ಹುಣಸೆ ಹೂವು ಚಿಗುರಿನ ರಂಗು

ಹುಣಸೆ ಮರ ಹೂ ಬಿಟ್ಟಿರುವುದು
ಹುಣಸೆ ಮರ ಹೂ ಬಿಟ್ಟಿರುವುದು
Published on
ವಿ.ಶಿವಾರೆಡ್ಡಿ ಬಂಗಾರಪೇಟೆ
ಬೇಸಿಗೆಯಲ್ಲಿ ಹುಣಸೆ ಮರಗಳು ಕಳೆಕಟ್ಟಿದ್ದು, ಹಸಿರು ಎಲೆಗಳ ನಡುವೆ ಇಣುಕುತ್ತಿರುವ ಕೆಂಪು ಮಿಶ್ರಿತ ಮೃದು ಚಿಗುರು ಹಾಗೂ ಮಿನುಗುವ ಸಣ್ಣ ಹೂಗಳು ಪ್ರಕೃತಿಯ ಕಲಾತ್ಮಕತೆಗೆ ಸಾಕ್ಷಿಯಾಗಿವೆ.
ಈ ಬಾರಿ ಮರಗಳಲ್ಲಿ ಹೂಗಳ ಸಮೃದ್ಧಿ ಕಂಡುಬರುತ್ತಿದ್ದು, ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿದೆ. ಹುಣಸೆಮರ ಕೇವಲ ಮರವಲ್ಲ, ಅದು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ. ಹೊಲದ ಬದಿ, ರಸ್ತೆ ಅಂಚು ಹಾಗೂ ಗ್ರಾಮದ ಬಯಲುಗಳಲ್ಲಿ ಶತಮಾನಗಳಿಂದ ನೆರಳು ನೀಡುತ್ತಿರುವ ಈ ಮರಗಳು ನಮ್ಮ ನೆಲದ ಸಾಂಸ್ಕೃತಿಕ ಸಂಕೇತಗಳಾಗಿವೆ.
ವರ್ಷಪೂರ್ತಿ ಜೀವಂತಿಕೆಯನ್ನು ಉಳಿಸಿಕೊಳ್ಳುವ ಈ ಮರಗಳು ಹಕ್ಕಿಪಕ್ಷಿಗಳಿಗೆ ಆಶ್ರಯ ತಾಣವೂ ಹೌದು. ಹೂಗಳ ಸಮೃದ್ಧಿ, ಜೇನುಗಳ ಸದ್ದು: ಮರದಲ್ಲಿ ಹೂವು ಮತ್ತು ಚಿಗುರು ಹೆಚ್ಚಾಗಿದ್ದರೆ ಆ ವರ್ಷ ಹುಣಸೆ ಫಸಲು ಸಮೃದ್ಧವಾಗಿರುತ್ತದೆ ಎಂಬುದು ಹಿರಿಯ ರೈತರ ಅನುಭವದ ಮಾತು. ಸದ್ಯ ಹುಣಸೆ ಹೂವಿನ ಪರಿಮಳಕ್ಕೆ ಜೇನುನೊಣಗಳು ಮುತ್ತಿಕೊಳ್ಳುತ್ತಿದ್ದು, ಪ್ರಕೃತಿಯ ಈ ಚಕ್ರವು ಉತ್ತಮ ಉತ್ಪಾದನೆಯ ಮುನ್ಸೂಚನೆ ನೀಡುತ್ತಿದೆ. ಅಡುಗೆಮನೆಯ ಅನಿವಾರ್ಯ ಪದಾರ್ಥವಾದ ಹುಣಸೆಹಣ್ಣು, ವಾಣಿಜಿಕವಾಗಿಯೂ ರೈತರಿಗೆ ಆಸರೆಯಾಗಲಿದೆ.
ಬಹುಮುಖಿ ಉಪಯೋಗ
ಹುಣಸೆಹಣ್ಣು ಅಡುಗೆಮನೆಯಲ್ಲಿ ಅನಿವಾರ್ಯವಾದ ಪದಾರ್ಥ. ಸಾರು, ಚಟ್ಟಿ, ಪಲ್ಯ ಸೇರಿ ಅನೇಕ ತಿನಿಸುಗಳಿಗೆ ರುಚಿ ನೀಡುತ್ತದೆ. ಹುಣಸೆ ಎಲೆ ಮತ್ತು ಚಿಗುರುಗಳು ಔಷಧೀಯ ಗುಣ ಹೊಂದಿವೆ. ಆದರೆ, ಆಧುನಿಕತೆಯ ಅಬ್ಬರದಲ್ಲಿ ಇಂತಹ ಪಾರಂಪರಿಕ ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ವಿಷಯ. ಒಂದು ಹುಣಸೇಮರ ಪೂರ್ಣ ಪ್ರಮಾಣದಲ್ಲಿ ಬೆಳೆಯಲು ದಶಕಗಳೇ ಬೇಕು, ಆದರೆ ಅದು ಬೆಳೆದರೆ ಮುಂದಿನ ಹಲವು ಪೀಳಿಗೆಗಳಿಗೆ ಪ್ರಯೋಜನಕಾರಿ. ಒಟ್ಟಿನಲ್ಲಿ ಹುಣಸೆಮರದ ನೆರಳು, ಹಣ್ಣು, ಹೂವು, ಚಿಗುರು ಎಲ್ಲ ಸೇರಿ ಮನುಷ್ಯ ಮತ್ತು ಪ್ರಕೃತಿಯ ಆತ್ಮೀಯ ಸಂಬಂಧ ಸಾರುತ್ತವೆ. ಈ ಬಾರಿ ಮರಗಳಲ್ಲಿ ಕಾಣುತ್ತಿರುವ ಹೂಗಳ ಸಮೃದ್ಧಿ ಉತ್ತಮ ಫಲದ ನಿರೀಕ್ಷೆ ಮೂಡಿಸಿರುವುದರ ಜತೆಗೆ, ಪ್ರಕೃತಿಯ ಮೇಲೆ ಮತ್ತಷ್ಟು ಪ್ರೀತಿ ಬೆಳೆಸುವಂತಾಗಿದೆ.
