ಕೋರಂ ನೆಪದಲ್ಲಿ ಕೋಲಾರ ಜಿಪಂ 5 ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

10-klr-15
Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಪಂ 5 ಸ್ಥಾಯಿ ಸಮಿತಿಗಳಿಗೆ ಸದಸ್ಯರು ಹಾಗೂ ಅಧ್ಯಕ್ಷರ ಆಯ್ಕೆಗೆ ಬುಧವಾರ ನಿಗದಿಯಾಗಿದ್ದ ಚುನಾವಣೆಯನ್ನು ಕೋರಂ ಕೊರತೆ ನೆಪದಲ್ಲಿ ಜೂ.15ಕ್ಕೆ ಮುಂದೂಡಲಾಯಿತು.

ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ, ಸಾಮಾಜಿಕ ನ್ಯಾಯ, ಶೈಕ್ಷಣಿಕ ಮತ್ತು ಆರೋಗ್ಯ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಪ್ರಕ್ರಿಯೆ ನಡೆದಿತ್ತು.

ಪ್ರತಿ ಸಮಿತಿಗೆ ತಲಾ 5 ಸದಸ್ಯರು ಆಯ್ಕೆಯಾಗಿ ಈ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲು ಅವಕಾಶವಿದೆ. ಈ ಬಾರಿ ಅಧಿಕಾರಕ್ಕಾಗಿ ಪೈಪೋಟಿ ಕಂಡು ಬಂದಿದ್ದು ಎಲ್ಲ ಸಮಿತಿಗಳಿಗೂ ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

ಜಿಪಂನಲ್ಲಿ 30 ಸದಸ್ಯರಿದ್ದು 25 ಮಂದಿಗೆ ಸಮಿತಿ ಸದಸ್ಯರಾಗಲು ಅವಕಾಶವಿದೆ. ಆದರೆ ಎಲ್ಲರೂ ನಾಮಪತ್ರ ಸಲ್ಲಿಸಿ ಹಿಂದೆ ಸರಿಯಲು ಹಿಂದೇಟು ಹಾಕಿದರು. ಕೆಲ ಸದಸ್ಯರು 5 ಸಮಿತಿಗಳಿಗೂ ಸಲ್ಲಿಸಿದ್ದರಿಂದ ಆಕಾಂಕ್ಷಿಗಳ ಮನವೊಲಿಕೆಗೆ ಮಾಜಿ ಶಾಸಕ ವರ್ತೂರು ಪ್ರಕಾಶ್ ಬಣ ಸೇರಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ವಿಫಲರಾದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸದಸ್ಯರೊಂದಿಗೆ ಸಭೆ ನಡೆಸಿ, ಚುನಾವಣೆ ನಡೆದರೆ ಅನಗತ್ಯ ಪೈಪೋಟಿ, ಭಿನ್ನಮತಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ರಾಜಕೀಯ ಬೇಡ, 5 ಸಮಿತಿಗಳ ಪೈಕಿ 3ಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಿಂದ ತಲಾ ಒಬ್ಬರನ್ನು ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮೂಲಕ ಮಾದರಿಯಾಗಿ ಎಂಬ ಸಲಹೆಗೆ ಒಪ್ಪದ ಕಾರಣ ಸಚಿವರು ನಿರ್ಗಮಿಸಿದರು.

ಸಂಸದ ಎಸ್.ಮುನಿಸ್ವಾಮಿ, ಜಿಪಂ ಅಧ್ಯಕ್ಷರ ಕೊಠಡಿಯಲ್ಲಿದ್ದ ಸದಸ್ಯರೊಂದಿಗೆ ಚರ್ಚಿಸುವ ವೇಳೆ ಉಸ್ತುವಾರಿ ಸಚಿವರ ಸಲಹೆ ಪಾಲಿಸೋಣ ಎಂದರು.

ತ್ರಿಪಕ್ಷ ಸೂತ್ರಕ್ಕೆ ಸದಸ್ಯರು ಸಮ್ಮತಿಸಲು ವಿಳಂಬ ಹಾಗೂ ನಾಮಪತ್ರ ವಾಪಸ್ ಪಡೆಯಲು ನಿಗದಿಯಾಗಿದ್ದ ಸಮಯ ಮೀರಿದರೂ ಸದಸ್ಯರು ಸಭಾಂಗಣಕ್ಕೆ ಬಾರದಿದ್ದರಿಂದ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಧ್ಯಪ್ರವೇಶಿಸಿ ಒಮ್ಮತದಿಂದ ಸದಸ್ಯರನ್ನು ನಂತರ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಸೂಕ್ತ, ನಾಮಪತ್ರ ಸಲ್ಲಿಸಿರುವ ಸದಸ್ಯರು ಕಣದಿಂದ ಹಿಂದೆ ಸರಿದು ಚುನಾವಣೆ ಮುಂದೂಡಲು ಮನವಿ ಮಾಡೋಣ ಎಂದು ಒಪ್ಪಿಸುವಷ್ಟರಲ್ಲಿ ಮತದಾನದ ಸಮಯ ಮುಗಿದಿತ್ತು.

ಕೆಲ ಸದಸ್ಯರು ನಾಮಪತ್ರ ಸಲ್ಲಿಸಿರುವುದಲ್ಲದೆ ಬೇರೆಯವರಿಗೆ ಸೂಚಕರಾಗಿ, ಅನುಮೋದಕರಾಗಿ ಸಹಿ ಮಾಡಿ ಗೊಂದಲ ಸೃಷ್ಟಿಸಿದ್ದರಿಂದ ಮತದಾನ ಪ್ರಕ್ರಿಯೆ ನಡೆಸಲು ಚುನಾವಣಾಧಿಕಾರಿ ಎಂ.ಕೆ.ಪ್ರಭಾಕರ್‌ಗೆ ಸಾಧ್ಯವಾಗದೆ ಜಿಪಂ ಸಿಇಒ ದರ್ಶನ್ ಮಾರ್ಗದರ್ಶನದಂತೆ 15ಕ್ಕೆ ನಡೆಸಲು ನಿರ್ಧರಿಸಿದರು.

ಸದಸ್ಯರೊಂದಿಗೆ ಚರ್ಚೆ: ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಪ್ರಾಬಲ್ಯ ತೋರುವ ಸಲುವಾಗಿ ಜಿಪಂಗೆ ಮಾಜಿ ಶಾಸಕ ವೈ.ಸಂಪಂಗಿ ಬಂದಿದ್ದು ಗಮನ ಸೆಳೆಯಿತು. ಜೆಡಿಎಸ್ ಪರ ತಾಪಂ ಮಾಜಿ ಅಧ್ಯಕ್ಷ ಮುದುವಾಡಿ ಶ್ರೀನಿವಾಸ್ ಕಾಣಿಸಿಕೊಂಡು ಸಂಸದ ಮುನಿಸ್ವಾಮಿ, ಜಿಪಂ ಸದಸ್ಯರೊಂದಿಗೆ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net