ಒಎಂಆರ್ ತಿದ್ದಿ ನೌಕರಿ?

ಕೋಮುಲ್ ಕಚೇರಿ.
ಕೋಮುಲ್ ಕಚೇರಿ.
Published on
ಕಿರುವಾರ ಸುದರ್ಶನ್ ಕೋಲಾರ
ತಿದ್ದಿರುವ ಒಎಂಆರ್ ಶೀಟ್‌ಗಳು ವೈರಲ್ ಆಗಿರುವ ಹಿನ್ನೆಲೆಯಲ್ಲಿ ರಾಜಕೀಯ, ಅಧಿಕಾರ, ಹಣ ಬಲ ಬಳಸಿಕೊಂಡು ಕೋಮುಲ್‌ನಲ್ಲಿ ನೌಕರಿ ಗಿಟ್ಟಿಸಿಕೊಂಡಿರುವ ಅಭ್ಯರ್ಥಿಗಳಿಗೆ ಈಗ ಸಂಕಷ್ಟ ಎದುರಾಗಿದೆ. ಪರೀಕ್ಷೆ ಬರೆದು ಹುದ್ದೆಗೆ ಆಯ್ಕೆಯಾದ ಒಟ್ಟು 75 ಮಂದಿ ಅಭ್ಯರ್ಥಿಗಳ ಪೈಕಿ 28 ಅಭ್ಯರ್ಥಿಗಳ ಒಎಂಆರ್ ತಿದ್ದುಪಡಿ ಮಾಡಲಾಗಿದೆ ಎಂದು ಒಎಂಆರ್ ಸಮೇತ ಸಾಮಾಜಿಕ ಹೋರಾಟಗಾರ ಗೂಳಿಗಾನಹಳ್ಳಿ ನಾಗರಾಜ್ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದು, ನೌಕರರಲ್ಲಿ ಭಯ ಶುರುವಾಗಿದೆ.
ವೈರಲ್ ಆಗಿರುವ ಓಎಂಆರ್‌ನಲ್ಲಿ ಕ್ರಮ ಸಂಖ್ಯೆ ಎರಡು ಪ್ರತಿಯಲ್ಲಿ ಒಂದೇ ಇದೇ. ಆದರೆ, ಅಕ್ಷರಗಳ ಬರವಣಿಗೆ, ಅಭ್ಯರ್ಥಿ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಸಹಿ, ಉತ್ತರಗಳನ್ನು ಭರ್ತಿ ಮಾಡಿರುವುದರಲ್ಲಿ ವ್ಯತ್ಯಾಸವಿದ್ದು, ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇದರಲ್ಲಿ ಸಹಿಗಳನ್ನೂ ಪೋರ್ಜರಿ ಮಾಡಲಾಗಿದೆ ಎಂಬ ಅನುಮಾನ ದಟ್ಟವಾಗಿದೆ.
ಆಗಿದ್ದೇನು?: 
ಹಾಲು ಒಕ್ಕೂಟ ವಿಭಜನೆಯಾಗುವ ಮುಂಚೆ ಕೋಚಿಮುಲ್‌ನಲ್ಲಿ ಖಾಲಿಯಿದ್ದ 273 ಹುದ್ದೆಗಳ ನೇರ ನೇಮಕಾತಿಗೆ 2023ರ ಸೆಪ್ಟೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿ, 75 ಹುದ್ದೆಗಳಿಗೆ 2023ರ ನವೆಂಬರ್ 5ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು, ಆದರೆ, ಪರೀಕ್ಷೆಯಲ್ಲಿ ಓಎಂಆರ್ ಶೀಟ್ ತಿದ್ದಲಾಗಿದೆ. ಅಭ್ಯರ್ಥಿಗಳಿಗೆ ನೌಕರಿ ನೀಡಲು ಒಂದು ಹುದ್ದೆಗೆ ಸುಮಾರು 30 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳೂ ಒಕ್ಕೂಟಕ್ಕೆ ಭೇಟಿ ನೀಡಿ ದಾಖಲೆ ಸಂಗ್ರಹಿಸಿದ್ದು, ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವೈ.ನಂಜೇಗೌಡ ಸೇರಿದಂತೆ ನಿರ್ದೇಶಕರ ವಿಚಾರಣೆ ನಡೆಸಿದ್ದರು. ಇದು ರಾಜಕೀಯ ವಲಯದಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ತಿದ್ದುಪಡಿ ಆಗಿರುವುದು ಏಲ್ಲಿ?