ಪ್ರತಿ ಕೆಜಿಗೆ 27 ರೂ.
2025ರಲ್ಲಿ ಹುಣಸೇಹಣ್ಣಿನ ಮಾರುಕಟ್ಟೆ ಬೆಲೆ ಸರಾಸರಿ ಕೆಜಿಗೆ 40 ರೂ. ಮಾರಾಟ ಮಾಡಲಾಗುತ್ತಿತ್ತು. ಈ ಪರ್ವ ಬಂಗಾರಪೇಟೆ ಎಪಿಎಂಸಿಯಲ್ಲಿ ಪ್ರತಿ ಕೆಜಿಗೆ 27 ರೂ. (ಕ್ವಿಂಟಲ್‌ಗೆ 2700 ರೂ.) ಆಗಿದೆ. ಕನಿಷ್ಠ 23 ರೂ. ಮತ್ತು ಗರಿಷ್ಠ 29 ರೂ. ಪ್ರತಿ ಕೆಜಿ ಮಟ್ಟದಲ್ಲೂ ವ್ಯವಹಾರ ನಡೆದಿದೆ.
ಈ ವರ್ಷ ಹುಣಸೆ ಮರಗಳಲ್ಲಿ ತುಂಬ ಹೂವು ಮತ್ತು ಚಿಗುರು ಕಾಣಿಸುತ್ತಿದೆ. ಇದರಿಂದ ಹಣ್ಣಿನ ಇಳುವರಿ ಚೆನ್ನಾಗಿರೋ ಲಕ್ಷಣ ಇದೆ. ಕಳೆದ ಎರಡು ವರ್ಷ ಸರಿಯಾಗಿ ಹೂ ಬಿಟ್ಟಿರಲಿಲ್ಲ. ಈ ಬಾರಿ ಉತ್ತಮ ಹುಣಸೆಕಾಯಿ ನಿರೀಕ್ಷಿಸಬಹುದಾಗಿದೆ. ಮಾರುಕಟ್ಟೆಯಲ್ಲೂ ಉತ್ತಮ ಗುಣಮಟ್ಟದ ಹುಣಸೇ ಸಿಗುವ ನಿರೀಕ್ಷೆ ಇದೆ. ರೈತರು ಮತ್ತು ವ್ಯಾಪಾರಿಗಳಿಗೆ ಇದು ಖುಷಿಯ ಸಂಗತಿಯಾಗಿದೆ.
- ಚಿನ್ನಪ್ಪ, ರೈತ ಕಣಿಂಬೆಲೆ, ಬಂಗಾರಪೇಟೆ
ಬಂಗಾರಪೇಟೆ ತಾಲೂಕಿನಲ್ಲಿ ಸುಮಾರು 10.05 ಹೆಕ್ಟೇರ್‌ನಲ್ಲಿ ರೈತರು ಅವರ ಸರ್ವೇ ನಂ.ಗಳಲ್ಲಿ ಹುಣಸೆ ಮರಗಳನ್ನು ಬೆಳೆಸಿದ್ದಾರೆ. ಎರಡು ಪ್ರತ್ಯೇಕ ಅಂತರದಲ್ಲಿ ಹುಣಸೆ ಬೆಳೆಯುತ್ತಾರೆ. ಒಂದು ಮರಕ್ಕೆ ಮತ್ತೊಂದಾಗಿ 6/6 ಮತ್ತು 10/10 ಅಂತರದಲ್ಲಿ ಹುಣಸೇ ಮರಗಳನ್ನು ಬೆಳೆಯಲಾಗುತ್ತದೆ. ಹೆಚ್ಚಾಗಿ ಕಸಬಾ ವ್ಯಾಪ್ತಿಯಲ್ಲಿ ಬೆಳೆಯಲಾಗಿದೆ.
- ಶಿವಕುಮಾರಿ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಬಂಗಾರಪೇಟೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net