ಗೋಮಾಳ ರಕ್ಷಣೆ ಜರೂರಾಗಲಿ

 ಮಾಲೂರು ತಾಲೂಕಿನ ಚೆನ್ನಿಗಿರಾಯಪುರ ಸರ್ವೇ ನಂಬರ್ 6ರ ಗೋಮಾಳ ಜಮೀನು
ಮಾಲೂರು ತಾಲೂಕಿನ ಚೆನ್ನಿಗಿರಾಯಪುರ ಸರ್ವೇ ನಂಬರ್ 6ರ ಗೋಮಾಳ ಜಮೀನು
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿರುವ ಚೆನ್ನಿಗರಾಯಪುರ ಸರ್ವೇ ನಂ.5ರ ಜಮೀನನ್ನು ಬೆಂಗಳೂರಿನ ಬಿಲ್ಡರ್ ಗಳಿಗೆ ಕರಾರು ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿದ್ದು, ಆ ಜಾಗವನ್ನು ರಕ್ಷಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ತಾಲೂಕಿನ ಗ್ರಾಮದ ಸರ್ವೇ ನಂಬರ್ 6ರ ಗೋಮಾಳ ಜಮೀನು ದರಖಾಸ್ತು ಸಮಿತಿ ಮೂಲಕ ಮಂಜೂರು ಮಾಡಲು ಮಾಲೂರು ತಾಲೂಕಿನ ಚೆನ್ನಿಗರಾಯಪುರ, ಮಾಲೂರು, ಹೆಡಗಿನಬೆಲೆ, ಕೋಡೂರು, ಬೆಳ್ಳಾವಿಯ ಒಟ್ಟು 27 ಮಂದಿ 1982-83ರಲ್ಲಿ ಸುಮಾರು ಅರ್ಜಿ ಸಲ್ಲಿಸಿದ್ದರು.
ಸದರಿ ಜಾಗವು ವ್ಯವಸಾಯಕ್ಕೆ ಯೋಗ್ಯವಲ್ಲ ಎಂದು ಆಂದಿನ ಜಿಲ್ಲಾಧಿಕಾರಿ ಆದೇಶಿಸಿದ್ದು, ಅಂದಿನಿಂದ ಇಂದಿನವರೆಗೂ ಅರ್ಜಿದಾರರ ಪರವಾಗಿ ಭೂ ದಾಖಲೆಗಳು ಆಗಿರಲಿಲ್ಲ. ಇದಕ್ಕಾಗಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿ ಮಂಜೂರು ಮಾಡಿಸಿಕೊಳ್ಳಲು ಸತತ ಪ್ರಯತ್ನ ಪಟ್ಟರೂ ಅದು ವಿಫಲವಾಗಿತ್ತು. ಇದರ ನಡುವೆ ก 20250 2.7ರಂದು ಕರಾರು ಮಾಡಿಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಉದ್ಯಮಿ, ರಾಜಕೀಯ ಮುಖಂಡರು ನಿರ್ಗಮಿತ ಎಸಿ ಅವರ ಮೇಲೆ ಒತ್ತಡ ತಂದು ಜಮೀನು ಮಂಜೂರು ಆದೇಶ ಮಾಡಿಸಿಕೊಂಡಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿದೆ. ಇದರ ಬೆನ್ನಲ್ಲೇ ರೈತರಿಂದ ಉದ್ಯಮಿ ಮಾಡಿಸಿಕೊಂಡಿರುವ ಕರಾರನ್ನು ರದ್ದುಪಡಿಸುವ ಮೂಲಕ ಜಾಗ ರಕ್ಷಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಉಪವಿಭಾಗಾಧಿಕಾರಿ ಆದೇಶವು ಸರಿಯಿಲ್ಲ ಎಂದು ಕೆಲವರು ದೂರಿದ್ದರೆ, ಇನ್ನು ಕೆಲ ಸಂಘ-ಸಂಸ್ಥೆಗಳ ಮುಖಂಡರು ಸರಿ ಇದೆ ಎಂದು ಹೇಳಿಕೆ ನೀಡುತ್ತಿದ್ದು, ಇಡೀ ಪ್ರಕರಣ ಅನುಮಾನಕ್ಕೆ ಎಡೆ ಮಾಡಿದೆ.
