ರೇಷ್ಮೆ ಬೆಳೆಗಾರರು ರೀಲರ್‌ಗಳಾಗಲು ಮುಂದಾಗಿ

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗರರ ಅಭಿವೃದ್ಧಿ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ರೈತರ ದಿನಾಚರಣೆಯನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು. ಕೊತ್ತೂರು ಜಿ.ಮಂಜುನಾಥ್, ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಕೆ.ವಿ.ಸತೀಶ್ ಇದ್ದರು.
ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗರರ ಅಭಿವೃದ್ಧಿ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ರೈತರ ದಿನಾಚರಣೆಯನ್ನು ಸಂಸದ ಎಂ.ಮಲ್ಲೇಶ್ ಬಾಬು ಉದ್ಘಾಟಿಸಿದರು. ಕೊತ್ತೂರು ಜಿ.ಮಂಜುನಾಥ್, ಇಂಚರ ಗೋವಿಂದರಾಜು, ಎಂ.ಎಲ್.ಅನಿಲ್ ಕುಮಾರ್, ಕೆ.ವಿ.ಸತೀಶ್ ಇದ್ದರು.
Published on
ಕೋಲಾರ: ರೇಷ್ಮೆ ಕೃಷಿಯನ್ನು ನಂಬಿದವರನ್ನು ಬೆಳೆಯು ಎಂದೂ ಕೈ ಬಿಟ್ಟಿಲ್ಲ. ಬೆಳೆಗಾರರು ರೇಷ್ಮೆ ಉತ್ಪಾದನೆಗೆ ಜತೆಗೆ ರೀಲರ್‌ಗಳಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ಯಮಿಗಳಾಗಲು ಮುಂದಾಗಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ರೇಷ್ಮೆ ಬೆಳೆಗರರ ಅಭಿವೃದ್ಧಿ ಸಂಘದಿಂದ ಮಂಗಳವಾರ ಹಮ್ಮಿಕೊಂಡಿದ್ದ ರೇಷ್ಮೆ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಬೆಳೆಗಾರರು ರೀಲರ್‌ಗಳಾಗಲು ಸಾಕಷ್ಟು ಅವಕಾಶಗಳಿದ್ದು, ಮಕ್ಕಳನ್ನು ಉದ್ಯಮಿಯನ್ನಾಗಿ ಮಾಡುವುದರ ಜತೆಗೆ ನಿರುದ್ಯೋಗಿಗಳಿಗೆ ಕೆಲಸ ನೀಡಬಹುದು ಎಂದು ತಿಳಿಸಿದರು. 
ಬೆಳೆಗಾರರು ಮುಂದೆ ಬಂದು ಕ್ಲಸ್ಟರ್ ಮಾಡಿದರೆ ಎಂಎಸ್‌ಎಂಇ ವತಿಯಿಂದ ಸಬ್ಸಿಡಿದರದಲ್ಲಿ ಲೋನ್ ದೊರೆಯುತ್ತದೆ. ಇದರಿಂದ ಬದುಕು ಹಸನು ಮಾಡಿಕೊಳ್ಳಬಹುದು. ರೇಷ್ಮೆ ಸೀರೆ ಖರೀದಿಗಾಗಿ ಜಿಲ್ಲೆಯಿಂದ ಕಂಚಿಗೆ ಹೋಗುತ್ತಾರೆ. ಅಂತಹ ಮಳಿಗೆ ನಿರ್ಮಾಣ ಜಿಲ್ಲೆಯಲ್ಲೆ ಮಾಡಿದರೆ ಅನುಕೂಲವಾಗಲಿದೆ. ಇದಕ್ಕೆ ಸಂಬಂಧ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದರೆ ಸಚಿವರ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
* ಆಹಾರಕ್ಕಾಗಿ ಮಹಾಯುದ್ಧ ನಡೆದರು ಆಶ್ವರ್ಯವಿಲ್ಲ
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ರೈತ ಬೆಳೆಯುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ದೊರೆಯದೆ ಇರುತ್ತಿರುವುದನ್ನು ನೋಡಿದರೆ ನೋವಾಗುತ್ತದೆ. ರೈತ ಬೆಳೆದ ಬೆಳೆಗೆ ರೈತನೇ ಬೆಲೆ ನಿಗಽ ಮಾಡುವ ಕಾನೂನು ಜಾರಿಯಾಗಬೇಕಾಗಿದೆ ಎಂದು ಹೇಳಿದರು.
