ಕಮರಿದ ವಿಠಲಕುಂಟೆ ಕಲ್ಯಾಣಿ

ಮುಳಬಾಗಿಲಿನ ಅಗ್ರಹಾರದ ವಿಠಲ ಕುಂಟೆ.
ಮುಳಬಾಗಿಲಿನ ಅಗ್ರಹಾರದ ವಿಠಲ ಕುಂಟೆ.
Published on
ಎ.ಅಪ್ಪಾಜಿಗೌಡ ಮುಳಬಾಗಿಲು
ಅಂತರ್ಜಲ ಪ್ರಮಾಣ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆರೆ-ಕುಂಟೆಗಳು, ನದಿ, ನಾಲೆಗಳ ಜತೆಗೆ ಪುಷ್ಕರಣಿಗಳು (ಕಲ್ಯಾಣಿ) ಮುಂಚೂಣಿಯಲ್ಲಿದ್ದು, ಇಂತಹ ಜಲ ಮೂಲಗಳನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಿಲ್ಲಾಡಳಿತ ಮತ್ತು ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ನೀರಿನ ಮೂಲಗಳನ್ನು ಸಂರಕ್ಷಣೆಗೆ ಮುಂದಾಗಬೇಕಿದೆ.
ನಗರದ ಬಹುತೇಕ ನೀರಿನ ಸಮಸ್ಯೆ ನೀಗಿಸುತ್ತಿರುವುದೇ ಇಲ್ಲಿನ ಕೆರೆಗಳು ಮತ್ತು ಕಲ್ಯಾಣಿಗಳು, ಆದರೆ ಇಂತಹ ಜಲಮೂಲದ ಕಣ್ಣಾದ ನಗರದ ಬಜಾ‌ರ್ ರಸ್ತೆಯ ಶ್ರೀಪಾದರಾಜ ಮಠದ ಮುಂಭಾಗವಿರುವ ವಿಠಲಕುಂಟೆ ಕಲ್ಯಾಣಿ ಕಸ ಕಡ್ಡಿ ತುಂಬಿ, ಪಾಚಿ ಕಟ್ಟಿದ ಪರಿಣಾಮ ದುರ್ನಾತ ಬೀರುತ್ತಿದೆ. ಕಲ್ಯಾಣಿಯ ನೀರು ಹೊರಹೋಗುವ ಕಾಲುವೆಯಂತೂ ಕಸ, ಕಡ್ಡಿಯಿಂದ ತುಂಬಿದ್ದು, ತಿಪ್ಪೆಯಾಗಿದೆ. ರೋಗ ರುಜಿನಗಳ ಉಗಮ ಸ್ಥಾನವಾಗಿ ಮಾರ್ಪಾಡಾಗಿದೆ. ಈ ಬಗ್ಗೆ ನಗರಸಭೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.
ಹಳೇ ಮುಳಬಾಗಿಲಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡದಂತೆ ಈ ಭಾಗದಲ್ಲಿರುವ ಕೆರೆ-ಕುಂಟೆಗಳು, ಕಲ್ಯಾಣಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಇವುಗಳನ್ನು ಈ ಹಿಂದೆ ಪರಿಶುದ್ಧವಾಗಿಟ್ಟುಕೊಳ್ಳಲಾ ಗುತ್ತಿತ್ತು. ಆದರೆ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಜವಾಬ್ದಾರಿ ತೆಗೆದುಕೊಂಡ ಮೇಲೆ ನಿರ್ಲಕ್ಷಿಸಿದ ಕಾರಣ ಈ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಕುಡಿಯುವ ನೀರಿಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ, ತಾಲೂಕು ಆಡಳಿತ ಬೇಸಿಗೆಯಲ್ಲಿ ವಹಿಸುವ ಕಾಳಜಿ ಸ್ವಲ್ಪ ಮುಂದಾಲೋಚನೆ ಮಾಡಿ ಕೆರೆ-ಕುಂಟೆಗಳು, ಕಲ್ಯಾಣಿಗಳ ಪ್ರಗತಿ ಮಾಡಿ ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಅಂತರ್ಜಲಮಟ್ಟ ಹೆಚ್ಚಿಸಬೇಕು. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವುದನ್ನು ತಡೆಯಲು ಜಲಮೂಲಗಳ ಸಂರಕ್ಷಣೆ ಅವಶ್ಯ.
ತೆರೆದ ಬಾವಿಗೂ ಕುತ್ತು
ಕಲ್ಯಾಣಿಗಳ ಪಕ್ಕದಲ್ಲೇ ಇದ್ದ ತೆರದ ಬಾವಿಗಳಿಂದ ಈ ಹಿಂದೆ ಮುಳಬಾಗಿಲು ನಗರದ ಹೋಟೆಲ್ ಗಳಿಗೆ ಅಡುಗೆ ಮತ್ತು ಕುಡಿಯುವ ನೀರಿನ ಪೂರೈಕೆಗೆ ಪ್ರಮುಖ ಮೂಲವಾಗಿದ್ದವು. ಈಗಲೂ ಇಲ್ಲಿಂದ ಎತ್ತಿನ ಬಂಡಿಯಲ್ಲಿ ನೀರು ಸರಬರಾಜು ಆಗುತ್ತಿರುವುದು ವಿಶೇಷ, ಆದರೆ, ಕಲ್ಯಾಣಿಯಲ್ಲಿ ಗಲೀಜು ಮತ್ತು ಕಸವನ್ನು ನೋಡಿ ನೀರು ಕೊಂಡೊಯ್ಯುವರ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಬಾವಿಗೂ ಕಂಡಕ ಎಮರಾದಂತಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಫ‌ಲಕುಂಟೆ ಪುಷ್ಕರಣೆ ಸ್ವಚ್ಛತೆಯ ಬಗ್ಗೆ ಗಮನಹರಿಸಲಾಗುವುದು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು.
- ಆಂಜನೇಯಲು, ಪೌರಾಯುಕ್ತ, ನಗರಸಭೆ, ಮುಳಬಾಗಿಲು
ವಿಠಲಕುಂಟೆಯಲ್ಲಿ ಕಸಕಡ್ಡಿ ತುಂಬಿ ತಿಪ್ಪೆಯಾಗಿದೆ. ಪಾಚಿ ಕಟ್ಟಿ ನೀರು ದುರ್ವಾಸನೆ ಬೀರುತ್ತಿದೆ. ಆದ್ದರಿಂದ ಈ ಬಗ್ಗೆ ನಗರಸಭೆ ಮತ್ತು ತಾಲೂಕ ಆಡಳಿತ ತಕ್ಷಣ ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ಎಚ್.ಎಸ್.ರವಿ, ಸ್ಥಳೀಯ ನಿವಾಸಿ, ಅಗ್ರಹಾರ, ಮುಳಬಾಗಿಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net