ಗ್ರಾಪಂಗೂ ಯೋಗ್ಯತೆ ಇಲ್ಲದವರಿಂದ ಟೀಕೆ

ಮಾಲೂರು ತಾಲೂಕು ಟೇಕಲ್​ ಹೋಬಳಿ ಕೆ.ಜಿ. ಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜನಸೇವಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಶಾಸಕ ಕೆ.ವೈ ನಂಜೇಗೌಡ ಹೇಳಿಕೆ.
ಮಾಲೂರು ತಾಲೂಕು ಕೆ.ಜಿ. ಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಶಾಸಕ ಕೆ.ವೈ. ನಂಜೇಗೌಡ ಮಾತನಾಡಿದರು. ರಮೇಶ್​ಗೌಡ, ಎಸ್​.ಡಿ.ಎಂ.ಸಿ. ಅಧ್ಯಕ್ಷ ಎ.ಕೆ. ವೆಂಕಟೇಶ್​, ದರಖಾಸ್ತು ಸಮಿತಿ ಸದಸ್ಯ ಸತೀಶ್​ ಇದ್ದರು.
ಮಾಲೂರು ತಾಲೂಕು ಕೆ.ಜಿ. ಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಶಾಸಕ ಕೆ.ವೈ. ನಂಜೇಗೌಡ ಮಾತನಾಡಿದರು. ರಮೇಶ್​ಗೌಡ, ಎಸ್​.ಡಿ.ಎಂ.ಸಿ. ಅಧ್ಯಕ್ಷ ಎ.ಕೆ. ವೆಂಕಟೇಶ್​, ದರಖಾಸ್ತು ಸಮಿತಿ ಸದಸ್ಯ ಸತೀಶ್​ ಇದ್ದರು.
Published on: 

ಟೇಕಲ್​: ಗ್ರಾ.ಪಂ. ಸದಸ್ಯನಾಗಲು ಯೋಗ್ಯತೆ ಇಲ್ಲದ ವಿರೋಧಿಗಳು ನನ್ನ ವಿರುದ್ಧ ಮಾತನಾಡುತ್ತಾರೆ. ಎರಡು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತಿದ್ದೇನೆ. ನನ್ನೊಂದಿಗೆ ಯೊಗ್ಯರು ಇದ್ದು, ಅವರು ಎಂದಿಗೂ ಸಹ ವಿರೋಧಿಗಳ ವಿರುದ್ಧ ಮಾತನಾಡುವವರಲ್ಲ. ಆ ರೀತಿ ನಮ್ಮ ಕಾರ್ಯಕರ್ತರನ್ನು, ಮುಖಂಡರನ್ನು ಬೆಳೆಸಿದ್ದೇನೆ ಎಂದು ಶಾಸಕ ಕೆ.ವೈ ನಂಜೇಗೌಡ ಹೇಳಿದರು.

ಮಾಲೂರು ತಾಲೂಕು ಟೇಕಲ್​ ಹೋಬಳಿ ಕೆ.ಜಿ. ಹಳ್ಳಿ ಗ್ರಾಮದಲ್ಲಿ ಕರ್ನಾಟಕ ಜನಸೇವಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಕೆ.ಜಿ. ಹಳ್ಳಿ ಇಂದು ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಸುಮಾರು 27 ಎಕರೆ ಸರ್ಕಾರಿ ಜಮೀನನ್ನು ವಿವಿಧ ಇಲಾಖೆಗಳಿಗೆ ಮಂಜೂರು ಮಾಡಿಸುವ ಮೂಲಕ ಗ್ರಾಮದ ಚಿತ್ರಣವೇ ಬದಲಾಗಿದೆ. ಕಳೆದ 7 ವರ್ಷದಲ್ಲಿ ಕೆ.ಜಿ. ಹಳ್ಳಿಯಲ್ಲಿ ಅಭಿವೃದ್ಧಿಗೆ ದಿಟ್ಟ ಹೆಜ್ಜೆ ಇಡಲಾಗಿದೆ. ಈ ಹಿಂದೆ ಬರಡು ಬಿದ್ದಿದ್ದ ಸರ್ಕಾರಿ ಜಮೀನಿನಲ್ಲಿ ಇಂದು ವಿವಿಧ ಇಲಾಖೆಗಳ ಕಚೇರಿಗಳು ತಲೆ ಎತ್ತಿವೆ. ಈ ತಾಲೂಕಿನ ಬಡ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಅದರಂತೆ ಇಲ್ಲಿ ವೃತ್ತಿಪರ ಕೋರ್ಸ್​ ಐಟಿಐ ಕಾಲೇಜು, ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲಾಗಿದೆ. ವಿದ್ಯಾಭ್ಯಾಸದ ನಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿ ನಿಲಯ ಮಂಜೂರು ಮಾಡಿಸಿಕೊಡಲಾಗಿದೆ. ಇದರಿಂದ ತಾಲೂಕಿನ ನೂರಾರು ಬಡ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುವಂತಾಗಿದೆ ಎಂದರು.

ಕನ್ನಡ ನಾಡು, ನುಡಿ, ನೆಲ, ಜಲ ಹಾಗೂ ಭಾಷೆಯ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಿ ಕನ್ನಡದ ಹಿರಿಮೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಶಾಸಕರು ತಿಳಿಸಿದರು.

ರಮೇಶ್​ ಗೌಡ, ಎಸ್​.ಡಿ.ಎಂ.ಸಿ. ಅಧ್ಯಕ್ಷ ಎ.ಕೆ. ವೆಂಕಟೇಶ್​, ದರಖಾಸ್ತು ಸಮಿತಿ ಸದಸ್ಯ ಸತೀಶ್​, ಕರ್ನಾಟಕ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್​ ಗೌಡ, ಜಲಪತಿ ವೆಂಕಟೇಶ್​ ಇದ್ದರು.