ಕಾರ್ಯಕರ್ತೆ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಕೋಲಾರ ಜಿಲ್ಲಾಡಳಿತ ಭವನದ ಎದುರು ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೋಲಾರ ಜಿಲ್ಲಾಡಳಿತ ಭವನದ ಎದುರು ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on
ಕೋಲಾರ: ಹುಬ್ಬಳ್ಳಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸೋಮವಾರ ನಗರ ಹೊರವಲಯದ ಜಿಲ್ಲಾಡಳಿತ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಹಲ್ಲೆ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಪೊಲೀಸ್​ರು, ಕಾನೂನು ಸುವ್ಯವಸ್ಥೆ ಕಾಪಾಡದೆ ಗುಂಡಾಗಿರಿಗೆ ಶ್ರೀರಕ್ಷೆಯಾಗಿದ್ದಾರೆ. ಮಹಿಳೆಯ ಮೇಲೆ ದೌರ್ಜನ್ಯ ದರ್ಪ ತೋರಿದ ಪೊಲೀಸ್​ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದರು.
ಮೆಡಿಕಲ್​ ವಿದ್ಯಾರ್ಥಿನಿ ಪುಂಡರ ಕಿರುಕುಳದಿಂದ ಆತ್ಮಹತ್ಯೆ ಮಾಡಿ ಕೊಂಡಳು, ಓಂಶಕ್ತಿ ಮಾಲಾಧಾರಿಣಿಗಳ ಮೇಲೆ ಕಲ್ಲು ಎಸೆತ ಪ್ರಕರಣ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿದ್ದರೂ ಸಚಿವರು ಪೊಲೀಸರನ್ನು ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ರಾಜಕೀಯ ದ್ವೇಷ ತೀರಿಸಿಕೊಳ್ಳಲು ಪೊಲೀಸ್​ ಇಲಾಖೆಯನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅರುಣಮ್ಮ ಮಾತನಾಡಿ, ಹುಬ್ಬಳಿಯಲ್ಲಿ ನಡೆದ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತ ಹುಂಡಿಯವರನ್ನು ಮಧ್ಯರಾತ್ರಿ 2 ಗಂಟೆಯಲ್ಲಿ ಮನೆಗೆ ಹೋಗಿ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮಹಾತ್ಮಗಾಂಧಿಜೀಯವರ ಕನಸಿನಂತೆ ಸ್ವಾತಂತ್ರ$್ಯ ಬಂದರೂ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಮಹಿಳೆಯರನ್ನು ರಕ್ಷಿಸಬೇಕಾದ ಪೊಲೀಸರೇ ದೌರ್ಜನ್ಯ ನಡೆಸಿದರೆ ಯಾರು ರಕ್ಷಣೆ ನೀಡುತ್ತಾರೆ. ಸರ್ಕಾರ ಹಾಗೂ ಸಚಿವರು ಇದ್ದರೆಷ್ಟೂ ಹೋದರೆಷ್ಟು ಅವರ ಕೈಯಲ್ಲಿ ಮಹಿಳೆಯರಿಗೆ ರಕ್ಷಣೆ ಸಾಧ್ಯವಾಗದಿದ್ದರೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅಶ್ವಿನಿ ಸಂಪಂಗಿ ಮಾತನಾಡಿ, ಮಹಿಳೆಯರಿಗೆ ಗೌರವ ನೀಡ ಬೇಕಾದ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಒಬ್ಬ ಮಹಿಳೆ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಈ ರೀತಿ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದರು.
ಸುಜಾತ ಅವರು ಕಾಂಗ್ರೆಸ್​ ಪಕ್ಷದಲ್ಲಿದ್ದು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆಂಬ ರಾಜಕೀಯ ದ್ವೇಷಕ್ಕಾಗಿ ಆಕೆಯ ಮೇಲೆ ಕಾಂಗ್ರೆಸ್​ ಕಾಪೋರೇಟರ್​ ಸುವರ್ಣ ಎಂಬುವರು ನೀಡಿದ ಸುಳ್ಳು ಪ್ರಕರಣ ದಾಖಲಿಸಿ ದೌರ್ಜನ್ಯ ಎಸೆಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕೆಯುಡಿಎ ಮಾಜಿ ಅಧ್ಯಕ್ಷ ವಿಜಯಕುಮಾರ್​, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಸಾಮ ಅನಿಲ್​ ಬಾಬು, ಪಿ.ಶಿವಕುಮಾರ್​, ಚಂದ್ರಶೇಖರ್​, ರಾಜೇಶ್​ ಸಿಂಗ್​, , ತಿಮ್ಮರಾಯಪ್ಪ, ಶಿಳ್ಳೆಂಗೇರೆ ಮಹೇಶ್​, ಓಹಿಲೇಶ್​, ಅಂಬರೀಷ್​, ಮಮತಮ್ಮ, ರಾಜೇಶ್ವರಿ, ಪದ್ಮ, ಸುಮ, ಸವಿತಾ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net