ಮನೆ ಮನೆಗೆ ಹರಿಯದ ಗಂಗೆ!

ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿರುವುದು.
ಕೋಲಾರ ತಾಲೂಕಿನ ಕಾಕಿನತ್ತ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿರುವುದು.
Published on
ಕಿರುವಾರ ಎಸ್.ಸುದರ್ಶನ್ ಕೋಲಾರ
ಮನೆಮನೆಗೆ ಗಂಗೆ ಯೋಜನೆಯಡಿ ಕೈಗೊಂಡಿರುವ ಜಲಜೀವನ್ ಮಿಷನ್ (ಜೆಜೆಎಂ) ಪ್ರಗತಿ ಜಿಲ್ಲೆಯಲ್ಲಿ ಶೇ.51.24 ರಷ್ಮಾಟು ತ್ರ ಸಾಧನೆಯಾಗಿದ್ದು, ಬಹುತೇಕ ಗ್ರಾಮಗಳಲ್ಲಿ ಕೆಲಸ ಅಪೂರ್ಣವಾಗಿದೆ.
ಜಿಲ್ಲೆಯಲ್ಲಿ ಒಟ್ಟು 1,814 ಕಾಮಗಾರಿಗಳಿಗೆ ಟೆಂಡ‌ರ್ ಕರೆದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆ ಪೈಕಿ 929 ಕಾಮಗಾರಿ ಪೂರ್ಣಗೊಂಡಿದೆ. 800 ಕಾಮಗಾರಿ ಪ್ರಗತಿಯಲ್ಲಿದ್ದು, 84 ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ, ಇನ್ನು ಪೂರ್ಣಗೊಂಡಿರುವ ಮನೆಗಳಿಗೆ ನಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ಜೆಜೆಎಂ ಯೋಜನೆಯಡಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳಲ್ಲಿನ ಗುಣಮಟ್ಟ ಕಳಪೆ, ವಿಳಂಬ, ಕ್ರಿಯಾ ಯೋಜನೆಯಂತೆ ಕೆಲಸ ನಡೆಯುತ್ತಿಲ್ಲ, ಪೈಪ್ ಲೈನ್‌ಗಾಗಿ ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ ಅಗೆಯಲಾಗಿದೆ. ಕೆಲಸ ಪ್ರಾರಂಭಿಸಿ ವರ್ಷಗಳೆ ಕಳೆದರೂ ಅಪೂರ್ಣಗೊಂಡಿರುವುದು... ಹೀಗೆ ಹಲವು ಲೋಪ ಕಂಡು ಬಂದಿವೆ. ಗುತ್ತಿಗೆದಾರರು ಸಕಾಲದಲ್ಲಿ ಕಾಮಗಾರಿ ಮುಗಿಸದೆ ಇರುವುದರಿಂದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇನ್ನು ಕೆಲ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ನಡೆಯುತ್ತಿದ್ದು, ಕೊಳವೆ ಬಾವಿಯಿಂದ ನಲ್ಲಿ ಮೂಲಕ ಮನೆಗಳಿಗೆ ನೀರು ಹರಿಸಲಾಗುತ್ತಿದೆ. ಕಾಮಗಾರಿ ಕಳಪೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಮನೆಗಳಿಗೆ ನೀರು ಹರಿಯದಿದ್ದರೂಗುತ್ತಿಗೆದಾರರ ಪರ ನಿಂತು ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಭೆಗಳಲ್ಲೂ ಜೆಜೆಎಂ ಸದ್ದು
ಕೆಪಿಡಿ, ದಿಶಾ ಸಭೆಗಳಲ್ಲೂ ಜೆಜೆಎಂ ಕಾಮಗಾರಿಗಳ ಕುರಿತು ಜನಪ್ರತಿನಿಧಿಗಳ ನಡುವೆ ವ್ಯಾಪಕ ಚರ್ಚೆಯಾಗಿತ್ತು. ಕೆಲಸಗಳ ಮೇಲುಸ್ತುವಾರಿ ವಹಿಸಿಕೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು. ಯೋಜನೆಯ ಕಾಮಗಾರಿ ವಿಳಂಬದಿಂದ ಜನರಿಗೆ ತೊಂದರೆಯಾಗುತ್ತಿದೆ. ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ಏನು ಮಾಡ್ತಿದೀರಾ? ಹಲವು ಕಡೆ ಕೆಲ ಗುತ್ತಿಗೆದಾರರು ಹಾಗೇ ಬಿಟ್ಟು ಹೋಗಿರುವ ಬಗ್ಗೆಯೂ ಶಾಸಕರು ಆಕ್ರೋಶವ್ಯಕ್ತಪಡಿಸಿದ್ದರು.
