ಶಿವನ ಸ್ವರೂಪವೇ ಮಾರ್ಕಂಡೇಶ್ವರನ ಬೆಟ್ಟ

ಮಾರ್ಕಂಡೇಶ್ವರ ಬೆಟ್ಟ
ಮಾರ್ಕಂಡೇಶ್ವರ ಬೆಟ್ಟ
Published on
ಕಿರುವಾರ ಎಸ್ .ಸುದರ್ಶನ್ ಕೋಲಾರ
ಸಾಕ್ಷಾತ್ ಶಿವನೇ ನೆಲೆಗೊಂಡಿರುವ ಪುರಾಣ ಪ್ರಸಿದ್ಧ ಸ್ಥಳ ತಾಲೂಕಿನ ವಕ್ಕಲೇರಿ ಸಮೀಪದ ಮಾರ್ಕಂಡೇಶ್ವರನ ಬೆಟ್ಟ. ಯಮ ಪಾಶದಿಂದ ಪಾರಾಗಲು ಶಿವನನ್ನು ಪೂಜಿಸಿದ ಪವಿತ್ರ ಸ್ಥಳವೆಂದೇ ಖ್ಯಾತವಾಗಿದೆ. ಸುತ್ತಲೂ ಅರಣ್ಯ ಪ್ರದೇಶ, ಬೆಟ್ಟದ ಮೇಲೆ ನೆಲೆಸಿರುವ ಮಾರ್ಕಂಡೇಶ್ವರಸ್ವಾಮಿಯ ಬೀಡಾದ ವಕ್ಕಲೇರಿ ಬೆಟ್ಟದ ಸೋಬಗು ಎಲ್ಲರನ್ನು ಆಶ್ಚರ್ಯಗೊಳಿಸುಂತಿದೆ. 12ನೇ ಶತಮಾನದ ಆದಿಯಲ್ಲಿ ಪ್ರಾರಂಭವಾದ ದೇವಾಲಯ ನಿರ್ಮಾಣ ಕಾರ್ಯ 16ನೇ ಶತಮಾನದವರೆಗೆ ನಡೆಯಿತೆಂಬ ಮಾತಿದೆ. ಈ ಆಲಯವನ್ನು ಚೋಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ಜೀರ್ಣೋದ್ದಾರ ಮಾಡಲಾಯಿತು ಎಂಬುದು ಹಿರಿಯರ ಮಾತು.
ಪುರಾಣಗಳ ಪ್ರಕಾರ ಮಾರ್ಕಂಡೇಯ ಯಮನ ಪಾಶದಿಂದ ತಪ್ಪಿಸಿಕೊಳ್ಳ ಇಲ್ಲಿನ ಶಿವಲಿಂಗ ಪೂಜಿಸುತ್ತಿದ್ದಾಗ ಯಮ ಪಾಶ ಬೀಸುತ್ತಾನೆ. ಆ ಪಾಶವು ಮಾರ್ಕಂಡೇಯನ ಜತೆಗೆ ಶಿವಲಿಂಗಕ್ಕೂ ಬೀಳುತ್ತದೆ. ಯಮ ಪಾಶವನ್ನು ಎಳೆದಾಗ ಭಗವಂತ ಪ್ರತ್ಯಕ್ಷನಾಗಿ ಮಾರ್ಕಂಡೇಯನನ್ನು ಅನುಗ್ರಹಿಸಿದ ಸ್ಥಳ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಶಿವಲಿಂಗದ ಮೇಲೆ ಮೂರು ಬೆರಳಿನ ಗುರುತು ಮತ್ತು ಚಾವಟಿಯ ಗುರುತು ಇರುವುದನ್ನು ಈಗಲೂ ಕಾಣಬಹುದು.
