ಜಿಲ್ಲಾಡಳಿತದಿಂದ ನೀರಿನ ಅದಾಲತ್​, ಆಡಿಟ್​

ಕೋಲಾರ ಜಿಲ್ಲಾಡಳಿತ ಭವನ.
ಕೋಲಾರ ಜಿಲ್ಲಾಡಳಿತ ಭವನ.
Published on
ಕೋಲಾರ: ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಎದುರಾಗುವ ನೀರಿನ ಸಮಸ್ಯೆ ನಿವಾರಣೆಗಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರ ಮಾರ್ಗದರ್ಶನದಲ್ಲಿ "ನೀರಿನ ಅದಾಲತ್​, ನೀರಿನ ಆಡಿಟ್​' ವಿನೂನ ಪ್ರಯೋಗ ಹಮ್ಮಿಕೊಳ್ಳಲಾಗಿದೆ.
ಬೇಸಿಗೆ ಶುರುವಾದಾಗಿನಿಂದ ನೀರಿನ ಸಮಸ್ಯೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದಲ್ಲೆ ಸಮತ್ಯಾತ್ಮ ಗ್ರಾಮಗಳ, ವಾರ್ಡ್​ಗಳ ಮಾಹಿತಿ ಕಲೆಹಾಕುತ್ತಿದ್ದು, ಮುಂಜಾಗ್ರತ ಕ್ರಮಕ್ಕೆ ಸೂಚಿಸಲಾಗುತ್ತಿತ್ತು, ಇದೀಗ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ವಿನೂತನ ಕಾರ್ಯ ಜಾರಿಗೆ ಮುಂದಾಗಿದ್ದಾರೆ.
ನಗರ ಪ್ರದೇಶದಲ್ಲಿ ಒಬ್ಬರಿಗೆ 150 ಲೀಟರ್​, ಹಾಗೂ ಗ್ರಾಮೀಣ ಪ್ರದೇಶದಲ್ಲಿ 55 ಲೀಟರ್​ ನೀರಿನ ಲಭ್ಯತೆ ಮತ್ತು ಬಳಕೆಯನ್ನು ಅಳೆಯಲು ನೀರಿನ ಲೆಕ್ಕ ಪರಿಶೀಧನೆ ಕಡ್ಡಾಯವಾಗಿ ಪ್ರತಿನಿತ್ಯ ನಡೆಸಬೇಕು.
ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ವಾರಕ್ಕೊಮ್ಮೆ ನೀರಿನ ಅದಾಲತ್​ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕಾರ್ಯಪಾಲಕ ಎಂಜಿನಿಯರ್​, ಜಿಲ್ಲೆಯ ಎಲ್ಲಾ ನಗರಸಭೆಯ ಆಯುಕ್ತರು, ಪುರಸಭೆಯ ಪೌರಾಯುಕ್ತರು ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.
ನೀರಿನ ಅದಾಲತ್​ನ್ನು ಎಲ್ಲರಿಗೂ ಸುಲಭವಾಗಿ ತಲುಪಲು ಸಾಧ್ಯವಾಗುವಂತಹ ಸ್ಥಳದಲ್ಲಿ ಮೇ ಮತ್ತು ಜೂನ್​ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ 3 ರಿಂದ 5, ನಗರ ಸ್ಥಳಿಯ ಸಂಸ್ಥೆಗಳಲ್ಲಿ 2 ರಿಂದ 3 ಸಭೆಗಳನ್ನು ನಡೆಸಬೇಕು.
ಲಭ್ಯವಿರುವ ನೀರಿನ ಪ್ರಮಾಣ, ಸಬರಾಜು ವೇಳಾಪಟ್ಟಿ, ಸಾರ್ವಜನಿಕರ ದೂರು ಆಲಿಸುವುದು, ಅಕ್ರಮವಾಗಿ ನೀರು ಎತ್ತುವುದು, ಕಲುಷಿತ ನೀರು ಸರಬರಾಜು, ಕುಡಿಯುವ ನೀರು ತೋಟಗಾರಿಕೆ, ಕಟ್ಟಡಗಳಿಗೆ ಬಳಕೆ ಮಾಡುವ ಕುರಿತು, ಸಮಸ್ಯೆ ಇದ್ದರೆ ತ್ವರಿತ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಿ ಮಾಹಿತಿ ನೀಡಬೇಕು.
