​ಕೈಗಾರಿಕಾಭಿವೃದ್ಧಿಗೆ ಎತ್ತಿನಹೊಳೆ ನೀರು?

​ಎತ್ತಿನಹೊಳೆ ಪಂಪ್ ಹೌಸ್
​ಎತ್ತಿನಹೊಳೆ ಪಂಪ್ ಹೌಸ್
Published on
​ಕಿರುವಾರ ಎಸ್.ಸುದರ್ಶನ್ ಕೋಲಾರ: 
ಬಯಲುಸೀಮೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೊಂಡು ಸರ್ಕಾರ ಜಾರಿಗೆ ತಂದಿರುವ ಎತ್ತಿನಹೊಳೆ ಯೋಜನೆಯಿಂದ ಕೈಗಾರಿಕೆಗಳಿಗೆ ನೀರು ಹರಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದ್ದು, ಈ ಸಂಬಂಧ ಕಾಮಗಾರಿಗೆ ಸರ್ಕಾರ ಟೆಂಡರ್ ಕರೆದಿದೆ. ಹೀಗಾಗಿ ಯೋಜನೆಯ ಮೂಲೋದ್ದೇಶವೇ ದಿಕ್ಕು ತಪ್ಪುವ ಆತಂಕವು ಶುರುವಾಗಿದೆ.
​ನೀರಾವರಿ ಹೋರಾಟಗಾರರ ಆಕ್ರೋಶ
ಪಶ್ಚಿಮ ಘಟ್ಟಗಳಲ್ಲಿ ಬಿದ್ದ ಮಳೆ ನೀರು ಸಮುದ್ರಕ್ಕೆ ಸೇರುವುದನ್ನು ತಪ್ಪಿಸಿ ಬರಪೀಡಿತ ಜಿಲ್ಲೆಗಳಾದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರಿಗೆ ಕುಡಿಯುವ ನೀರು ಹರಿಸಲು ಸರ್ಕಾರ 2014ರಲ್ಲಿ ಯೋಜನೆ ಕೈಗೆತ್ತಿಕೊಂಡು ಆಡಳಿತಾತ್ಮಕ ಅನುಮೋದನೆ ನೀಡಿತು. ಕೇವಲ ಎರಡು ವರ್ಷದಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದ ಸರ್ಕಾರ, ಒಂದೂವರೆ ದಶಕ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ.
​ಈಡೇರುವುದೆಂದು ಸರ್ಕಾರದ ಭರವಸೆ
ಯೋಜನೆಯ ವೆಚ್ಚದ ಗಾತ್ರ 13 ಸಾವಿರ ಕೋಟಿ ರೂ. ಇದ್ದಿದ್ದು ಇದೀಗ ₹23 ಸಾವಿರ ಕೋಟಿ ದಾಟಿದೆ. ಹೀಗೆ ವರ್ಷಗಳು ಕಳೆಯುತ್ತಿದ್ದಂತೆ ಅನುದಾನದ ಗಾತ್ರ ಬೆಳೆಯುತ್ತಿದೆಯೇ ಹೊರತು, ಕಟ್ಟಕಡೆಯ ಜಿಲ್ಲೆಗೆ ನೀರು ಬಂದು ತಲುಪುವುದು ಯಾವಾಗ? ಎಂಬ ಪ್ರಶ್ನೆ ಎದುರಾಗಿದೆ. ಈ ಪರಿಸ್ಥಿತಿಯು, ನದಿಯ ನೈಸರ್ಗಿಕ ಹರಿವನ್ನು ತಿರುಗಿಸುವುದು ಅವೈಜ್ಞಾನಿಕ ಹಾಗೂ ವ್ಯರ್ಥ ಪ್ರಯತ್ನ ಎಂಬ ಪರಿಸರ ತಜ್ಞರ ವಾದಕ್ಕೆ ಪುಷ್ಟಿ ನೀಡಿದೆ.