ರೈತರ ಸಮಸ್ಯೆಗಳನ್ನು ಬಗೆಹರಿಯುವ ಕಾಲವು ಖಂಡಿತ ಬದಲಾಗುತ್ತದೆ. ರೇಷ್ಮೆ ಕೃಷಿಯು ಜಿಲ್ಲೆಯಲ್ಲಿ ಮಂಚೂಣಿಯಲ್ಲಿ ನಡೆಯುತ್ತಿದೆ. ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಿದರೆ ಬೆಳೆಗಾರರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.
 ಶಾಸಕನಾಗಿಯೂ ಮೊದಲ ಸೇವೆ ರೈತರಿಗೆ. ರೈತರು ಏನಾದರು ತಮ್ಮ ಕೆಲಸವನ್ನು ನಿಲ್ಲಿಸಿ ಆಹಾರ ಉತ್ಪಾದನೆ ಮಾಡದಿದ್ದರೆ ಮಹಾ ಯುದ್ಧ ಆಗುವುದಾದರೆ ನಡೆಯುವುದು ಊಟಕ್ಕಾಗಿಯೇ. ಕೊರೊನಾ ಸಂದರ್ಭದಲ್ಲಿ ಹತ್ತಿರ ದುಡ್ಡು ಇಟ್ಟುಕೊಂಡು ಪರದಾಡಿದ್ದು ಆಹಾರಕ್ಕಾಗಿಯೇ ಎಂದು ಹೇಳಿದರು.
ಕೋವಿಡ್ ಕಾಲದಲ್ಲಿ ವೈದ್ಯರು ಜೀವನ ರಕ್ಷಣೆ ಮಾಡಿರಬಹುದು. ಆದರೆ ಉಚಿತವಾಗಿ ತರಕಾರಿಯನ್ನು ಮನೆಮನೆ ಬಾಗಿಲಿಗೆ ತಲುಪಿಸಿ ನಮ್ಮೆಲ್ಲರನ್ನು ಹಸಿವು ಮುಕ್ತರನ್ನಾಗಿ ಮಾಡಿದ್ದು ರೈತರು ಎಂದು ಸ್ಮರಿಸಿದರು.
* ಸರ್ಕಾರ ಅವಕಾಶ ಮಾಡಿಕೊಡಬೇಕು
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ರೈತರು ಗೌರವವಾಗಿ ಬದುಕು ನಡೆಸಲು ಸರ್ಕಾರಗಳು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಹೇಳಿದರು.
ರೇಷ್ಮೆ ಬೆಳೆಗಾರರಿಗೆ ಯಂತ್ರೋಪಕರಣ ಕಲ್ಪಿಸುವ ಕುರಿತು ಕೇಂದ್ರದಿಂದಲೇ ತೀರ್ಮಾನವಾಗಿದ್ದು, ರಾಜ್ಯಕ್ಕೆ ಏನು ಅಽಕಾರವಿಲ್ಲದಂತೆ ಮಾಡಿದ್ದಾರೆ. ಅದು ಕೇಂದ್ರಿಕೃತವಾಗಿದೆ. ಯಾರೊ ಒಬ್ಬರು ಟೆಂಡರ್ ಪಡೆದುಕೊಂಡು ಸರಬರಾಜು ಮಾಡುವುದರಿಂದ ರೈತರು ಸಮಸ್ಯೆ ಎದುರಿಸಿದಂತಾಗುತ್ತಿದೆ ಎಂದು ತಿಳಿಸಿದರು.
ಹಿಂದೆ ದೇಶದಲ್ಲಿ ನಮಗೆ ಬೇಕಾದರೆ ಆಹಾರ ಬೆಳೆಸಿಕೊಳ್ಳಲು ಆಗುತ್ತಿರಲಿಲ್ಲ. ಆಗ ವಿದೇಶದಿಂದ ತರಿಸಿಕೊಳ್ಳಲಾಗುತ್ತಿತ್ತು. ಪರಿಸ್ಥಿತಿಯನ್ನು ಅರಿತು ಬೆಳೆದ ಆಹಾರ ರೈತ ತನಗೆ ಉಳಿಸಿಕೊಂಡು ಮಾರಾಟ ಬೇಕಾಗಿತ್ತು. ಖಾಸಗಿ ಕಂಪನಿಗಳು ತಯಾರಿಸುವ ವಸ್ತುವಿಗೆ ಬೆಲೆ ಇದೆ. ರೈತ ಬೆಳೆಯುವ ಬೆಳೆಗೆ ಬೆಲೆ ನಿಗಽ ಮಾಡಲು ಕೇಂದ್ರದಲ್ಲಿ ಅಧ್ಯಯನ ನಡೆಬೇಕಾಗಿದೆ. ಇದಕ್ಕೆ ಬೆಲೆ ನಿಗಧಿ ಆಯೋಗ ರಚನೆಯಾಗಬೇಕಿದೆ ಎಂದು ತಿಳಿಸಿದರು.