ಈ ಜಾಗದಲ್ಲಿರುವ ಬಾವಿ ಎಂತಹ ಪರಿಸ್ಥಿತಿಯಲ್ಲೂ ಬತ್ತುವುದಿಲ್ಲ. ಬಿಲ್ವ ವೃಕ್ಷ, ಯೋಗ ನಂದಿ, ಭೋಗನಂದಿ ಮತ್ತು ಧ್ವಜ ನಂದಿ ಅತ್ಯಂತ ಶಕ್ತಿ ಹೊಂದಿದೆ. ಭಗವಂತನೇ ದರ್ಶನ ನೀಡಿದ ಮಾರ್ಕಂಡೇಶ್ವರನ ಬೆಟ್ಟದ ದರ್ಶನ ಮಾಡಲು, ಪ್ರವಾಸಿಗರನ್ನು ಸೆಳೆಯಲು ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮೂಲಸೌಲಭ್ಯ ಕಲ್ಪಿಸಬೇಕಿದೆ.
ಬೆಟ್ಟದ ಮೇಲಿನ ದೇವರುಗಳು
ಮಹಾದ್ವಾರ, ವಿಶಾಲವಾದ ಪ್ರಾಕಾರ, ಮೇಲಿರುವ ದೇವರುಗಳು ಮಾರ್ಕಂಡೇಶ್ವರ ಸ್ವಾಮಿಯವರ ಸುತ್ತಲೂ ವೀರಭದ್ರಸ್ವಾಮಿ,ಬಸವಮಂಟಪ, ಕಲ್ಯಾಣ ಮಂಟಪ, ಸುಖನಾಸಿ, ನವರಂಗ, ಯಾಗ ಮಂಟಪ, ಗರ್ಭಾಂಕಣವಿದೆ. ವಿಶಾಲ ಪ್ರಾಕಾರದಲ್ಲಿ ಸಪ್ತಮಾತೃಕೆಯರು, ವಿಶ್ವೇಶ್ವರಸ್ವಾಮಿ, ಸುಬ್ರಮಣ್ಯಸ್ವಾಮಿ, ಪಾರ್ವತಾದೇವಿ, ಚಂಡಿಕೇಶ್ವರಸ್ವಾಮಿ, ವೆಂಕಟರಮಣ ಸ್ವಾಮಿ, ಕಾಲಭೈರವಸ್ವಾಮಿ ಗುಡಿಗಳಿವೆ. ಮಹಾ ಶಿವರಾತ್ರಿ ದಿನ ಎರಡು ದಿನ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಮಾರ್ಕಂಡೇಶ್ವರ ಸ್ವಾಮಿ ಬ್ರಹರಥೋತ್ಸವ ಹಾಗೂ ಪದ್ಮಶಾಲಿ ಸಮಾಜದವರಿಂದ ಧ್ವಜಾರೋಹಣ, ಪರಮೇಶ್ವರನಿಗೆ ನಡೆಯುವ ಹತ್ತು ತಲೆ ಇಪ್ಪತ್ತು ಕೈಗಳ ರಾವಣ ವಾಹನೋತ್ಸವ ವಕ್ಕಲೇರಿ ಗ್ರಾಮದಲ್ಲಿ ನೆರವೇರುತ್ತದೆ.
ತಲುಪುವುದು ಹೇಗೆ?
ಕೋಲಾರದಿಂದ 17 ಕಿಮಿ ದೂರದಲ್ಲಿದ್ದು, ಮೊದಲು ವಕ್ಕಲೇರಿಗೆ ಹೋಗಿ, ಅಲ್ಲಿಂದ ಬೆಟ್ಟಕ್ಕೆ ಹೋಗಬೇಕು. ಬೆಟ್ಟದ ಮೇಲಕ್ಕೆ ದ್ವಿಚಕ್ರ ವಾಹನ, ಕಾರಿನ ಮೂಲಕವೂ ತಲುಪಬಹುದು. ತಪ್ಪಲಿನಿಂದ ಕಾಲು ದಾರಿಯು ಇದೆ.
ಮುಖ್ಯಾಂಶಗಳು
- ಐತಿಹಾಸಿಕ ನೆಲೆಬೀಡಲ್ಲಿ ಶ್ರೀಮಂತ ಪ್ರಕೃತಿ ಸೊಬಗು
- ಎಂತಹ ಪರಿಸ್ಥಿತಿಯಲ್ಲೂ ಬತ್ತದ ನೀರಿನ ಬಾವಿ
- ಕೈ ಬೀಸಿ ಕರೆಯುವ ರಮಣೀಯ ಸ್ಥಳ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net