ಕಾಮಗಾರಿಗೆ ವೇಗ
ಜಿಲ್ಲೆಯಲ್ಲಿ ನೀರಿನ ಕಾಮಗಾರಿಗಳು ಕುಂಟುತ್ತಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್‌ ಪಿ.ಬಾಗೇವಾಡಿ ಅವರು, ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಕುರಿತು ಪರಿಶೀಲಿಸಿದರು. ಆ ವೇಳೆ ಗ್ರಾಮಸ್ಥರಿಂದಲೂ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಕಾಮಗಾರಿ ಕಳಪೆಯಾದ ರೂಪ ಕಾಣಿಸಿತು. ಇದರಿಂದ ಗರಂ ಆದ ಸಿಇಒ, ಅಧಿಕಾರಿಗಳು ಗುತ್ತಿಗೆದಾರರ ಬೆನ್ನತ್ತಿ ರಸ್ತೆ ಸರಿಪಡಿಸಬೇಕು. ಹೀಗೆ ನಿರಂತರವಾಗಿ ಭೇಟಿ ಮಾಡಿ ಸಿಇಒ ಅವರು, ಕಾಮಗಾರಿಗೆ ವೇಗ ನೀಡಿ, ಲೋಪದೋಷಗಳು ಕಂಡು ಬರದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉಪ ಗುತ್ತಿಗೆಯಿಂದ ವಿಳಂಬ
ಜಿಲ್ಲೆಯಲ್ಲಿನ ಕಾಮಗಾರಿಗಳನ್ನು ಆಂಧ್ರ. ಉತ್ತರ ಕರ್ನಾಟಕ ಭಾಗದ ಗುತ್ತಿಗೆದಾರರು ಟೆಂಡ‌ರ್ ಪಡೆದುಕೊಂಡಿದ್ದಾರೆ. ಆ ಪೈಕಿ ಒಬ್ಬರೇ 10ರಿಂದ 20 ಹಳ್ಳಿಗಳ ಕೆಲಸದ ಟೆಂಡ‌ರ್ ಪಡೆದುಕೊಂಡಿದ್ದಾರೆ. ಇನ್ನು ಕೆಲವರು ಉಪ ಗುತ್ತಿಗೆ ನೀಡಿರುವುದು ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಗುತ್ತಿಗೆದಾರ ಕೆಲಸ ಶುರು ಮಾಡಿ ಹೋಗಿ ಒಂದು ವರ್ಷವೇ ಕಳೆದಿದೆ. ಈ ಬಗ್ಗೆ ಯಾರನ್ನು ಕೇಳಿದರೂ ಗುತ್ತಿಗೆದಾರನತ್ತ ಬೆರಳು ತೋರಿಸುತ್ತಾರೆ. ಜನ ಎದುರಿಸುತ್ತಿರುವ ಸಮಸ್ಯೆ ಯಾರಿಗೂ ಕಾಣದಂತಾಗಿದೆ.
- ಮಂಜುನಾಥ್, ಕಾಕಿನತ್ತ ಗ್ರಾಮಸ್ಥ.
ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೆಲಸಕ್ಕೆ ವೇಗ ನೀಡಲಾಗಿದೆ. ಜತೆಗೆ ಗುಣಮಟ್ಟಕ್ಕೆ ಒತ್ತು ನೀಡಿದ್ದು ಕಾಲಮಿತಿಯೊಳಗೆ ಕೆಲಸ ಮುಗಿಸಲು ಸೂಚಿಸಲಾಗುತ್ತಿದೆ.
- ರಘು, ಕಾರ್ಯಪಾಲಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net