ಸರ್ಕಾರಿ ಗ್ರಾಮಠಾಣಾ ಜಾಗ ಗುಳುಂ!

ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ
ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗ
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಗ್ರಾಮಠಾಣಾ ಜಾಗಗಳು ಈ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು, ಅಧಿಕಾರಿಗಳ ಕೃಪಕಟಾಕ್ಷದಿಂದ ಅವರವರ ಸಂಬಂಧಿಕರ ಮಡಿಲು ಸೇರಿವೆ. ಇನ್ನೂ ಕೆಲವು ಕಡೆಂ ಖಾಸಗಿ ವ್ಯಕ್ತಿಗಳ ಪಾಲಾಗಿವೆ.
ಹೌದು, ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತ ಮಂಡಳಿಯ ಅಧಿಕಾರ ಅವಧಿ ಮುಗಿಯುವ ಮುನ್ನ ಸರ್ಕಾರಿ ಜಮೀನು ಹುಡುಕಾಡಿ, ನಕಲಿ ದಾಖಲೆ ಸೃಷ್ಟಿಸಿ ಕುಟುಂಬದ ಸದಸ್ಯರ ಹೆಸರಿಗೆ ಇ-ಸ್ವತ್ತು ಮಾಡಿಸಿಕೊಂಡಿರುವುದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಈ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ನಿವಾಸಿಗಳು ದೂರು ನೀಡಿ, ಸರ್ಕಾರಿ ಜಾಗ ರಕ್ಷಣೆಗೆ ಒತ್ತಾಯಿಸಿದ್ದಾರೆ. ಸರ್ವೇ ನಂಬರ್ ಜಾಗಕ್ಕೆ ಗ್ರಾಮ ಪಂಚಾಯಿತಿಯಿಂದ ಇ-ಸ್ವತ್ತು ವಿತರಿಸಲು ಅವಕಾಶವಿಲ್ಲ. ಆದರೆ, ಕೆಲ ಪಂಚಾಯಿತಿ ಅಧಿಕಾರಿಗಳು, ಕಾರ್ಯದರ್ಶಿಗಳು ಅಧ್ಯಕ್ಷರು, ಸದಸ್ಯರೊಂದಿಗೆ ಶಾಮೀಲಾಗಿ ದಾಖಲೆ ಮಾಡಿಕೊಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ಪ್ರಭಾವದಿಂದ ಕಬ್ಬ
ಕುರುಗಲ್-ವೇಮಗಲ್ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಹೀಗಾಗಿ ವೇಮಗಲ್ ಭಾಗದ ಜಮೀನುಗಳಿಗೆ ಬಂಗಾರದ ಬೆಲೆ ಬಂದಿದ್ದು, ರಾಜಕೀಯ ಮುಖಂಡರ, ಉಳ್ಳವರ ಕಣ್ಣು ಸರ್ಕಾರಿ ಜಮೀನುಗಳ ಮೇಲೆ ಬಿದಿದ್ದೆ. ಹಿಂದೆ ಎಂದೋ ಜಮೀನು ಮಂಜೂರು ಆಗಿರುವಂತೆ ಅರ್ಜಿಗಳನ್ನು ಸೃಷ್ಟಿಸಿ, ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಪ್ರಸ್ತುತವಾಗಿ ಇ-ಸ್ವತ್ತು ನೀಡಲು ತಂತ್ರಾಂಶ ಸಮಸ್ಯೆಯಿದ್ದು, ಆದಾಗ್ಯೂ ದಾಖಲೆ ವಿತರಣೆ ಮಾಡಿದ್ದು ಹೇಗೆ? ಎಂಬ ಅನುಮಾನ ಶುರುವಾಗಿದೆ.
ಕುಳಿತಲ್ಲೇ ದಾಖಲೆ ಸಿದ್ದ
ಗ್ರಾಮ ಠಾಣಾ ಜಾಗ ಯಾವುದೇ ವ್ಯಕ್ತಿಗೆ ಮಂಜೂರು ಮಾಡಬೇಕಾದರೆ ಅನುಭವ ಮತ್ತು ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆಯಾಗಬೇಕು. ಆದರೆ, ಪಿಡಿಒ ಸ್ಥಳ ಪರಿಶೀಲನೆ ಮಾಡದೆ, ಕುಳಿತಕಡೆಯೇ ದಾಖಲೆ ಅಪ್‌ ಲೋಡ್ ಮಾಡಿ ಇದಾಖಲೆ ಸೃಜಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ತಾಪಂ, ಜಿಪಂ ಅಧಿಕಾರಿಗಳಿಗೆ ಗ್ರಾಮಸ್ಥರು ದೂರು ನೀಡಿದ್ದಾರೆ.
ಸರ್ವೇ ನಂಬರ್ ಜಾಗಕ್ಕೆ ಇ-ಸ್ವತ್ತು!
