ಕೋಲಾರ: ಅಗಲಕೋಟೆಯಲ್ಲಿ ಶಾಲೆಗೆ ದಾನವಾಗಿ ನೀಡಿದ್ದ 50 ಎಕರೆ ಜಮೀನನ್ನು ಕಬಳಿಸಲು ಕೆಲವರು ಯತ್ನಿಸಿದ್ದು, ಅದನ್ನು ರಕ್ಷಿಸಿ ವಾಪಸ್ ಪಡೆಯಬೇಕು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಬುಧವಾರ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿದರು.
ಜಮೀನು ಸಂಬಂದ ನೆ, ದಾಖಲೆಗಳ ಸಮೇತ ಭೇಟಿ ಮಾಡಿರುವ ಸುರೇಶ್ ಕುಮಾರ್, ಮಾಹಿತಿ ನೀಡಿ ರಕ್ಷಣೆಗೆ ಒತ್ತಾಯಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಅಗಲಕೋಟೆ ಪ್ರಕರಣ ಈಗಾಗಲೇ ನಮ್ಮ ಗಮನದಲ್ಲಿದ್ದು, ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ವಕೀಲ ಕೃಷ್ಣಪ್ಪ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ ಮತಿತರರಿದ್ದರು.
* ಜಮೀನು ಉಳಿಸಲು ಸತತ ಪ್ರಯತ್ನ
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಶ್ರೀನಿವಾಸಲು ಎಂಬುವರು 1955ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ 50 ಎಕರೆ 26 ಗುಂಟೆ ಜಮೀನನ್ನು ದಾನ ಮಾಡಿದ್ದರು. ಆ ಜಾಗದ ಮೇಲೆ ರಿಯಲ್ ಎಸ್ಟೇಟ್ ಶಕ್ತಿಗಳ ಕಣ್ಣು ಬಿದಿದ್ದು, ಪರಭಾರೆಯಾಗುತ್ತದೆ. ಈ ಕುರಿತು ಶಿಕ್ಷಣಾಧಿಕಾರಿಗಳು ಸಹ ತಹಶೀಲ್ದಾರ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದರು.
ವಿಧಾನಸಭೆ ಅರ್ಜಿ ಸಮಿತಿಯಲ್ಲಿ ನಾನು ಸದಸ್ಯನಾಗಿದ್ದು, ಮುಂದಿನ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಜಮೀನು ಉಳಿಸಲು ಪ್ರಯತ್ನಿಸುತ್ತೇನೆ. ಮೂಲ ದಾನಿಗಳ ಉದ್ದೇಶವನ್ನು ಸಫಲಗೊಳಿಸಬೇಕು. ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಜಾಗ ಬಳಕೆಯಾಗಬೇಕು ಹೊರತು, ಬೇರೆ ಯಾವುದೇ ಉದ್ದೇಶಕ್ಕೆ ಆಗಬಾರದು. ಜಿಲ್ಲಾಧಿಕಾರಿಗೆ ಈ ವಿಚಾರ ಗಮನಕ್ಕೆ ತರಲಾಗಿದ್ದು, ರಸುವ ಭರವಸೆ ನೀಡಿದ್ದಾರೆ ಎಂದರು.
ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಅವರು ಕೇಳಿದ ಪ್ರಶ್ನೆಗೆ ಸಚಿವ ಕೃಷ್ಣಬೈರೇಗೌಡರಿಂದ ಸತ್ಯಕ್ಕೆ ದೂರದ ಉತ್ತರ ಸಿಕ್ಕಿದೆ. ಈ ವಿಚಾರವನ್ನೂ ಸಮಿತಿ ಮುಂದೆ ಪ್ರಸ್ತಾಪಿಸುತ್ತೇನೆ. ನ್ಯಾಯಾಲಯದಲ್ಲೂ ಹೋರಾಡಲು ಸಿದ್ಧ ಎಂದರು.
* ಮಂಜೂರಾಗಿರುವುದೇ ಬೋಗಸ್
ಮಾಲೂರಿನ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಮಾತನಾಡಿ, ಸುಮಾರು 200 ಕೋಟಿ ಮೌಲ್ಯದ ಅವ್ಯವಹಾರವಿದೆ. ಬರೀ 50 ಎಕರೆ ಅಲ್ಲ ಇಲ್ಲಿರುವ 250 ಎಕರೆಯೂ ಸಮಸ್ಯೆಯಾತ್ಮಕವಾಗಿದೆ. ಮಂಜೂರಾಗಿರುವುದೇ ಬೋಗಸ್, ಇನಾಂ ಡಿ.ಸಿ ಆದೇಶವೂ ಬೋಗಸ್ ಎಂದು ಆರೋಪಿಸಿದರು.
ಈ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದವರಾರು ಎಂಬುದು ಗೊತ್ತಾಗಬೇಕು. ಕಂದಾಯ ಸಚಿವ ಕೃಷ್ಣ್ಣಬೈರೇಗೌಡ ಇಂಥ ವಿಚಾರಕ್ಕೆ ಕೈಹಾಕುವವರಲ್ಲ. ಇಲಾಖೆಯಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ಅಂಥವರ ಕೈಯಲ್ಲಿ ಸುಳ್ಳು ಹೇಳಿಸಿದ್ದಾರೆ. ಶ್ರೀನಿವಾಸಪುರದಲ್ಲಿ ಕೆ.ಆರ್.ರಮೇಶ್ ಕುಮಾರ್ ಜಮೀನು ಖರೀದಿಸಿದ್ದರೂ ಅದು ಅರಣ್ಯಕ್ಕೆ ಸೇರಿದ ಜಮೀನು ಎಂದು ವಾಪಸ್ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಇದೇ ರೀತಿ ಅದೆಷ್ಟೊ ಮಂದಿ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದರೂ ಅದರ ತಂಟೆಗೆ ಯಾರೂ ಹೋಗಿಲ್ಲ. ರಮೇಶ್ ಕುಮಾರ್ ದುಡ್ಡು ಕೊಟ್ಟಿದ್ದರೆ ಕೆಳಗಿನ ಮಟ್ಟದಲ್ಲಿಯೇ ಸರಿ ಹೋಗುತಿತ್ತು. ಆದರೆ, ಅವರು ಕೊಡಲಿಲ್ಲ. ಹೀಗಾಗಿ, ನ್ಯಾಯಾಲಯ ಹಂತದವರೆಗೆ ಹೋಯಿತು ಎಂದರು.