

ಮುಳಬಾಗಿಲು: ಶಾಸಕ ಎಚ್.ನಾಗೇಶ್ ಸಮ್ಮುಖದಲ್ಲಿ ಬುಧವಾರ ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷ ರಿಯಾಜ್ ಅಹ್ಮದ್ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರಸಭೆ ಸರಹದ್ದನ್ನು 1 ಕಿ.ಮೀ.ನಷ್ಟು ಹೆಚ್ಚಿಸಿ ಅಭಿವೃದ್ಧಿಗೊಳಿಸಲು ಅನುಮೋದನೆ ಪಡೆಯಲಾಯಿತು. ಜತೆಗೆ ನಗರಸಭೆಯಲ್ಲಿ ಸುಟ್ಟುಹೋಗಿರುವ ಎಲ್‌ಇಡಿ ವಿದ್ಯುತ್ ದೀಪ ಬದಲಾವಣೆ, ಹೊಸ ವಿದ್ಯುತ್ ಪರಿವರ್ತಕ, 15ನೇ ಹಣಕಾಸು ಯೋಜನೆಯಡಿ ಶವಸಾಗಿಸಲು ಶಾಂತಿವಾಹನ ಖರೀದಿ, ವಿದ್ಯುತ್ ದೀಪ ನಿರ್ವಹಣೆಗೆ ಟೆಂಡರ್, ಎಸ್‌ಎಫ್‌ಸಿ ವಿಶೇಷ ಅನುದಾನದಡಿ ಉಳಿಕೆಯಾದ ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ವಿವಿಧ ವಾರ್ಡ್‌ಗಳಿಗೆ ನೂತನ ಹೆಸರುಗಳ ನಾಮಕರಣ ಮಾಡಲು ಸದಸ್ಯರು ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಎಚ್.ಎಸ್.ಹರೀಶ್ ಹಾಗೂ ಇತರರು ಯಾವುದೇ ಕಾರಣಕ್ಕೂ ಧರ್ಮಕ್ಕೆ ಸಂಬಂಧಿಸಿದ ಹೆಸರು ನಾಮಕರಣ ಮಾಡದೆ ಕನ್ನಡದ ಹೆಸರಾಂತ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು.
ವಿವಿಧ ಯೋಜನೆಗೆ ಅನುಮೋದನೆ: ನಗರಸಭೆ ವ್ಯಾಪ್ತಿಯ ಕಲ್ಯಾಣ ಮಂಟಪ, ಅಂಗಡಿ ಮುಂಗಟ್ಟು, ಆಸ್ಪತ್ರೆ, ಬಾರ್ ಮತ್ತು ರೆಸ್ಟೋರೆಂಟ್, ಮಟನ್, ಚಿಕನ್ ಸ್ಟಾಲ್‌ಗಳು ಯಥೇಚ್ಚವಾಗಿ ತ್ಯಾಜ್ಯ ಹೊರಹಾಕುತ್ತಿದ್ದು, ಇದಕ್ಕೆ ನಗರಸಭೆಯಿಂದ ತೆರಿಗೆ ವಿಧಿಸಿ ವಿಲೇವಾರಿ ಮಾಡಲು ಅನುಮೋದನೆ ನೀಡಲಾಯಿತು.
ನಗರದ ವಿವಿಧ ಕಡೆ ನಂದಿನಿ ಹಾಲಿನ ಉತ್ಪನ್ನಗಳ ಮಳಿಗೆ ತೆರೆದು ಮಾರಾಟ ಮಾಡಲು ಅರ್ಜಿ ಸಲ್ಲಿಸಿರುವುದನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಪರವಾನಗಿ ನೀಡಲು ನಿರ್ಧರಿಸಲಾಯಿತು. ನಗರಸಭೆಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಉಳಿಕೆಯಾಗಿರುವ 30 ಲಕ್ಷ ರೂ.ವೆಚ್ಚದಲ್ಲಿ ನಗರದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಅಧ್ಯಕ್ಷ ರಿಯಾಜ್ ಅಹ್ಮದ್ ಪ್ರಸ್ತಾವನೆ ಮಂಡಿಸಿ ಸಭೆಯಲ್ಲಿ ಒಪ್ಪಿಗೆ ಪಡೆದರು.