ಬೆಂಗಳೂರಿನ ಕೆಲ ಅಪಾರ್ಟ್ಮೆಂಟ್, ಪ್ರತಿಷ್ಠಿತ ಹೋಟೆಲ್ ಸೇರಿದಂತೆ ವಿವಿಧೆಡೆ ಆಡಳಿತ ಮಂಡಳಿಯವರು, ಅಧಿಕಾರಿಗಳು ಸಭೆಗಳನ್ನು ಸೇರಿ ತಮ್ಮವರಿಗೆ ಉದ್ಯೋಗ ನೀಡಲು ವ್ಯವಸ್ಥಿತವಾದ ಯೋಜನೆಯನ್ನು ರೂಪಿಸಿ, ಬೆಂಗಳೂರು ಖಾಸಗಿ ಕಂಪ್ಯೂಟರ್‌ನಲ್ಲಿ 28 ನಕಲಿ ಓಎಂಆರ್ ಶೀಟ್ ಮುದ್ರಣ ಮಾಡಿದ್ದಾರೆ. ಈ ಪ್ರತಿಗಳನ್ನು ಪರೀಕ್ಷೆಯ ನಂತರ ತಿದ್ದಿ, ಆಯ್ದ ವ್ಯಕ್ತಿಗಳಿಗೆ ಕೆಲಸ ನೀಡಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಗೂಳಿಗಾನಹಳ್ಳಿ ನಾಗರಾಜ್‌ ಕೋಲಾರ ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.
ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಸಂಭವನೀಯ ಪಟ್ಟಿಯೊಂದು ವೈರಲ್ ಆಗಿ ಈ ಪ್ರಕರಣವು ಭಾರಿ ಸದ್ದು ಮಾಡಿತ್ತು. ಸಂಭವನೀಯ ಪಟ್ಟಿಯಲ್ಲಿ ಅಭ್ಯರ್ಥಿಯ ಕಲಂನಲ್ಲಿ ಪ್ರಭಾವಿ ರಾಜಕಾರಣಿಗಳ ಇನಿಷಿಯಲ್ ನಮೂದು ಮಾಡಲಾಗಿತ್ತು. ಸೂಚಿತ ಅಭ್ಯರ್ಥಿಗೆ ಕೆಲಸ ನೀಡಬೇಕು ಎಂದು ಶಿಫಾರಸು ಮಾಡಿರುವಂತೆ ಬಿಂಬಿತವಾಗಿತ್ತು. ಅದೇ ಸಮಯದಲ್ಲಿ ಉತ್ತರ ಪತ್ರಿಕೆಗಳು ತಿದ್ದುಪಡಿಯಾಗಿರುವ ಗುಮಾನಿ ಹರಿದಾಡಿತ್ತು. ಈಗ ತಿದ್ದಿರುವ ಓಎಂಆರ್ ಶೀಟ್‌ಗಳು ವೈರಲ್ ಆಗಿರುವುದು ಅಕ್ರಮದ ಅನುಮಾನಕ್ಕೆ ಇಂಬು ನೀಡಿದೆ.
ನನಗೆ ಗೊತ್ತಿಲ್ಲ: 
ದೂರು ನೀಡಿರುವ ಕುರಿತು ಪ್ರತಿಕ್ರಿಯೆ ಕೇಳಲು ಒಕ್ಕೂಟದ ವ್ಯವಸ್ಥಾಪಕ ವಿಜಯವಾಣಿ ದೂರವಾಣಿ ಕರೆ ಮಾಡಿದರೆ, ಈ ಕುರಿತು ನಿರ್ದೇಶಕರಿಗೆ ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಯಾರಾರ ವಿರುದ್ದ ದೂರು
ಅಧ್ಯಕ್ಷರು, ನಿರ್ದೇಶಕರು, ಸಹಕಾರ ಸಂಘಗಳ ಜಂಟಿ ನಿಬಂಧಕ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ, ಕೆಎಂಎಫ್ ನಿರ್ದೇಶಕ, ಮಂಗಳೂರು ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ವಿಭಾಗ ಕುಲಸಚಿವ, ಸಹಕಾರ ಇಲಾಖೆ ಮುಖ್ಯಸ್ಥ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ, ವ್ಯವಸ್ಥಾಪಕ, ಬೆಂಗಳೂರಿನ ಓಂಎಂಆರ್ ಮುದ್ರಣದ ಮಾಲೀಕ, ನೇಮಕಾತಿ ಸಮಿತಿ ಸದಸ್ಯರು ಹಾಗೂ 75 ಮಂದಿ ಅಭ್ಯರ್ಥಿಗಳ ವಿರುದ್ಧ ದೂರು ದಾಖಲಾಗಿದೆ.
ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ದೂರು ನೀಡಿದ್ದು, ನಿರಂತರ ಹೋರಾಟ ನಡೆಸಲಾಗುವುದು.
- ನಾಗರಾಜ್, ಸಾಮಾಜಿಕ ಹೋರಾಟಗಾರ, ಗೂಳಿಗಾನಹಳ್ಳಿ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net