* ಮುಖ್ಯ ಉದ್ದೇಶವೇನು...?
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗಟ್ಟಲು ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳಿಯ ಸಂಸ್ಥೆಗಳಲ್ಲಿ ಅದಾಲತ್​ನ್ನು ನಡೆಸಲು ನಿರ್ಧರಿಸಲಾಗಿದ್ದು, ನೀರು ವಿತರಣೆಯಲ್ಲಿ ಉಂಟಾಗುವ ತಾಂತ್ರಿಕ ಅಡೆತಡೆಗಳು, ನೀರು ಪೋಲಾಗುವುದನ್ನು ತಡೆಯುವುದು, ಜಲಮೂಲಗಳ ಮಾಲಿನ್ಯ ತಡೆಯುವುದು, ಪೈಪ್​ಲೈನ್​ ಸೋರಿಕೆ ಅಥವಾ ಪಂಪ್​ಸೆಟ್​ ದುರಸ್ಥಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವುದು, ಸಮಸ್ಯೆ ಕುರಿತು ಸಾರ್ವಜನಿಕರಲ್ಲಿ ಎದುರಾಗುವ ಆತಂಕ ತಪ್ಪಿಸುವುದು ಮುಖ್ಯ ಉದ್ದೇಶವಾಗಿದೆ.
ಕುಡಿಯುವ ನೀರಿನ ಅಭಾವವಿರುವ ವಾರ್ಡ್​ಗಳಲ್ಲಿ, ಗ್ರಾಮಗಳಲ್ಲಿ ಈ ಅದಾಲತ್​ ನಡೆಸಬೇಕು. ಪರಿಸ್ಥಿತಿಯ ಗಂಭೀರತೆ ಪರಿಶೀಲನೆ ನಡೆಸಿ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಬೇಕು, ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿ ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಬೇಕು.
* ಗ್ರಾ.ಪಂ, ನಗರ ಮಟ್ಟದಲ್ಲಿ ಸಮಿತಿ ರಚನೆ
ಕುಡಿಯುವ ನೀರಿನ ಅಭಾವ ನೀಗಿಸಲು ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಮಟ್ಟದಲ್ಲಿ ಕುಡಿಯುವ ನೀರಿನ ನಿರ್ವಹಣಾ ಸಮಿತಿ ರಚನೆ ಕೂಡ ಮಾಡಲಾಗಿದ್ದು, ಜವಾಬ್ದಾರಿಗಳನ್ನು ವಹಿಸಲಾಗಿದೆ.
ಶಾಲಾ- ಕಾಲೇಜು, ಅಂಗನವಾಡಿ, ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿ ರ್ನಿಲಕ್ಷ$್ಯ ತೋರಿದಲ್ಲಿ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಲಾಗಿದೆ.
ನಗರ ಸ್ಥಳಿಯ ಸಂಸ್ಥೆಗಳು ಸ್ವಂತ ಸಂಪನ್ಮೂಲ ಕಾಯ್ದಿರಿಸಬೇಕು. ಅವುಗಳನ್ನು ಕೇವಲ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಾತ್ರ ಬಳಸಬೇಕು. ಅದನ್ನು ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಇತರ ಯಾವುದೇ ಉದ್ದೇಶಕ್ಕೆ ಪಾವತಿ ಮಾಡುವಂತಿಲ್ಲ. ಈ ಸಂಬಂಧ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇಲ್ವಿಚಾರಣೆ ನಡೆಸಿ ಕೈಗೊಂಡ ಕ್ರಮಗಳ ವರದಿ ನೀಡಬೇಕು.
ಕೋಟ್​...
ಸ್ಥಳಿಯ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರಿಲ್ಲ, ಆಗಾಗಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳು ವಾರ್ಡ್​, ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಕುರಿತು ಮಾಹಿತಿ ನೀಡಬೇಕು, ಅಧಿಕಾರಿಗಳೊಂದಿಗೆ ಸಹಕರಿಸಿದರೆ ಸಮಸ್ಯೆ ಬಗೆಹರಿಸಲು ಸುಲಭವಾಗುತ್ತದೆ.
- ಡಾ.ಎಂ.ಆರ್​.ರವಿ, ಜಿಲ್ಲಾಧಿಕಾರಿ, ಕೋಲಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net