ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು

ತೊಟ್ಲಿ ಗ್ರಾಮ ಪಂಚಾಯಿತಿ ಕಚೇರಿ.
ತೊಟ್ಲಿ ಗ್ರಾಮ ಪಂಚಾಯಿತಿ ಕಚೇರಿ.
Published on
ಕೋಲಾರ: ತೊಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ ಆದೇಶಗಳಿಗೆ ಕಿಮ್ಮತ್ತಿಲ್ಲದಂತಾಗಿದ್ದು, ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ ತಾವು ಮಾಡಿದ್ದೇ ಕೆಲಸ ಎಂಬಂತಾಗಿದೆ.
ಪಿಡಿಒ ಸೇರಿ ಇತರ ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಆಗಮಿಸುವುದಿಲ್ಲ, ಸೇವೆ ಕೋರಿ ಸಾರ್ವಜನಿಕರು ಕಚೇರಿಗೆ ಬಂದರೆ ಅರ್ಜಿ ಸ್ವೀಕರಿಸುವವರು ಇರುವುದಿಲ್ಲ. ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯವೈಖರಿಗೆ ಅಸಮಾಧಾನಗೊಂಡ ನಾಗರಿಕರು ಪದೇಪದೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಇಲ್ಲಿನವರು ಬದಲಾಗಿಲ್ಲ. ಕ್ಷೇತ್ರದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ಹೆಚ್ಚು ದೂರುಗಳು ಬಂದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದು ಸೂಕ್ತ ಅಧಿಕಾರಿ ನೇಮಕ ಮಾಡಲು ಶಿಫಾರಸು ಮಾಡಿದ್ದಾರೆ. ಆದರೂ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಜಾಗ ಬಿಟ್ಟುಕೊಡದೆ ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಇರುವ ಪಿಡಿಒ ಅಶ್ವಿನಿಸಾರ್ವಜನಿಕರಿಗೆ ಲಭ್ಯವಾಗುವುದಿಲ್ಲ, ಕಡತ, ಚೆಕ್ ಪ್ರತಿಗಳಿಗೆ ಸಹಿ ಹಾಕಬೇಕಾದರೆ, ಅವರು ಇರುವ ಸ್ಥಳಕ್ಕೆ ಎಸ್‌ಡಿಎ ನಾಗರಾಜ್ ಪುಸ್ತಕ, ಕಡತಗಳನ್ನು ತೆಗೆದುಕೊಂಡು ಹೋಗಿ ಸಹಿ ಹಾಕಿಸಿಕೊಂಡು ಬರಬೇಕು. ದ್ವಿತೀಯ ದರ್ಜೆ ಸಹಾಯಕ ನಾಗರಾಜ್ ಅವರ ಮೂಲ ಕಾರ್ಯಕ್ಷೇತ್ರ ಅರಾಭಿಕೊತ್ತನೂರು ಪಂಚಾಯಿತಿ ಆಗಿದ್ದರೂ ಅಲ್ಲಿಂದ ವಕ್ಕಲೇರಿ ಪಂಚಾಯಿತಿಗೆ ವರ್ಗಾವಣೆಯಾಗಿ ಆದೇಶವಾಗಿದ್ದರೂ ತೊಟ್ಟಿಯಲ್ಲೇ 3 ವರ್ಷದಿಂದ ಮುಂದುವರಿದಿದ್ದಾರೆ.
ಜತೆಗೆ ಬಿಲ್‌ಕಲೆಕ್ಟರ್ ನಾರಾಯಣಸ್ವಾಮಿ 2021ರ ಜು.21ರಂದು ನಿವೃತ್ತರಾಗಿದ್ದರೂ ಅವರನ್ನೂ ಸರ್ಕಾರದ ಅನುಮತಿ ಇಲ್ಲದೇ ಬಿಲೆಕಲೆಕ್ಟ‌ರ್ ಹುದ್ದೆಯಲ್ಲಿ ಮುಂದುವರಿಸಿಕೊಂಡು ಬಂದಿದ್ದು, ಪುಸ್ತಕ ಬರೆಯುವುದು ಸೇರಿ ಕಚೇರಿಯಲ್ಲಿರುವ ದಾಖಲೆಗಳಿರುವ ಬೀರುವಿನ ಬೀಗದ ಕೀಗಳನ್ನು ನಿವೃತ್ತ ಸಿಬ್ಬಂದಿ ಕೈಗೆ ನೀಡಲಾಗಿದೆ. ಮೇಲಧಿಕಾರಿಗಳು ಮಧ್ಯ ಪ್ರವೇಶಿಸಿ ಪಂಚಾಯಿತಿಯ ಅವ್ಯವಸ್ಥೆ ಸುಧಾರಣೆಗೊಳಿಸಿ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆ ದೊರೆಯುವಂತೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಗೊಂದಲಕ್ಕೆ ತೆರೆ
ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿರುವ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಅವರು ಮತ್ತೊಂದು ಆದೇಶ ಹೊರಡಿಸಿ, ಅಶ್ವಿನಿ ಅವರನ್ನು ಚನ್ನಸಂದ್ರ ಗ್ರಾಪಂಗೆ ವರ್ಗಾವಣೆ ಮಾಡಿದ್ದು, ಸೀತಿ ಗ್ರಾಪಂ ಪ್ರಭಾರದ ಜತೆಗೆ ಸೋಮಶೇಖರ್ ಅವರ ಮೂಲ ಕರ್ತವ್ಯ ಸ್ಥಳ ತೊಟ್ಟಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದು, ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದ್ದು, ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ನಿವೃತ್ತ ಸಿಬ್ಬಂದಿಗೆ ಪಂಚಾಯಿತಿ ಜವಾಬ್ದಾರಿ
ನಿವೃತ್ತ ಬಿಲ್ ಕಲೆಕ್ಟರ್ ನಾರಾಯಣಪ್ಪ ಆಕ್ಷೇಪದಲ್ಲಿದ್ದ ಜಾಗಗಳಿಗೆ ಇ-ಸ್ವತ್ತು ದಾಖಲೆ ಸೃಜನೆ ಮಾಡಿ, ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟ ಆರೋಪ ಕೇಳಿ ಬಂದಿದೆ. ಇದನ್ನೆಲ್ಲ ಎಸ್‌ಡಿಯ ನೌಕರ ನಾಗರಾಜ್ ಹಾಗೂ ನಾರಾಯಣಪ್ಪ ಸೇರಿ ಮಾಡಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ತೊಟ್ಟಿಯಿಂದ ವರ್ಗಾವಣೆ ಮಾಡಿ ಹೊಸಬರನ್ನು ನಿಯೋಜಿಸಿದರೆ ಪಂಚಾಯಿತಿ ಅವ್ಯವಸ್ಥೆ ಸರಿಪಡಿಸಬಹುದಾಗಿದೆ.
