ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ, ಶಾಸಕ ಕೊತ್ತೂರು ಜಿ. ಮಂಜುನಾಥ್ ಹಾಗೂ ಎರಡು ಜಿಲ್ಲೆಯ ಜನಪ್ರತಿನಿಧಿಗಳು ಭಾನುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ, ಬ್ಯಾಂಕ್‌ನ ಪ್ರಗತಿ ಕುರಿತು ಚರ್ಚಿಸಿದರಲ್ಲದೇ ಪ್ರಸ್ತುತ ಇರುವ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ವೆಂಕಟೇಶ್ ಅವರನ್ನು ವರ್ಗಾವಣೆ ಮಾಡದಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್‌ಗೆ ಎಂಡಿ ಆಗಿ ಬಂದ ವೆಂಕಟೇಶ್ ಅವರನ್ನು ಶಾಸಕಿ ರೂಪಕಲಾ ಎತ್ತಂಗಡಿ ಮಾಡಿಸಿದ್ದರು. ಇತ್ತೀಚೆಗೆ ಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷರ ಚುನಾವಣೆ ನಂತರ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು, ಬ್ಯಾಂಕ್‌ನಲ್ಲಿ ಹಿಂದೆ ನಡೆದ ಹಗರಣಗಳನ್ನು ಬಯಲಿಗೆಳೆಯಬೇಕು ಎಂದು ಜಿಲ್ಲೆಯ ಎಲ್ಲ ಶಾಸಕರು ಸೇರಿ ಮೂರು ದಿನದ ಹಿಂದೆ ವೆಂಕಟೇಶ್ ಅವರನ್ನು ಬ್ಯಾಂಕಿಗೆ ಮತ್ತೆ ಎಂಡಿ ಆಗಿ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ. ಅಭಿನಂದನೆ ತಿಳಿಸುವ ನೆಪದಲ್ಲಿ ಎಲ್ಲರೂ ಎಂಡಿಯನ್ನು ಮುಂದುವರಿಸಲು ತಿಳಿಸಿದ್ದಾರೆ ಎನ್ನಲಾಗಿದೆ.
ಬಂಗಾರಪೇಟೆಯ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಕೆ.ವೈ. ನಂಜೇಗೌಡ, ಚಿಂತಾಮಣಿ ಎಂ.ಸಿ. ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಇದ್ದರು.
ನಾಟಕೀಯ ದೃಶ್ಯ: ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಸಿಎಂ ಭೇಟಿ ಮಾಡಿ ಡಿಸಿಸಿ ಬ್ಯಾಂಕ್ ಎಂಡಿ ಮುಂದುವರಿಸುವಂತೆ ಒತ್ತಾಯಿಸಿ ಆಚೆ ಬರುತ್ತಿದ್ದಂತೆ ಕೆಜಿಎ್ ಶಾಸಕಿ ರೂಪಕಲಾ ಏಕಾಂಗಿಯಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ವೆಂಕಟೇಶ್ ಎಂ.ಡಿ ಆಗಿ ಮುಂದುವರಿಯುವುದು ಬೇಡ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಪ್ರಗತಿಯೂ ಚರ್ಚೆ: ಜಿಲ್ಲೆಯ ಸಹಕಾರ ಕ್ಷೇತ್ರದ ಅಭಿವೃದ್ಧಿ, ಡಿಸಿಸಿ ಬ್ಯಾಂಕಿನ ಕಾರ್ಯವೈಖರಿ ಹಾಗೂ ಜನಪರ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿ ಎರಡೂ ಜಿಲ್ಲೆಗಳ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು, ರೈತರು, ಹೈನುಗಾರರು ಹಾಗೂ ಸಹಕಾರ ಸಂಘಗಳ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.