*ಬಹು ಬೆಳೆ ಪದ್ದತಿ ಅಳವಡಿಸಿಕೊಳ್ಳಿ
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ರೈತರು ಏಕ ಬೆಳೆ ಪದ್ದತಿ ಬಿಟ್ಟು ಬಹು ಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕ ನಿರ್ವಹಣಾ ಕ್ರಮ ಅನುಸರಿಸಿದರೆ ರೋಗಳನ್ನು ಹತೋಟಿಗೆ ತಂದು ಉತ್ತಮ ಇಳುವರಿಗಳಿಸಬಹುದು. ಈ ಬಗ್ಗೆ ಇದಕ್ಕೆ ಗ್ರಾಮಮಟ್ಟದಿಂದ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು. 
ಜಿಲ್ಲೆಯಲ್ಲಿ ಬಹುತೇಕ ರೈತರು ಟೊಮ್ಯಾಟೊ ಬೆಳೆಗೆ ಮಾರು ಹೋಗಿದ್ದು, ನಷ್ಟವಾಗುತ್ತಿದ್ದರು ಸಹ ಅದೇ ಬೆಳೆನ ಬೆಳೆಯುತ್ತಾರೆ. ಯಾಕೆಂದರೆ ದುಡ್ಡು ಮಾಡುವ ಆಸೆ. ಆದರೆ ರೇಷ್ಮೆ ಬೆಳೆಯು ಅಗಲ್ಲ, ಗೂಡಿಗೆ ಮಾರುಕಟ್ಟೆಯಲ್ಲಿ ನಿರಂತರ ದರ ದೊರೆಯುವುದರಿಂದ ಲಾಭಗಳಿಸಲು ಸಾಧ್ಯವಾಗುತ್ತಿದೆ ಎಂದರು.
* ರೈತರ ಭದ್ರತೆಗಾಗಿ ಸೌಲಭ್ಯ ಕಲ್ಪಿಸಿ
ಸಂಘದ ಅಧ್ಯಕ್ಷ ಕೆ.ವಿ.ಸತೀಶ್ ಮಾತನಾಡಿ, ರೇಷ್ಮೆಯು ದೇಶದ ಸಂಸ್ಕೃತಿ ಹಾಗೂ ಪರಂಪರೆಯಾಗಿದೆ. ಇದನ್ನು ಬೆಳೆಯುವುದು ಉದ್ಯಮಿಗಳಲ್ಲ. ಸಾಮಾನ್ಯ ರೈತರು. ಈ ಕೃಷಿಯು ಯುವಕರಿಗೆ ಕೆಲಸ ಗಿಟ್ಟಿಸುತ್ತದೆ. ಇದರ ಹಿಂದೆ ಹಲವು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಆದರೆ ಭದ್ರತೆಯಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ಸರ್ಕಾರದಿಂದ ದೊರಕಿಸುತ್ತಿರುವ ಸಾಲದ ಸೌಲಭ್ಯದ ಮೊತ್ತವನ್ನು ಹೆಚ್ಚಿಸಬೇಕು, ಈ ಭಾಗದಲ್ಲಿ ಕಾಂತರಾಜ ವೃತ್ತದಲ್ಲಿ ಸೀಲ್ಕ್ ಮ್ಯೂಸಿಯಂ ಸ್ಥಾಪನೆ ಮಾಡಬೇಕು. ಅತ್ಯಾಧುನಿಕ ಲ್ಯಾಬ್ ನಿರ್ಮಾಣ ಹಾಗೂ ಕೆಜಿ ಗೂಡಿಗೆ ನೀಡುತ್ತಿರುವ ಸಹಾಯಧನ ಹೆಚ್ಚಿಸಬೇಕು. ಈ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು ಎಂದು ಕೋರಿದರು. 
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿ ಜಂಟಿ ಕಾರ್ಯದರ್ಶಿ ನರೇಶ್ ಬಾಬು, ರೇಷ್ಮೆ ಇಲಾಖೆ ಉಪನಿರ್ದೇಶಕ ಆಂಜನೇಯರೆಡ್ಡಿ, ಗೂಡು ಮಾರುಕಟ್ಟೆ ಉಪ ನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಕೃಷಿಕ ಸಮಾಜ ಅಧ್ಯಕ್ಷ ಡಿ.ಎಲ್.ನಾಗರಾಜ್, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ಎಚ್.ವಿ.ರಮೇಶ್ ಮತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net