ಮಂಚಹಳ್ಳಿಯಲ್ಲಿ ರಸ್ತೆ ವಿವಾದ ಅಂತ್ಯ

ಬಂಗಾರಪೇಟೆ ತಾಲೂಕಿನಮಂಚಹಳ್ಳಿಗೆ ತಹಸೀಲ್ದಾರ್​ ಕೆ.ಎನ್​. ಸುಜಾತಾ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್​ ನಿರೀಕ್ಷಕ ಸಿ.ರವಿಕುಮಾರ್​, ಉಪನಿರೀಕ್ಷಕ ರಾಜಣ್ಣ, ಉಪತಹಸೀಲ್ದಾರ್​ ಪ್ರಭಾಗರನ್​, ಮಾವಹಳ್ಳಿ ಗ್ರಾಪಂ ಪಿಡಿಒ ಉದಯಕುಮಾರ್​, ಕಂದಾಯ ನಿರೀಕ್ಷಕ ಪವನ್​ ಕುಮಾರ್​, ಸರ್ವೆಯರ್​ ಅಪ್ತಬ್​ ಅಹಮದ್​ ಅಮೀರ್​ ಇದ್ದರು.
ಬಂಗಾರಪೇಟೆ ತಾಲೂಕಿನಮಂಚಹಳ್ಳಿಗೆ ತಹಸೀಲ್ದಾರ್​ ಕೆ.ಎನ್​. ಸುಜಾತಾ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್​ ನಿರೀಕ್ಷಕ ಸಿ.ರವಿಕುಮಾರ್​, ಉಪನಿರೀಕ್ಷಕ ರಾಜಣ್ಣ, ಉಪತಹಸೀಲ್ದಾರ್​ ಪ್ರಭಾಗರನ್​, ಮಾವಹಳ್ಳಿ ಗ್ರಾಪಂ ಪಿಡಿಒ ಉದಯಕುಮಾರ್​, ಕಂದಾಯ ನಿರೀಕ್ಷಕ ಪವನ್​ ಕುಮಾರ್​, ಸರ್ವೆಯರ್​ ಅಪ್ತಬ್​ ಅಹಮದ್​ ಅಮೀರ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಂಚಹಳ್ಳಿಯಲ್ಲಿ ರಸ್ತೆ ವಿವಾದ ಅಂತ್ಯ
ಮಂಚಹಳ್ಳಿಯಲ್ಲಿ ರಸ್ತೆ ವಿವಾದ ಅಂತ್ಯ
ಬಂಗಾರಪೇಟೆ: ಮಂಚಹಳ್ಳಿಯಲ್ಲಿದ್ದ ಹಲವು ವರ್ಷಗಳ ರಸ್ತೆ ವಿವಾದಕ್ಕೆ ತಾಲೂಕು ಆಡಳಿತ ಅಂತ್ಯ ಹಾಡಿದೆ. ವಿವಾದ ಸಂಬಂಧ ಖಾಸಗಿಯವರು ಉಪಲೋಕಾಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್​ ಕೆ.ಎನ್​.ಸುಜಾತಾ ಅವರು ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೇ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲಿಸಿದರು.
