ್ದು, ಅವಶ್ಯವಿರುವ ಕಟ್ಟಡಗಳನ್ನು ನೂತನವಾಗಿ ನಿಮಿರ್ಸಿ, ಉಳಿದವನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಎಚ್​.ನಾಗೇಶ್​ ಸೂಚಿಸಿದರು.


ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕು ಎಂದರು.


ಕಳೆದ ವರ್ಷ ಪಡಿತರ ಆಹಾರ ಸರಿಯಾಗಿ ವಿತರಿಸದ 6 ಜನರು ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ನಾನೇ ತಾಲೂಕಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಆಹಾರ ಸಚಿವರ ಬಳಿ ತೆರಳಿ ತಡೆ ನೀಡಿದ್ದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದು ಆಹಾರ ಇಲಾಖೆ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪೂರೈಕೆಯಾಗುವ ಪಡಿತರ ಆಹಾರವನ್ನು ಫಲಾನುಭವಿಗಳಿಗೆ ವಿತರಿಸುವಂತೆ ಆದೇಶಿಸಿದರು.


ನಾಲ್ಕೂವರೆ ವರ್ಷ ಅಧಿಕಾರ ಅವಧಿಯಲ್ಲಿ ನಾನು ಎಂದೂ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಏಕವಚನದಲ್ಲಿ ಮಾತಾಡಿಸಿಲ್ಲ. ದಬ್ಬಾಳಿಕೆ ಮಾಡಿಲ್ಲ. ಮುಳಬಾಗಿಲಿಗೆ ವರ್ಗಾವಣೆ ಕೋರಿ ಬರುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಂದಾಣಿಕೆಯಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸಿದರೆ ಮಾದರಿ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದರು.


ತಾಪಂ ಆಡಳಿತಾಧಿಕಾರಿ ಪಿ.ಲಕ್ಷ್ಮೀ ಮಾತನಾಡಿ, ಅರಣ್ಯ ಇಲಾಖೆಯಿಂದ ಕೇವಲ 25ಸಾವಿರ ಸಸಿ ನೆಟ್ಟಿರುವುದು ಸಾಲದು. ಕನಿಷ್ಠ 1 ಲಕ್ಷ ಸಸಿಗಳನ್ನು ಬೆಳಸಬೇಕು. ರೈತರು ಅರಣ್ಯ ಬೆಳೆಸಲು ಹೆಚ್ಚಿನ ಉತ್ತೇಜನ ನೀಡಬೇಕು. ಕೆರೆಕುಂಟೆಗಳ ಸಂರಕ್ಷಣೆಯಾಗಿ ಮಳೆನೀರು ಸಂಗ್ರಹಣೆ ಹೆಚ್ಚಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅಂಗನವಾಡಿ ಮೂಲಕ ಅಪೌಷ್ಠಿಕತೆ ಹೋಗಲಾಡಿಸಲು ಮೊಟ್ಟೆ ಸೇರಿದಂತೆ ಆಹಾರಧಾನ್ಯಗಳನ್ನು ಮನೆಗಳಿಗೆ ನೀಡಬಾರದು. 25 ಮೊಟ್ಟೆಗಳು ಒಂದೇ ಬಾರಿ ನೀಡಿದರೆ ಮನೆಯವರೆಲ್ಲರೂ ಸೇವನೆ ಮಾಡುತ್ತಾರೆ, ಅಪೌಷ್ಠಿಕತೆಗೆ ಒಳಗಾದ ತಾಯಿ ಮಗುವಿಗೆ ಇದು ಉಪಯೋಗವಾಗುವುದಿಲ್ಲ ಎಂದು ಸಿಡಿಪಿಒ ಮಹೇಶ್​ ಬಾಬು ಅವರಿಗೆ ತಿಳಿಸಿದರು.


ತಾಪಂ ಇಒ ಡಾ.ಕೆ.ಸರ್ವೇಶ್​, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ, ಬಿಇಒ ಗಂಗರಾಮಯ್ಯ, ಬೆಸ್ಕಾಂ ಎಇಇ ವಿ.ಎಂ.ರಮೇಶ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net