ಕೋಲಾರ ತಾಲೂಕು ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ಬೈರಂಡಹಳ್ಳಿ ಸ.ನಂ.210ರ ಸರ್ಕಾರಿ ತೋಪು ಹಕ್ಕುದಾರಿ ಜಾಗ ಮತ್ತು ಆರ್ದ ನಂ.211ರ ಗೋಮಾಳ ಜಮೀನು ಹಾಗೂ ಕಡಗಟ್ಟೂರು ಗ್ರಾಮದಲ್ಲೂ ಸರ್ಕಾರಿ ಜಮೀನಿನ ದಾಖಲೆ ರಾತ್ರೋರಾತ್ರಿ ಖಾಸಗಿಯವರ ಪಾಲಾಗಿವೆ. ಈ ಹಿಂದಿನ ಪಿಡಿಒ, ಈಗಿನ ಪಿಡಿಒ ಅಧ್ಯಕ್ಷರೊಟ್ಟಿಗೆ ಸೇರಿ ಬೇಕಾದವರಿಗೆ ಇ-ಸ್ವತ್ತು, ಖಾತೆ ಮಾಡಿದ್ದಾರೆ. ಈ ವಿಚಾರ ಸಾರ್ವಜನಿಕರಿಗೆ ಗೊತ್ತಾಗುತ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ಇಸ್ವತ್ತು ತಂತ್ರಾಂಶದಲ್ಲಿ ಖಾತೆ ಮಾಡುವ ಸಲುವಾಗಿ ಅಪ್‌ ಲೋಡ್ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಬೈರಂಡಹಳ್ಳಿಯ ಕೆಲ ನಿವಾಸಿಗಳ ಹೆಸರಿಗೆ ಇ ಸ್ವತ್ತು ಖಾತೆ ಸೃಜನೆಯಾಗಿರುವುದು ಪತ್ತೆಯಾಗಿದೆ. ಆದರೆ, ಈ ಆಸ್ತಿಗಳು ಸರ್ವೇ ನಂಬರ್ ವ್ಯಾಪ್ತಿಗೆ ಬರುತ್ತವೆ.
ಸ್ಪಷ್ಟಿಕರಣ ತೆಗೆದುಕೊಂಡಿಲ್ಲ
ಯಾರೇ ಇ-ಖಾತೆ ಪಡೆಯಬೇಕಾದರೆ ಅರ್ಜಿದಾರರು ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು. ಪಿಡಿಒ ಸರ್ವೇ ಇಲಾಖೆಗೆ ಪತ್ರ ಬರೆದು ಇದು ಗ್ರಾಮ ಠಾಣೆ ಅಥವಾ ಸರ್ವೇ ನಂಬರ್ಗೆ ಸೇರಿದೆ ಎಂದು ಕೋರುತ್ತಾರೆ. ಆದರೆ ಈ ಸ್ವತ್ತುಗಳ ಸಂಬಂಧ ಸ್ಪಷ್ಟನೆ ಪಡೆದುಕೊಂಡಿಲ್ಲ. ಆದರೆ, ಈಗ ದಾಖಲೆ ಮಾಡಿರುವ ಜಾಗ ಸಂಬಂಧಕ್ಕೆ ಅಧಿಕಾರಿಗಳು ಅನಾಮಧೇಯ ಗ್ರಾಮ ಠಾಣೆಯ ನಕ್ಷೆ ನಮೂದಿಸಿ ಖಾತೆ ಮಾಡುಕೊಟ್ಟಿದ್ದಾರೆ. ಈಗಿರುವ ಪಿಡಿಒ ಬಂದನಂತರ ನೂರಾರು ಪ್ರಕರಣಗಳನ್ನು ಮಾಡಿಕೊಟ್ಟಿದ್ದಾರೆ. ಈಗ ಇ ಖಾತೆ ಮಾಡಿಕೊಂಡಿರುವ ವ್ಯಕ್ತಿಗಳು ಬೇರೆಯವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಇತ್ತೀಚೆಗೆ ಬೈರಂಡಹಳ್ಳಿಯ ಖಾಸಗಿ ವ್ಯಕ್ತಿಗಳು ಹಲವು ವರ್ಷಗಳಿಂದ ಖಾಲಿ ಇದ್ದ ನಿವೇಶನದಲ್ಲಿ ಕಲ್ಲು ಹಾಕಿ ಕೆಲಸ ಮಾಡಲು ಮುಂದಾಗಿದ್ದಾರೆ. ಆಗ ಸರ್ಕಾರಿ ಜಾಗದಲ್ಲಿ ಇವರು ಕಾಮಗಾರಿ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಆಗ ಮಾಲೀಕರು ತಮ್ಮಲ್ಲಿರುವ ದಾಖಲೆ ತೋರಿಸಿದಾಗ ಗ್ರಾಮದವರೇ ಹೌಹಾರಿದ್ದಾರೆ. ತಕ್ಷಣ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಜಾಗ ಉಳಿಸಲು ಒತ್ತಾಯಿಸಿದ್ದಾರೆ.
ಹಕ್ಕು ಪತ್ರ ವಿತರಣೆ ಆಗಿದ್ದರೆ ಇಸ್ವತ್ತು ನೀಡಬೇಕು. ಸಮರ್ಪಕವಾಗಿ ದಾಖಲೆಗಳು ಇಲ್ಲದಿದ್ದರೆ ಇಸ್ವತ್ತು ನೀಡಲು ಬರುವುದಿಲ್ಲ. ಅಕ್ರಮ ಆಗಿರುವ ಬಗ್ಗೆ ದೂರು ನೀಡಿದರೆ ಕ್ರಮವಹಿಸಲಾಗುವುದು.
- ಮಂಜುನಾಥ್ ಇಒ, ತಾಪಂ
ಚನ್ನಸಂದ್ರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿನ ಸರ್ಕಾರಿ ಜಮೀನು, ಗ್ರಾಮ ಠಾಣಾ ಜಾಗಗಳ ಸಂಬಂಧ ಕೆಲವರು ರಾಜಕೀಯ ಪ್ರಭಾವ ಬೀರಿ ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ. ಇದರ ಇ-ಸ್ವತ್ತು ರದ್ದುಪಡಿಸಿ ಸರ್ಕಾರಕ್ಕೆ ವಾಪಸ್ ಪಡೆಯಬೇಕು.
- ದೂರುದಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net