ಇದಕ್ಕೆ ತಾಜಾ ಉದಾಹರಣೆ 75ರ ವಯಸ್ಸಿನಲ್ಲೂ ಕ್ರೀಡೆಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಪದಕ ಗಳಿಸಿರುವ ಅಜ್ಜನ ಸಾಧನೆ. ಕೋಲಾರ ತಾಲೂಕಿನ ಹೊನ್ನೇನಹಳ್ಳಿ ನಿವಾಸಿ ಜಿ.ದೊರೆಸ್ವಾಮಿ ಅವರಿಗೆ 75 ವರ್ಷ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಅವರು ವಿದ್ಯಾಭ್ಯಾಸ ಮುಗಿದ ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಮಧ್ಯೆಯೂ ಕ್ರೀಡೆಯಲ್ಲಿ ಮಾಡಿರುವ ಸಾಧನೆ ಯುವಕರಿಗೆ ಮಾದರಿಯಾಗಿದೆ. ಪ್ರಸ್ತುತ ಲಾಂಗ್ ಜಂಪ್, ತ್ರಿಬಲ್ ಜಂಪ್ ಹಾಗೂ ಓಟದ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ದೊರೆಸ್ವಾಮಿ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಮಲೇಷಿಯಾ, ಥೈಲ್ಯಾಂಡ್, ಶ್ರೀಲಂಕಾ ಸೇರಿ ಹಲವು ದೇಶಗಳಲ್ಲಿ, ಹೊರ ರಾಜ್ಯಗಳಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು, ವಿವಿಧ ಕ್ರೀಡೆಗಳಲ್ಲಿ ಗೆದ್ದು ಸುಮಾರು 150ಕ್ಕೂ ಹೆಚ್ಚು ಪದಕ ತಮ್ಮದಾಗಿಸಿಕೊಂಡಿದ್ದಾರೆ.