ಇಬ್ಬರು ಪಿಡಿಒಗಳಿಂದ ಸಹಿ
ಗ್ರಾಪಂ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರಿಗೆ ದೂರು ಬಂದಿದ್ದು, ಅದರಂತೆ ತೊಟ್ಟಿ ಗ್ರಾಪಂ ಸೋಮಶೇಖರ್ ಆರಾಧ್ಯ ಅವರನ್ನು ವರ್ಗಾವಣೆ ಮಾಡುವಂತೆ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಪಂ ಸಿಇಒಗೆ 2026 ಜೂ.19ರಂದು ಪತ್ರ ಬರೆದಿದ್ದರು. ಪತ್ರಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಅವರು ಸೋಮಶೇಖರ್ ಆರಾಧ್ಯ ಅವರನ್ನು ವರ್ಗಾವಣೆ ಮಾಡಿ ಜೂ.29ರಂದು ಆದೇಶಿಸಿದ್ದಾರೆ. ಕೆಲ ದಿನ ಕಳೆದರೂ ಪಿಡಿಒ ಅಶ್ವಿನಿ ಹಾಗೂ ಸೋಮಶೇಖ‌ರ್ ಆರಾಧ್ಯ ಕಚೇರಿಗೆ ಭೇಟಿ ನೀಡಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿರುವುದು ಗೊಂದಲಕ್ಕೆ ಕಾರಣವಾಗಿತ್ತು.
ತೊಟ್ಲಿ ಗ್ರಾಪಂನಲ್ಲಿ ಸರ್ಕಾರದ ಆದೇಶಗಳಿಗೆ ಕಿಮ್ಮತ್ತಿಲ್ಲ. ಇದಕ್ಕೆಲ್ಲ ತಾಪಂ ಅಧಿಕಾರಿಗಳು ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಪಂಚಾಯಿತಿಯಲ್ಲಿ ಟಿಕಾಣಿ ಹೂಡಿದವರ ವಿರುದ್ಧ ಕಠಿಣ ಕ್ರಮಜರುಗಿಸಬೇಕು.
- ರಮೇಶ್ ಗ್ರಾಮಸ್ಥ, ತೊಟ್ಲಿ
ಆರೋಪಗಳೇನು...?
- ನಿವೃತ್ತಿಯಾದರು ಪಂಚಾಯಿತಿ ಸಭೆಗಳಲ್ಲಿ ಭಾಗಿ
- ಗ್ರಾಮ ಪಂಚಾಯಿತಿ ಖಾತೆ ಪುಸ್ತಕದಲ್ಲಿ 9-10 ತಿದ್ದುಪಡಿ ಮಾಡುವುದು
- ಸರ್ಕಾರಿ ಜಮೀನು, ಗ್ರಾಮ ಠಾಣಾ ಜಾಗಗಳಿಗೆ ಖಾತೆ ನೀಡುವುದು
- ಸರ್ಕಾರಿ ಜಮೀನುಗಳಿಗೆ ಇ-ಸ್ವತ್ತು ನೀಡಿರುವುದು
- ಪ್ರಭಾವಿ ವ್ಯಕ್ತಿಗಳ ಮನೆಗಳಲ್ಲಿ ಖಾತೆ ಸಾಗಿಸುವ ದಂಧೆ ಆರೋಪ
- ಅಭಿವೃದ್ಧಿ ಕೆಲಸ ಆಗದಿದ್ದರೂ ಬಿಲ್ ಪಾವತಿ ಮಾಡಿರುವುದು
- ನಿವೃತ್ತ ಸಿಬ್ಬಂದಿ ಪಂಚಾಯಿತಿ ಕೆಲಸದಲ್ಲಿ ತೊಡಗಿಸಿಕೊಂಡಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net