ಸಿವಿಲ್ ಕಾಮಗಾರಿ ಗುತ್ತಿಗೆದಾರ ದೇವರಾಜ್ ಟೆಂಡರ್ ಪಡೆದು ಕಾಮಗಾರಿ ಆರಂಭಿಸಿಲ್ಲ. 3 ಬಾರಿ ನೋಟಿಸ್ ನೀಡಿದ್ದರೂ ಪ್ರತ್ಯುತ್ತರ ನೀಡಿಲ್ಲ. ಆದ್ದರಿಂದ ಅವರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವಂತೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘ ಮುಳಬಾಗಿಲು ಶಾಖೆಗೆ ಪತ್ರಕರ್ತರ ಭವನ ನಿರ್ಮಿಸಲು ನಗರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಿ ಸೂಕ್ತ ನಿವೇಶನವನ್ನು ಶೀಘ್ರದಲ್ಲೇ ಸಂಘಕ್ಕೆ ನೀಡಲು ಒಪ್ಪಿಗೆ ಸೂಚಿಸಿದರು.
ಸದಸ್ಯ ಮತ್ತು ಅಧಿಕಾರಿ ನಡುವೆ ವಾಕ್ಸಮರ: ನಗರಸಭೆ ಕಂದಾಯ ಅಧಿಕಾರಿ ಆರ್.ಕೆ.ವಠಾರ್ ಭ್ರಷ್ಟಾಚಾರವೆಸಗುತ್ತಿದ್ದಾರೆ. ಲಂಚವಿಲ್ಲದೆ ಯಾವುದೇ ಕೆಲಸ ಮಾಡುತ್ತಿಲ್ಲ. ಕೇಳಿದರೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ ಎಂದು ಅಂಬೇಡ್ಕರ್ ನಗರ ವಾರ್ಡ್ ಸದಸ್ಯ ಎಂ.ಪ್ರಸಾದ್ ಆರೋಪಿಸಿದರು.
ತಮ್ಮ ಮೇಲೆ ಸದಸ್ಯರು ಆರೋಪ ಮಾಡುತ್ತಿದ್ದಂತೆ ವಠಾರ್ ಎದ್ದು ನಿಂತು ಸದಸ್ಯರು ಹೇಳುತ್ತಿರುವುದು ಸುಳ್ಳು. ನಾನು ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದವನು ಎಂಬ ಕಾರಣಕ್ಕೆ ಗುರಿಯಾಗಿಸಿ ನನ್ನ ಹಕ್ಕುಗಳನ್ನು ಕಸಿಯುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು. ಇದರಿಂದ ಕುಪಿತಗೊಂಡ ಎಚ್.ನಾಗೇಶ್ ಅವರು ವಠಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಡಿಸಿ ಅವರೊಂದಿಗೆ ಮಾತನಾಡುತ್ತೇನೆ, ಏನಿದ್ದರೂ ಕಚೇರಿಗೆ ಬಂದು ತಿಳಿಸಿ ಎಂದು ಎಚ್ಚರಿಸಿದರು.
ಇತ್ತೀಚೆಗೆ ಕೊಲೆಗೀಡಾದ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಜಗನ್ಮೋಹನ ರೆಡ್ಡಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಇಇ ಶ್ರೀನಿವಾಸ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಡಿ.ಸೋಮಣ್ಣ, ಜಿ.ನಾಗರಾಜ್, ಎಂ.ಜೆ.ಮಲ್ಲಿಕಾರ್ಜುನ್, ಮಹಮದ್ ಜಬೀವುಲ್ಲಾ, ಎಸ್.ವೈ.ರಾಜಶೇಖರ್, ಮುನಿರಾಜು, ಅಕ್ಮಲ್‌ಬೇಗ್, ಶಾಹೀನ್‌ಪಾಷಾ, ಸೈಯದ್ ವಜೀರ್, ಇಮ್ರಾನ್‌ಪಾಷಾ, ಪಿ.ಎಸ್.ಸುವರ್ಣ, ಪದ್ಮಜಾ, ಎಂ.ಸರಳಾ ಇತರರಿದ್ದರು.