ಎಸಿ ಆದೇಶಕ್ಕೆ ಡಿಸಿ ನ್ಯಾಯಾಲಯದಲ್ಲಿ ತಡೆ
ಸದರಿ ಜಾಗ ಸಂಬಂಧ ಉಪ ವಿಭಾಗಾಧಿಕಾರಿ 2025 ನ.6ರಂದು ನೀಡಿರುವ ಆದೇಶಕ್ಕೆ ಜಿಲ್ಲಾಧಿಕಾರಿ 2025 ನ.26ರಂದು ತಡೆ ನೀಡಿ ಆದೇಶಿಸಿದ್ದಾರೆ. ಉಪವಿಭಗಾಧಿಕಾರಿ ಆದೇಶ ಪ್ರಶ್ನಿಸಿ ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಹೂವಳ್ಳಿ ಪ್ರಕಾಶ್ ಎಂಬುವರು ಎಸಿ, ಬೆಂಗಳೂರಿನ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹಾಗೂ ರೈತರನ್ನು ಎದುರುದಾರನ್ನಾಗಿಸಿ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. 2025ರ ನ.26ರಂದು ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಡೆ ಹಿಡಿದಿದ್ದಾರೆ. ಎಸಿ ಆದೇಶದ ನಂತರ ಚೆನ್ನಿಗರಾಯಪುರ ಪ್ರಕರಣ ಕುರಿತು ತಂಡ ರಚಿಸಿ ತನಿಖೆ ನಡೆಸಿ ವರದಿ ಪಡೆದಿದ್ದಾರೆ ಎನ್ನಲಾಗುತ್ತಿದ್ದು,
ರೈತರಿಂದ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳು ನಕಲಿ ಎಂಬುದು ಬಯಲಿಗೆ ಎಂದಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಎಸಿ ಆದೇಶದಲ್ಲೇನಿದೆ?
ಚನ್ನಿಗರಾಯಪುರದ ಸರ್ವೇ ನಂ.6ರ ಪೈಕಿ 3 ಎಕರೆ ಜಮೀನಿಗೆ ಸೀಮಿತಗೊಂಡಂತೆ ಎದುರುದಾರ ಹನುಮಪ್ಪ ಪರ ಆಗಿರುವ ಭೂ. ಮಂಜೂರಾತಿ ರದ್ದುಪಡಿಸಿದೆ. ಉಳಿದ 1 ರಿಂದ 12, 14 ರಿಂದ 27ನೇ ಎದರುದಾರರ ಪರ ಆಗಿರುವ ಪ್ರಶ್ನಿತ ಭೂ ಮಂಜೂರಾತಿಯನ್ನು ಎತ್ತಿ ಹಿಡಿದಿದೆ. ಅಂತೆಯೇ ಪ್ರಕರಣ ಮುಕ್ತಾಯಗೊಳಿಸಿದೆ ಎಂದು ನಿರ್ಗಮಿತ ಎಸಿ.ಡಾ.ಮೈತ್ರಿ ಆದೇಶಿಸಿದ್ದಾರೆ. ಇದರಲ್ಲಿ ಯಾವುದೇ ಸಕಾರಣಗಳು ಪ್ರಾಧಿಕಾರದ ಮುಂದೆ ಮಂಡಿಸಿಲ್ಲ. 13 ಮತ್ತು 15ನೇ ಎದುರುದಾರರು ಒಂದೇ ಕುಟುಂಬದ ಸದಸ್ಯರಾಗಿರುವುದರಿಂದ 15ನೇ ಎದುರುದಾರ ಪರ ಆಗಿರುವ ಮಂಜೂರಾತಿಯನ್ನು ಊರ್ಜಿತಗೋಳಿಸಿ, 1ನೇ ಎದುರುದಾರಾದ ಹನುಮಪ್ಪ ಪರ ಆಗಿರುವ ಮಂಜೂರಾತಿ ಅನೂರ್ಜಿತಗೊಳಿಸಲು ಪ್ರಾಧಿಕಾರ ನಿರ್ಣಯಿಸಿದೆ ಎಂದು ಉಲ್ಲೇಖಿಸಿದ್ದಾರೆ.