​ಯೋಜನೆ ಉದ್ದೇಶ ದಿಕ್ಕು ತಪ್ಪುವ ಆತಂಕ: ಆರಂಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ ಒಳಗೊಂಡಿದ್ದವು. ಅನಂತರ 7 ಜಿಲ್ಲೆಗಳಿಗೆ ವಿಸ್ತರಣೆಗೊಂಡಿತು. ಈ ಯೋಜನೆ ಯಾವ ವರ್ಷ ಪೂರ್ಣಗೊಂಡು ಅನುಷ್ಠಾನಗೊಳ್ಳುತ್ತದೆ ಎಂದು ಸ್ಪಷ್ಟಪಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಬರಪೀಡಿತ ಜಿಲ್ಲೆಗಳನ್ನು ಕಡೆಗಣಿಸಿಕೊಂಡು ಬಂದಿರುವುದರಿಂದ ಯೋಜನೆಯೇ ಈಗ ನೀರಾವರಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
​ಕಿವಿಗೆ ಹೂವು ಇಡುವ ಪ್ರಯತ್ನ
​ಎತ್ತಿನಹೊಳೆ ಯೋಜನೆಯಿಂದ ನೀರಿನ ಲಭ್ಯತೆ ಕೇವಲ 8 ಟಿಎಂಸಿ ಎಂದು ಕೇಂದ್ರೀಯ ಜಲ ಆಯೋಗ ಸ್ಪಷ್ಟಪಡಿಸಿದೆ. ಇದರ ಜತೆಗೆ ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ ಸೇರಿ ಹಲವು ಸಂಸ್ಥೆಗಳು ವೈಜ್ಞಾನಿಕವಾಗಿ ಸಂಶೋಧನೆ ಮಾಡಿ ವರದಿ ನೀಡಿವೆ. ಆದರೆ ಸರ್ಕಾರಗಳು ವರದಿಗಳನ್ನು ಮೂಲೆಗೆ ತಳ್ಳಿ ನೀರಿನ ಲಭ್ಯತೆಯನ್ನು 24 ಟಿಎಂಸಿಗೆ ಏರಿಕೆ ಮಾಡಿಕೊಂಡಿವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ತುಮಕೂರು ಸಮೀಪ ಮೊದಲ ಹಂತದ ಯೋಜನೆ ಉದ್ಘಾಟನೆ ವೇಳೆ, ಅಂದಿನ ಜಲಸಂಪನ್ಮೂಲ ಸಚಿವ ಹಾಗೂ ಈಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, 2027ರ ಡಿಸೆಂಬರ್ ಅಂತ್ಯದೊಳಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅಲ್ಲಿಂದ ಇಲ್ಲಿಯ ತನಕ ಆಗಿರುವ ಯೋಜನೆಯ ಬೆಳವಣಿಗೆಗಳು ಜಿಲ್ಲೆಯ ಜನರ ಕಿವಿಗೆ ಹೂವು ಇಟ್ಟಿವೆಯೇ ಹೊರತು ಪ್ರಯತ್ನ ಫಲ ನೀಡಿಲ್ಲ.
​ಮೋಸದ ವಿರುದ್ಧ ಧ್ವನಿ ಎತ್ತಿ
​ಬೆಂಗಳೂರು ಸುತ್ತಮುತ್ತಲಿನ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಸರ್ಕಾರ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಹೊರಟಿದ್ದು, ಇದರ ನಡುವೆ ಎತ್ತಿನಹೊಳೆ ನೀರನ್ನು ಕೈಗಾರಿಕಾ ಪ್ರದೇಶಕ್ಕೆ ಹರಿಸಲು ಟೆಂಡರ್ ಕರೆದಿರುವುದು ಬೆಳಕಿಗೆ ಬಂದಿದೆ. ಕಾಮಗಾರಿ ಪ್ರಗತಿ ಮಧ್ಯೆ ಯೋಜನೆಯಲ್ಲಿ ಬದಲಾವಣೆ ಆಗುತ್ತಿದ್ದರೆ ಉದ್ದೇಶ ಈಡೇರಿಸಲು ಸಾಧ್ಯವೇ..?, 2027ರ ಡಿಸೆಂಬರ್ ಅಂತ್ಯದೊಳಗೆ ಯೋಜನೆ ಅನುಷ್ಠಾನ ಮಾಡಿಯೇ ತೀರುತ್ತೇವೆ ಎಂದು ಸರ್ಕಾರ ನೀಡಿರುವ ಭರವಸೆ ಈಡೇರಲು ಸಾಧ್ಯವೇ?.. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ತಮ್ಮ ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಮೋಸದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಒತ್ತಾಯಿಸಿದೆ.
​ನೀರಾವರಿ ವಿಚಾರದಲ್ಲಿ ಬಯಲುಸೀಮೆ ಜಿಲ್ಲೆಗಳನ್ನು ಸರ್ಕಾರಗಳು ವಂಚಿಸಿಕೊಂಡೇ ಬರುತ್ತಿವೆ. ಎತ್ತಿನಹೊಳೆ ಯೋಜನೆ ಉದ್ದೇಶ ಮರೆತು ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸಲು ಟೆಂಡರ್ ಆಗಿದೆ. ಹೀಗಾದರೆ ನೀರು ಲಭ್ಯವಾಗುವ ಗ್ಯಾರಂಟಿಯಿಲ್ಲ. ಇದರ ವಿರುದ್ಧ ಹೋರಾಟ ರೂಪಿಸಲಾಗುವುದು.
- ಆಂಜನೇಯರೆಡ್ಡಿ, ಅಧ್ಯಕ್ಷ, ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ.
​ಎತ್ತಿನಹೊಳೆ ಯೋಜನೆಯಿಂದ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸಲು ಸರ್ಕಾರ ಟೆಂಡರ್ ಕರೆದಿರುವುದನ್ನು ಸ್ಥಗಿತ ಮಾಡಬೇಕು. ಇಲ್ಲದಿದ್ದರೆ ಹೋರಾಟದ ಪರಿಣಾಮ ಎದುರಿಸಬೇಕಾಗುತ್ತದೆ.
- ವಿ.ಕೆ. ರಾಜೇಶ್, ಸಂಚಾಲಕ, ನೀರಾವರಿ ಹೋರಾಟ ಸಮಿತಿ, ಕೋಲಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net