ಕೋಟಿಲಿಂಗೇಶ್ವರಕ್ಕೆ ಭಕ್ತರ ದಂಡು

26 Betamangala 3
Published on

ಬೇತಮಂಗಲ: ಮಹಾಶಿವರಾತ್ರಿ ಪ್ರಯುಕ್ತ ಶಿವನ ಧ್ಯಾನ, ಪೂಜೆ, ಹರಕೆ ಮತ್ತು ಜಾಗರಣೆ ಮಾಡಲು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಕೋಟಿಲಿಂಗ ದೇವಾಲಯಕ್ಕೆ ಬುಧವಾರ ಭಕ್ತ ಸಾಗರವೇ ಹರಿದು ಬಂದಿತ್ತು.

ವಿಶೇಷವಾಗಿ ಹಿಂದಿ ಭಾಷಿಕರಾದ ಉತ್ತರ ಭಾರತದ ಜನರೂ ಅಧಿಕ ಸಂಖ್ಯೆಯಲ್ಲಿ ದೇವರ ದರ್ಶನ ಪಡೆದರು.

ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ನೆಲೆಸಿರುವ ಕೋಟಿಲಿಂಗೇಶ್ವರ ರಾಜ್ಯದಲ್ಲಿರುವ ಪ್ರಮುಖ ದೇವಾಲಯಗಳ ಪೈಕಿ ಹೆಚ್ಚು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುವ ಯಾತ್ರಾ ಸ್ಥಳವಾಗಿದ್ದು, ಶಿವರಾತ್ರಿ ವೇಳೆ ಜಾಗರಣೆ ಹಾಗೂ ಉಪವಾಸ ವ್ರತಾಚರಿಸಲು ಪ್ರಾಶಸ್ತ್ಯ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಸಾವಿರಾರೂ ಭಕ್ತರು ದೇವರ ದರ್ಶನ ಪಡೆದರು.

ಕ್ಷೇತ್ರದಲ್ಲಿ ನೆಲೆಸಿರುವ ಮಂಜುನಾಥಸ್ವಾಮಿ ಸೇರಿ ಹತ್ತಾರು ದೇವಾರ ಆಲಯಗಳು ಮತ್ತು ವಿಶೇಷವಾಗಿ ಎತ್ತರದ ಶಿವಲಿಂಗ ಭಕ್ತರನ್ನು ಸೆಳೆಯುತ್ತಿದ್ದು, ಶಿವಲಿಂಗ ದರ್ಶನದ ಬಳಿಕ ಪ್ರತಿಯೊಬ್ಬರೂ ಬೃಹದಾಕಾರದ ಶಿವಲಿಂಗದ ಮುಂದೆ ಫೋಟೋಗಳನ್ನು ತೆಗೆಸಿಕೊಂಡರು.

ಮುಂಜಾನೆಯಿಂದಲೇ 108 ಅಡಿ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಯಿತು.ಶ್ರೀ ಮಂಜುನಾಥ, ವೆಂಕಟೇಶ್ವರ, ಬ್ರಹ್ಮ, ವಿಷ್ಣು, ಮಹೇಶ್ವರ, ಶನಿಮಹಾತ್ಮ, ಸಾಯಿಬಾಬಾ ಸೇರಿ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.

ಉತ್ತರ ಭಾರತದ ಭಕ್ತರು ಭಾಗಿ: ಜಿಲ್ಲಾದ್ಯಂತ ವಿವಿಧ ಕೆಲಸ ಕಾರ್ಯಗಳಲ್ಲಿ ಜೀವನೋಪಾಯಕ್ಕೆ ಬಂದು ನೆಲೆಸಿರುವ ಉತ್ತರ ಭಾರತದ ಅಸ್ಸಾಂ, ರಾಜಸ್ತಾನ, ಬಿಹಾರ್, ಗುಜರಾತ್ ಸೇರಿ ಇತರೆ ರಾಜ್ಯಗಳ ಭಕ್ತರೂ ಕೋಟಿಲಿಂಗಕ್ಕೇ ಬಂದಿದ್ದರಿಂದ ಜನದಟ್ಟಣೆ ಹೆಚ್ಚಾಗಿತ್ತು.

ರಥೋತ್ಸವಕ್ಕೆ ಚಾಲನೆ: ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಶ್ರೀ ಮಂಜುನಾಥಸ್ವಾಮಿ ರಥೋತ್ಸವಕ್ಕೆ ಶಾಸಕಿ ರೂಪಕಲಾ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್.ಮುನಿಯಪ್ಪ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ದೇಗುಲದ ಆಡಳಿತಾಧಿಕಾರಿ ಕೆ.ವಿ.ಕುಮಾರಿ ಅವರು ಕುಡಿಯುವ ನೀರು, ಪ್ರಸಾದ ಸೇರಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಸಿದ್ದರು.

ಬೇತಮಂಗಲ ಸಮೀಪದ ಕಮ್ಮಸಂದ್ರದಲ್ಲಿ ಕೋಟಿಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಚಿವ ಕೆ. ಎಚ್.ಮುನಿಯಪ್ಪ, ಶಾಸಕಿ ರೂಪಕಲಾ ಅವರು ದೇವರಿಗೆ ಪೂಜೆ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಿಸಾನ್ ಕೆತ್ ಪ್ರಧಾನ ಕಾರ್ಯದರ್ಶಿ ಸುಭಾಷ್‌ಚಂದ್ರಗೌಡ, ಸ್ಥಳೀಯ ಮುಖಂಡರಾದ ಅಮು ಲಕ್ಷ್ಮೀನಾರಾಯಣ್, ನಾರಾಯಣಸ್ವಾಮಿ, ನಾಗರಾಜ್, ಪದ್ಮನಾಭರೆಡ್ಡಿ, ಮುನಿಸ್ವಾಮಿ, ರಾಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net