ಮಾವಹಳ್ಳಿ ಗ್ರಾಪಂ ವ್ಯಾಪ್ತಿಯ ಮಂಚಹಳ್ಳಿಗೆ ಹರಟಿ-ಮಾವಹಳ್ಳಿ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 60&-70 ವರ್ಷಗಳಿಂದ ರಸ್ತೆ ಬಳಕೆಯಲ್ಲಿದೆ. ಸರ್ಕಾರ ಹಾಗೂ ಗ್ರಾಪಂನಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಅರಣ್ಯ ಇಲಾಖೆಯು 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಎರಡೂ ಬದಿ ಮರನೆಟ್ಟು ಬೆಳೆಸಿದೆ. ಆದರೆ, ಗ್ರಾಮದ ಅಮರನಾರಾಯಣ ಹಾಗೂ ಹೊನ್ನೇನಹಳ್ಳಿ ಕೃಷ್ಣಮೂರ್ತಿ ಎಂಬುವವರು "ಸರ್ಕಾರಿ ನಕ್ಷೆಯಲ್ಲಿರುವ ಬಂಡಿ ರಸ್ತೆಯನ್ನೇ ಅಭಿವೃದ್ಧಿಪಡಿಸಬೇಕು' ಎಂದು ರಾಜ್ಯ ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಗ್ರಾಮಸ್ಥರ ವಾದ: ಗ್ರಾಮದ ಸರ್ವೇ ನಂ. 2, 73 ಮತ್ತು 74ರ ಜಮೀನುಗಳಲ್ಲಿ ಬಂಡಿ ರಸ್ತೆ ಇರುವುದಾಗಿ ನಕ್ಷೆಯಲ್ಲಿದ್ದರೂ, ಅದಕ್ಕೆ ಕೇವಲ 100 ಮೀಟರ್​ ದೂರದಲ್ಲೇ ವಾಡಿಕೆ ರಸ್ತೆ ಇದೆ. ಹೀಗಾಗಿ ಹೊಸ ರಸ್ತೆ ನಿಮಾರ್ಣದ ಅಗತ್ಯವಿಲ್ಲ ಎಂಬುದು ಗ್ರಾಮಸ್ಥರ ನಿಲುವಾಗಿದೆ. ಪರಿಶೀಲನೆ ವೇಳೆ, ಅರ್ಜಿದಾರ ಅಮರನಾರಾಯಣ ಅವರ ಜಮೀನಿಗೆ ಸರ್ಕಾರಿ ನಕ್ಷೆ ಪ್ರಕಾರ ನೇರ ರಸ್ತೆ ಇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಸ್ತುತ ಇರುವ ರಸ್ತೆಯಿಂದ ಅರ್ಜಿದಾರರ ಜಮೀನಿಗೆ ಸಂಪರ್ಕ ಕಲ್ಪಿಸಬೇಕಾದರೆ ಸುಮಾರು 300 ಮೀಟರ್​ ಹೊಸ ರಸ್ತೆ ನಿರ್ಮಿಸಬೇಕಾಗುತ್ತದೆ. ಇದರ ಮಧ್ಯೆ ಖಾಸಗಿ ರೈತರ ಜಮೀನುಗಳು ಬರುವುದರಿಂದ, ಸಂಬಂಧಿತ ರೈತರು ಜಮೀನಿನ ಹಕ್ಕು ಬಿಟ್ಟುಕೊಟ್ಟರೆ ರಸ್ತೆ ನಿಮಾರ್ಣ ಸಾಧ್ಯ ಎಂದು ತಹಸೀಲ್ದಾರ್​ ಅರ್ಜಿದಾರರು ಹಾಗೂ ಗ್ರಾಮಸ್ಥರಿಗೆ ಮನವೊಲಿಸಿ ಸಮಸ್ಯೆ ಬಗೆಹರಿಸಿದರು.
ಹೈಕೋರ್ಟ್​ನಲ್ಲಿ ಪ್ರಕರಣ: ಹಲವು ದಶಕಗಳಿಂದ ಬಳಕೆಯಲ್ಲಿರುವ ರಸ್ತೆಯನ್ನೇ ಸರ್ಕಾರಿ ನಕ್ಷೆಗೆ ಸೇರಿಸಿ, ಪಥ ಬದಲಾವಣೆ ಮಾಡುವಂತೆ ಗ್ರಾಮಸ್ಥರು ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತು ಚರ್ಚೆ ನಡೆಯಿತು. ಈ ಬಗ್ಗೆ ಪರಿಶೀಲಿಸಿ ಸೂಕ್ತ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ತಾಲೂಕು ಆಡಳಿತ ಶೀಘ್ರವರದಿ ಸಿದ್ಧಪಡಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
07 ಬಂಗಾರಪೇಟೆ 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net