ನಿವೇಶನ ಹಂಚಿಕೆಗೆ ಒತ್ತಾಯ
ಈ ಹಿಂದೆಯೇ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವ್ಯವಸಾಯಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಿದ ನಂತರ, ಸದರಿ ಜಾಗವನ್ನು ಕೃಷಿಗಾಗಿ ಮಂಜೂರು ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಈಗ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವ ಹೂವಳ್ಳಿ ಪ್ರಕಾಶ್ ಅವರು 81 ಎಕರೆ ಬಡಾವಣೆಯನ್ನಾಗಿ ನಿರ್ಮಾಣ ಮಾಡುವ ಮೂಲಕ, ಆ ಭಾಗದಲ್ಲಿ ನಿವೇಶ, ವಸತಿ ರಹಿತರನ್ನು ಗುರುತಿಸಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಂಜೂರಾತಿಯಲ್ಲಿ ಆಗಿರುವ ನೂನ್ಯತೆಗಳೇನು...?
- ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನು ಮಂಜೂರು
- ಭೂ ಮಂಜೂರಾತಿ ಸಮಿತಿಯ ನಿರ್ಣಯ ಉಲ್ಲಂಘನೆ
- ಅರ್ಜಿಗಳಿಗೆ ಒಬ್ಬರೇ ಸಹಿ ಹಾಕಿರುವ ಆರೋಪ
- ಹಲವು ದಶಕಗಳ ನಂತರ ಮಂಜೂರು ಮಾಡಿರುವುದು ಅನುಮಾನಕ್ಕೆ ಎಡೆ
- ರೈತರ ಮುಖವಾಡದಲ್ಲಿರೊ ಗುತ್ತಿಗೆದಾರರು, ಉದ್ಯಮಿಗಳು, ಬಿಲ್ಡರ್ಸ್‌ಗಳ ಪರ ಮಂಜೂರಿಗೆ ಆದೇಶ
ಬೆಂಗಳೂರಿನ ಕೆಲ ಬಿಲ್ಡರ್ಸ್ ಮಾಡಿಕೊಂಡಿರುವ ಕರಾರನ್ನು ರದ್ದುಗೊಳಿಸಬೇಕು. ಸದರಿ ಜಾಗವನ್ನು ಬಡಾವಣೆಯನ್ನಾಗಿ ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು.
- ಹೂವಹಳ್ಳಿ ಪ್ರಕಾಶ್ ಜಿಲ್ಲಾಧ್ಯಕ್ಷ, ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ, ಕೋಲಾರ
ಇತ್ತೀಚಿಗೆ ಜಿಲ್ಲೆಯ ಮೇಲೆ ಭೂಗಳ್ಳರ ಕಣ್ಣು ಬಿದಿದ್ದು, ಅದರಲ್ಲೂ ಸರ್ಕಾರಿ ಜಮೀನುಗಳನ್ನು ಹುಡುಕಾಡಿ ಬಟ್ಟಾ ಮಾಡುವ ಪ್ರಯತ್ನಗಳು ಅವ್ಯಾಹತವಾಗಿವೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು.
- ಎಂ.ಕೆ.ರಾಘವೇಂದ್ರ ಜಿಲ್ಲಾಧ್ಯಕ್ಷ ಕರವೇ, ಕೋಲಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net